
ಕೆಜಿಎಫ್: ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕೋಪಗೊಂಡ ಅರ್ಜಿದಾರರೊಬ್ಬರು ಕಂದಾಯ ನಿರೀಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದಿದೆ.
ಆ್ಯಂಡರ್‌ಸನ್‌ಪೇಟೆ ಲಕ್ಷ್ಮಿ ಟಾಕೀಸ್ ಸಮೀಪದ ವ್ಯಕ್ತಿಯೊಬ್ಬರು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಲವು ದಿನ ಕಳೆದರೂ ಪ್ರಮಾಣಪತ್ರ ಮಂಜೂರು ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅರ್ಜಿದಾರ, ಆಡಳಿತ ಸೌಧಕ್ಕೆ ಬಂದು ಕಂದಾಯ ನಿರೀಕ್ಷಿಕ ಚಂದ್ರಮೋಹನ್ ಜೊತೆಗೆ ವಾಗ್ವಾದಕ್ಕೆ ಇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಚಂದ್ರಮೋಹನ್, ಸ್ಥಳ ಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಆದರೆ, ಅರ್ಜಿದಾರರು ಬೆಂಗಳೂರು ನಿವಾಸಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಲ್ಲಿ ವಾಸವಿಲ್ಲದ ವ್ಯಕ್ತಿಗೆ ಆದಾಯ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದರಿಂದ ಮತ್ತಷ್ಟು ಕ್ರೋಧಗೊಂಡ ಅರ್ಜಿದಾರ, ಕಾಲಿನಲ್ಲಿದ್ದ ಚಪ್ಪಲಿ ತೆಗೆದುಕೊಂಡು ಹೊಡೆಯಲು ಹೋದರು. ಈ ವೇಳೆ ಅಕ್ಕಪಕ್ಕದವರು ಬಂದು ಆತನನ್ನು ತಡೆದರು. ಆತಂಕಗೊಂಡ ಚಂದ್ರಮೋಹನ್ ಅವರು ಅಧಿಕಾರಿಗಳ ಸಭೆ ನಡೆಸುತ್ತಿದ್ದ ಶಾಸಕಿ ಎಂ. ರೂಪಕಲಾ ಶಶಿಧರ್ ಅವರ ಬಳಿ ತೆರಳಿ ಅಳಲು ತೋಡಿಕೊಂಡರು.
ಈ ವೇಳೆ ಅರ್ಜಿದಾರರನ್ನು ಕರೆಸಿದ ಶಾಸಕಿ ರೂಪಕಲಾ, ಈ ರೀತಿ ಮಾಡಬಾರದು ಎಂದು ತಿಳಿಹೇಳಿದರು. ಹೀಗಾಗಿ, ಅರ್ಜಿದಾರನು ಶಾಸಕರ ಸೂಚನೆಯಂತೆ ಅಧಿಕಾರಿ ಬಳಿ ಕ್ಷಮೆ ಕೋರಿದ್ದಾನೆ.
ಈ ಕುರಿತು ಕಂದಾಯ ನಿರೀಕ್ಷಿಕ ದೂರು ಸಲ್ಲಿಸದ ಕಾರಣ, ಪೊಲೀಸ್ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಹಶೀಲ್ದಾರ್ ಎಚ್.ಜೆ. ಭರತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.