ADVERTISEMENT

ರಿಸರ್ವ್‌ ಬೆಟಾಲಿಯನ್‌ ಶೀಘ್ರ ಆರಂಭ: ಪೊಲೀಸ್‌ ಮಹಾ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 7:03 IST
Last Updated 25 ಸೆಪ್ಟೆಂಬರ್ 2025, 7:03 IST
ಕೆಜಿಎಫ್‌ ಉದ್ದೇಶಿತ ಭಾರತೀಯ ರಿಜರ್ವ್‌ ಬೆಟಾಲಿಯನ್‌ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ವಿ. ಸಲೀಂ
ಕೆಜಿಎಫ್‌ ಉದ್ದೇಶಿತ ಭಾರತೀಯ ರಿಜರ್ವ್‌ ಬೆಟಾಲಿಯನ್‌ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ವಿ. ಸಲೀಂ   

ಕೆಜಿಎಫ್‌: ಭಾರತೀಯ ರಿಸರ್ವ್‌ ಬೆಟಾಲಿಯನ್‌ ಅತಿ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಪಡೆಗೆ ಸೇರ್ಪಡೆಯಾಗಲು ಬಯಸುವವರಿಂದ ಒಪ್ಪಿಗೆ ಪತ್ರ ಪಡೆಯಲಾಗುತ್ತಿದೆ ಎಂದು ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ವಿ.ಸಲೀಂ ಹೇಳಿದರು.

ನಗರದಲ್ಲಿ ಬುಧವಾರ ಬಿಆರ್‌ಐ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಂತರ ಮಾತನಾಡಿದರು. 

ಒಪ್ಪಿಗೆ ಪತ್ರ ನೀಡುವ ಸಿಬ್ಬಂದಿಯನ್ನು ಬಳಸಿಕೊಂಡು ತ್ವರಿತವಾಗಿ ಒಂದು ಪ್ಲಟೂನ್‌ ಪ್ರಾರಂಭ ಮಾಡಲಾಗುವುದು. ಆಡಳಿತ ಕಚೇರಿ ಮತ್ತು ಕಾಯಂ ಕಟ್ಟಡ ನಿರ್ಮಾಣ ಕೊಂಚ ತಡವಾಗಬಹುದು ಎಂದರು.

ADVERTISEMENT

ಘಟಕಕ್ಕೆ ಅಗತ್ಯವಿರುವ ಕಚೇರಿ, ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯಾ ರಂಭ ಮಾಡಲು ಸೂಚಿಸಲಾಗಿದೆ. ಈಗಾಗಲೇ ಡಿಎಆರ್‌ ಕಟ್ಟಡ ನೀಡಲಾಗಿದೆ. ಅದನ್ನೇ ಬಳಸಿಕೊಂಡು ಬೆಟಾಲಿ
ಯನ್‌ ಕಾರ್ಯಾರಂಭ ಮಾಡುವಂತೆ ಘಟಕದ ಪ್ರಭಾರಿ ಕಮಾಂಡೆಂಟ್‌ ರಾಮಕೃಷ್ಣ ಅವರಿಗೆ ಸೂಚಿಸಲಾಗಿದೆ.

ಬಂಗಾರಪೇಟೆ ಮತ್ತು ರಾಬರ್ಟ್‌ಸನ್‌ಪೇಟೆ ಸೇರಿಸಿ ಸಂಚಾರ ಪೊಲೀಸ್‌ ಠಾಣೆ ಆರಂಭಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಬಿಆರ್‌ಐನಲ್ಲಿ ಎಲ್ಲ ವಿಧದ ಸವಲತ್ತು ಸಿಗಲಿವೆ. ಅವುಗಳನ್ನು ಪೊಲೀಸರು ಬಳಸಿಕೊಳ್ಳಬಹುದು ಎಂದರು.

‘ಅವತಿಯಲ್ಲಿ ಇನ್ನೊಂದು ಐಆರ್‌ಬಿ ಘಟಕ ಆರಂಭ ಮಾಡುತ್ತಿದ್ದೇವೆ. ಎರಡು–ಮೂರು ತಿಂಗಳಿನಲ್ಲಿ ಎರಡು ಐಆರ್‌ಬಿ ಮತ್ತು ಕೆಎಸ್‌ಐಎಸ್‌ಎಫ್‌ಬೆಟಾಲಿಯನ್‌ ಮಂಜೂರಾಗಿ, ಮೂರು ಸಾವಿರ ಪೊಲೀಸ್‌ ಸಿಬ್ಬಂದಿ ನೇಮಕವಾಗಲಿದ್ದಾರೆ. ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಪೊಲೀಸರ ಸಂಖ್ಯೆಯನ್ನು ಉತ್ತಮಪಡಿಸಲಾಗುತ್ತಿದೆ. ಮನೆ ಮನೆಗೆ ಪೊಲೀಸ್‌ ಯೋಜನೆ ಆರಂಭಿಸಿದ್ದೇವೆ. ಪೊಲೀಸರು ಸಮಾಜದ ಜೊತೆಗೆ ಹೆಚ್ಚು ಬೆರೆಯಬೇಕು ಎಂಬುದು ಇಲಾಖೆ ಉದ್ದೇಶ’ ಎಂದು ಸಲೀಂ ಹೇಳಿದರು.

ಕೇಂದ್ರ ವಲಯದ ಐಜಿಪಿ ಲಾಬೂರಾಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌, ಪೊಲೀಸ್‌ ವಸತಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುದೇವ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌, ಡಿವೈಎಸ್‌ಪಿ ಪಾಂಡುರಂಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.