
ಕೆಜಿಎಫ್: ರಾಬರ್ಟಸನ್‌ಪೇಟೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪಾರಂಪರಿಕ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡು ನವೀಕರಣ ಮಾಡಬೇಕೆಂದು ಶಾಸಕಿ ಎಂ.ರೂಪಕಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಯ ಆಧುನೀಕರಣ ಸಂಬಂಧ ತಯಾರು ಮಾಡಿರುವ ಯೋಜನಾ ವರದಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಆಸ್ಪತ್ರೆಯ ಅಭಿವೃದ್ಧಿ ಮತ್ತು ಆಧುನಿಕ ಉಪಕರಣಗಳ ಖರೀದಿ ಮಾಡಬೇಕು. ಆಸ್ಪತ್ರೆಗೆ ಬರುವ ಗರ್ಭಿಣಿಯರು, ಹೆರಿಗೆ ನಂತರ ಬರುವ ತಾಯಂದಿರು, ಸಣ್ಣ ಮಕ್ಕಳು ಮತ್ತು ಇತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುವ ಮಹಿಳೆಯರಿಗೆ ಉತ್ತಮ ವಾತಾವರಣ ಸೃಷ್ಟಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಬ್ರಿಟಿಷರ ಕಾಲದ ಹಳೆ ಕಟ್ಟಡಗಳನ್ನು ನವೀಕರಿಸಬೇಕು. ಹಾಲಿ ಕಟ್ಟಡದ ಹಿಂದೆ ಇರುವ ಹಳೆ ಕಟ್ಟಡವನ್ನು ಕೆಡವಿ ನೂತನ ಸುಸಜ್ಜಿತ ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸಾ ಕೊಠಡಿ, ತುರ್ತು ಪರಿಸ್ಥಿತಿಯಲ್ಲಿ ಮಕ್ಕಳನ್ನು ಆರೈಕೆ ಮಾಡುವ ಕೊಠಡಿಗೆ ಆದ್ಯತೆ ನೀಡಬೇಕು ಎಂಜಿನಿಯರ್‌ಗಳಿಗೆ ಸೂಚಿಸಿದರು.
ಆಸ್ಪತ್ರೆಗೆ ಬೇಕಾಗುವ ಉಪಕರಣಗಳ ಪಟ್ಟಿ ಕೊಟ್ಟಲ್ಲಿ, ಅದನ್ನು ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಕಟ್ಟಡ ಪೂರ್ಣವಾಗುವಷ್ಟರಲ್ಲಿ ಉಪಕರಣಗಳು ಕೂಡ ಸಿದ್ಧವಾಗಿರಬೇಕು. ಅವಶ್ಯಕತೆ ಇದ್ದಲ್ಲಿ ಶಾಸಕರ ಅನುದಾನದಲ್ಲಿ ಕೂಡ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.