
ಕೆಜಿಎಫ್: ಬಂಗಾರಪೇಟೆಯ ವಿಜಯನಗರ ಬಡಾವಣೆಯಲ್ಲಿ ಇತ್ತೀಚೆಗೆ ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹1 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊರಟಿಪಾಡು ಪ್ರದೇಶದ ಚೈತನ್ಯ ಪುರದ ನಿವಾಸಿ ರಾಯಪಾಟಿ ವೆಂಕಯ್ಯ (49) ಬಂಧಿತ ಆರೋಪಿ. ಆರೋಪಿಯಿಂದ ₹1.05 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಜಯನಗರ ಬಡಾವಣೆಯ ನಿವಾಸಿ ಮತ್ತು ಚಿನ್ನದ ಅಂಗಡಿ ಮಾಲೀಕ ಕೆ.ಎಂ.ಸುನಿಲ್ ಕುಮಾರ್ ಮನೆಗೆ ಬೀಗ ಹಾಕಿದ್ದನ್ನು ಗಮನಿಸಿದ ಆರೋಪಿ ಬೀಗ ಮುರಿದು ₹1.22 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದ.
ಆರೋಪಿ ವೆಂಕಯ್ಯ ಆಂಧ್ರದ ಪಲಮನೇರು ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜೈಲಿನಲ್ಲಿ ಇದ್ದಾನೆ ಎಂಬ ಮಾಹಿತಿ ಪಡೆದು ಕಾನೂನು ಬದ್ಧವಾಗಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ ಒಡವೆಗಳನ್ನು ಗುಂಟೂರಿನಲ್ಲಿ ಮಾರಾಟ ಮಾಡಿದ್ದ. ಚಿನ್ನಾಭರಣ ಖರೀದಿಸಿದವರಿಂದ ₹1.5 ಕೋಟಿ ಮೌಲ್ಯದ 829 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.