ಕೆಜಿಎಫ್: ಚುಮು ಚುಮು ಚಳಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಕೆಜಿಎಫ್ ಜಿಲ್ಲೆಯಲ್ಲಿರುವ ರೌಡಿಗಳ ಮನೆ ಮೇಲೆ 23 ಪೊಲೀಸ್ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಲಕ್ಷ್ಮಿ, 15 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ 120 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ರಾಬರ್ಟ್‌ಸನ್ ಪೇಟೆ, ಆಂಡರ್ಸನ್ ಪೇಟೆ, ಬೆಮಲ್ ನಗರ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಯಿತು. ಪೊಲೀಸರು 23 ರೌಡಿಶೀಟರ್‌ಗಳ ಮನೆ ತಪಾಸಣೆ ನಡೆಸಿದರು. ಕುಖ್ಯಾತ ರೌಡಿ ಅಭಿ ಮನೆಯಲ್ಲಿ ಹರಿತವಾದ ಆಯುಧ ಪತ್ತೆಯಾಗಿದ್ದು, ಆತನನ್ನು ಬಂಗಾರಪೇಟೆ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಬೋಥ್ ಎಂಬಾತನ ಮನೆಯಲ್ಲಿ ದಾಳಿ ನಡೆಸಿದಾಗ ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಪತ್ತೆಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಹಿಂದೆ ರೌಡಿ ಕೃತ್ಯ ಎಸಗಿದವರಿಗೆ ಮತ್ತು ಅವರ ಕುಟುಂಬದವರಿಗೆ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ಎಚ್ಚರಿಕೆ ನೀಡಲಾಯಿತು.
ಪದೇ ಪದೇ ಕಾನೂನು ಉಲ್ಲಂಘನೆ ಮಾಡುವ ರೌಡಿಗಳನ್ನು ಗಡಿಪಾರು ಮಾಡಲಾಗುವುದು.ಶಿವಾಂಶು ರಜಪೂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.