
ಕೆಜಿಎಫ್: ಮಹಾ ಶಿವರಾತ್ರಿಯಂದು ಶಿವನ ಧ್ಯಾನ ಮತ್ತು ಆರಾಧನೆ ಜೊತೆಗೆ ಹಲವು ದೇವರ ದರ್ಶನ ಸಿಗುವ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಸಂಭ್ರಮ ಮೇಳೈಸಿದೆ. ಭಕ್ತರನ್ನು ಆಕರ್ಷಿಸಲು ದೇವಸ್ಥಾನದಲಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಮಲ್ ಉದ್ಯೋಗಿಯಾಗಿದ್ದ ಸಾಂಬಶಿವಮೂರ್ತಿ ಅವರು ಸಣ್ಣದಾಗಿ ಸ್ಥಾಪನೆ ಮಾಡಿದ್ದ ದೇವಾಲಯವು ಇಂದು ಬೃಹದಾಕಾರವಾಗಿ ಬೆಳೆದಿದ್ದು, ದೇವಾಲಯವು ರಾಜ್ಯ ಮತ್ತು ನೆರೆಯ ರಾಜ್ಯಗಳ ಭಕ್ತರನ್ನು ಸೆಳೆಯುತ್ತಿದೆ. ದೇವಾಲಯದ ಆವರಣದಲ್ಲಿರುವ 108 ಅಡಿ ಎತ್ತರದ ಶಿವಲಿಂಗ ಮತ್ತು ಅದರ ಮುಂಭಾಗದಲ್ಲಿರುವ ನಂದಿ ಇಲ್ಲಿನ ಪ್ರಮುಖ ಆಕರ್ಷಣೆ. ದೇವಾಲಯದ ಸಮುಚ್ಛಯದಲ್ಲಿ ಕೋಟಿಲಿಂಗಗಳನ್ನು ಪ್ರತಿಷ್ಠಾಪಿಸಿ, ಇಷ್ಟಾರ್ಥ ಸಿದ್ಧಿಗಳನ್ನು ಮಾಡಿಕೊಳ್ಳುತ್ತಾರೆ ಭಕ್ತರು.
ಭಕ್ತರು ತಾವು ಪ್ರತಿಷ್ಠಾಪನೆ ಮಾಡಿದ ಲಿಂಗಕ್ಕೆ ದೇವಾಲಯಕ್ಕೆ ಭೇಟಿ ನೀಡಿದಾಗ, ಪೂಜೆ ಸಲ್ಲಿಸುವುದನ್ನು ಈ ದೇವಾಲಯದಲ್ಲಿ ಪಾಲಿಸಿಕೊಂಡು ಬರಲಾಗಿದೆ.
ಶಿವರಾತ್ರಿ ಮತ್ತು ಹೊಸ ವರ್ಷದ ಮೊದಲ ದಿನದಂದು ದೇವಾಲಯಕ್ಕೆ ಭಾರಿ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಕಮ್ಮಸಂದ್ರ ಗ್ರಾಮ ಇದೀಗ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಕೋಟಿಲಿಂಗ ದರ್ಶನ ಮಾಡಿಕೊಂಡು, ಬಂಗಾರು ತಿರುಪತಿಯ ವೆಂಕಟರಮಣ ದರ್ಶನ ಮತ್ತು ಅಲ್ಲಿಂದ ಮುಳಬಾಗಲು ಆಂಜನೇಯ, ಕುರುಡುಮಲೆ ಗಣಪತಿ ದರ್ಶನ. ಹೀಗೆ, ಒಂದು ದಿನದ ಪಿಕ್ನಿಕ್‌ಗೆ ಹೇಳಿ ಮಾಡಿಸಿದ ಮಾರ್ಗವಾಗಿದೆ.
ದೇವಾಲಯದಲ್ಲಿರುವ ಪ್ರಮುಖ ಕೋಟಿಲಿಂಗೇಶ್ವರ ಸ್ವಾಮಿ ಹೊರತಾಗಿ, ಬ್ರಹ್ಮ, ವಿಷ್ಣು, ಮಹೇಶ್ವರ, ವೆಂಕಟೇಶ್ವರ, ಅನ್ನಪೂರ್ಣೆಶ್ವರಿ, ಅಯ್ಯಪ್ಪ ಸ್ವಾಮಿ, ರಾಘವೇಂದ್ರ, ಸುಬ್ರಹ್ಮಣ್ಯ ದೇವಿ, ಶ್ರೀವಳ್ಳಿ ದೇವಿ, ಸಂತೋಷಿ ಮಾತಾ, ಪಾಂಡುರಂಗ, ಪಂಚಮುಖಿ ಗಣಪತಿ, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ದೇವಾಲಯ, ಕನ್ನಿಕಾಪರಮೇಶ್ವರಿ, ಸಾಯಿಬಾಬಾ ದೇವಾಲಯ, ಶನಿಮಹಾತ್ಮ, ಕರುಮಾರಿಯಮ್ಮ ದೇವಾಲಯಗಳು ಸಮುಚ್ಛಯದಲ್ಲಿವೆ.
ಈಗಾಗಲೇ ಬೃಹತ್ ಕೋಟಿಲಿಂಗಕ್ಕೆ ಟನ್‌ಗಟ್ಟಲೆ ಹೂವಿನ ಅಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬರುವ ಭಕ್ತರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಶಿವರಾತ್ರಿಯಂದು ಬೆಳಗ್ಗೆ ರಥೋತ್ಸವ, ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಹರಿಕಥೆ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಂದೋಬಸ್ತ್‌ಗಾಗಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ದೇವಾಲಯದ ಸಮುಚ್ಛಯದಲ್ಲಿ ಶನಿವಾರ ಆಡಳಿತಾಧಿಕಾರಿ ಕೆ.ವಿ.ಕುಮಾರಿ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.