
ಕೆಜಿಎಫ್ ಬೆಮಲ್ ಕಲಾಕ್ಷೇತ್ರದಲ್ಲಿ ಶುಕ್ರವಾರ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದೂರುಗಳ ವಿಚಾರಣೆ ನಡೆಸಿದರು
ಕೆಜಿಎಫ್: ಸೂಕ್ತ ನಿರ್ದೇಶನ ನೀಡಿದರೂ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ಇರುವುದನ್ನು ಗಮನಿಸಲಾಗಿದೆ. ಇದೇ ರೀತಿ ಮುಂದುವರೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ಬೆಮಲ್ ನಗರದ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ದೂರುಗಳ ವಿಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಯವಿಟ್ಟು ಸಕಾಲದಲ್ಲಿ ಕೆಲಸ ಮಾಡಿ, ಸಾರ್ವಜನಿಕರಿಗೆ ಹಿಂಸೆ ಕೊಡಬೇಡಿ. ಈ ರೀತಿ ಪ್ರಕರಣಗಳು ಕಂಡು ಬಂದರೆ, ನನ್ನ ಪೆನ್ ಕೆಲಸ ಮಾಡಬೇಕಾಗುತ್ತದೆ. ಅದರ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಘಟ್ಟಕಾಮಧೇನಹಳ್ಳಿಯ ಕೆರೆ ಒತ್ತುವರಿ ಬಗ್ಗೆ ಬಂದಿದ್ದ ದೂರಿನ ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಸರ್ಕಾರಿ ಕೆರೆಯನ್ನು ಉಳಿಸುವ ಇಚ್ಛೆ ನಿಮಗೆ ಇಲ್ಲವೇ? ಏಳು ದಿನ ಸಮಯ ಕೊಡುತ್ತೇನೆ. ಅಷ್ಟರೊಳಗೆ ಕೆರೆ ಒತ್ತುವರಿ ತೆರವು ಮಾಡದೆ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಪಾರಾಂಡಹಳ್ಳಿಯಲ್ಲಿ ಸ್ಮಶಾನ ಜಾಗ ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿದೆ ಎಂಬ ದೂರಿನ ಬಗ್ಗೆ ಹಿಂದಿನ ತಹಶೀಲ್ದಾರ್ ನಾಗವೇಣಿ ಬಳಿ ವಿವರಣೆ ಕೇಳಿದರು. ಜಮೀನು ಹಿಂದೆ ಮಂಜೂರಾಗಿತ್ತು. ಅದಕ್ಕೆ ನಾನು ಖಾತೆ ಮಾಡಿದ್ದೇನೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ನಾಗವೇಣಿ ಸ್ಪಷ್ಟೀಕರಣ ನೀಡಿದರು.
ಬಂಗಾರದಗಣಿ ಪ್ರದೇಶದಲ್ಲಿ 12,325 ಎಕರೆ ಜಮೀನಿನಲ್ಲಿ ಅಕ್ರಮ ನಡೆದಿದೆ. ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ. ಬಿಜಿಎಂಎಲ್ ಬಳಿ ಒಂದು, ಕಂದಾಯ ಅಧಿಕಾರಿಗಳ ಬಳಿ ಮತ್ತೊಂದು ದಾಖಲೆ ಇದೆ. ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಭೂ ಮಾಫಿಯಾಗಳು ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಸ್ಕಂ ನಿವಾಸಿ ಕೋದಂಡರಾಮ ಅವರು ನೀಡಿದ ದೂರಿನನ್ವಯ ವಿಚಾರಣೆ ನಡೆಸಿದ ವೀರಪ್ಪ, ಎರಡು ತಿಂಗಳೊಳಗೆ ಸರ್ವೆ ಮಾಡಿ ದೂರುದಾರರಿಗೆ ವರದಿ ನೀಡಬೇಕೆಂದು ತಹಶೀಲ್ದಾರ ಎಚ್.ಜೆ.ಭರತ್ ಅವರಿಗೆ ಸೂಚಿಸಿದರು.
ಗೌಡನ ಕೆರೆಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಕಮಾನು ಕಟ್ಟಲಾಗಿದೆ. ಅದನ್ನು ಕೂಡ ಒಂದು ವಾರದೊಳಗೆ ತೆರವು ಮಾಡಬೇಕೆಂದು ನ್ಯಾಯಾಧೀಶರು ಆದೇಶಿಸಿದರು.
ಎಂ.ಜಿ.ಮಾರುಕಟ್ಟೆಯಲ್ಲಿ 1,700 ಅಂಗಡಿಗಳಿದ್ದು, ಅವುಗಳನ್ನು ಹರಾಜು ಹಾಕುತ್ತಿಲ್ಲ. ಅಂಗಡಿ ಸಾಮರ್ಥ್ಯಕ್ಕೆ ತಕ್ಕಂತೆ ಬಾಡಿಗೆ ವಸೂಲಿ ಮಾಡುತ್ತಿಲ್ಲ ಎಂಬ ದೂರಿಗೆ ಉತ್ತರಿಸಿದ ಹಿಂದಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರು ಸರ್ಕಾರಿ ಜಾಗದಲ್ಲಿ ಅಂಗಡಿ ಕಟ್ಟಲಾಗಿದೆ. ಹಿಂದೆ ಅಂಗಡಿಗೆ ₹40 ಬಾಡಿಗೆ ಇತ್ತು. ಈಗ ಅದನ್ನು ₹3 ಸಾವಿರಕ್ಕೆ ಏರಿಸಲಾಗಿದೆ ಎಂದು ಹೇಳಿದರು. ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವೀರಪ್ಪ ಅವರು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿರುವ ಅವ್ಯವಸ್ಥೆ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಆಸ್ಪತ್ರೆಯನ್ನು ಖುದ್ದಾಗಿ ವೀಕ್ಷಿಸಿ ವರದಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳ ತಂಡವನ್ನು ಕಳಿಸಿದರು. ಒಟ್ಟು 76 ದೂರುಗಳ ವಿಚಾರಣೆ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಲೋಕಾಯುಕ್ತ ಎಸ್‌ಪಿ ಆಂತೋಣಿ ಜಾನ್, ಡಿವೈಎಸ್‌ಪಿಗಳಾದ ಟಿ.ಸಿ.ವೆಂಕಟೇಶ್, ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ರೇಣುಕಾ, ಪ್ರದೀಪ್ ಪೂಜಾರಿ, ಆಂಜನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.