ADVERTISEMENT

ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ

ಮಡಿವಾಳ ಸ್ವಯಂ ಭುವನೇಶ್ವರ ದೇವಾಲಯ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 7:40 IST
Last Updated 19 ನವೆಂಬರ್ 2025, 7:40 IST
ಕೆಜಿಎಫ್‌ ತಾಲ್ಲೂಕಿನ ಮಡಿವಾಳದಲ್ಲಿರುವ ಸ್ವಯಂಭುವನೇಶ್ವರ ದೇವಾಲಯದ ಒಂದು ಭಾಗ ಕುಸಿದಿರುವುದು
ಕೆಜಿಎಫ್‌ ತಾಲ್ಲೂಕಿನ ಮಡಿವಾಳದಲ್ಲಿರುವ ಸ್ವಯಂಭುವನೇಶ್ವರ ದೇವಾಲಯದ ಒಂದು ಭಾಗ ಕುಸಿದಿರುವುದು   

ಕೆಜಿಎಫ್‌: ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ತಾಲ್ಲೂಕಿನ ಕ್ಯಾಸಂಬಳ್ಳಿಯ ಮಡಿವಾಳ ಸ್ವಯಂ ಭುವನೇಶ್ವರ ದೇವಾಲಯದ ಒಂದು ಭಾಗ ಕುಸಿದಿದ್ದು, ಪ್ರಾಚೀನ ಪುರಾತತ್ವ ಇಲಾಖೆ ಅದರ ದುರಸ್ತಿಗೆ ಮುಂದಾಗದಿರುವುದು ದೇವಾಲಯ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಆಗಸ್ಟ್‌ ಕೊನೆ ವಾರದಲ್ಲಿ ಬಿದ್ದ ಭಾರೀ ಮಳೆಗೆ ದೇವಾಲಯದ ಕಲ್ಲು ಕಂಬ ಮತ್ತು ಅದಕ್ಕೆ ಹೊಂದಿಕೊಂಡಿದ್ದ ಚಾವಣಿ ನೆಲಕ್ಕುರುಳಿದೆ. ರಾತ್ರಿ ವೇಳೆ ಅವಘಡ ಸಂಭಂವಿಸಿದ್ದರಿಂದ ಯಾರಿಗೂ ತೊಂದರೆಯಾಗಲಿಲ್ಲ.

ಪ್ರಾಚೀನ ಶಿಲ್ಪ ಕಲೆ ಹೊಂದಿರುವ ದೇವಾಲಯವನ್ನು ಕೂಡಲೇ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ದುರಸ್ತಿಯಾಗಿಲ್ಲ. ಈಗಾಗಲೇ ಒಂದು ಭಾಗ ಕುಸಿದಿದೆ. ಅದಕ್ಕೆ ಹೊಂದಿಕೊಂಡಿರುವ ಕಂಬಗಳು ಕೂಡ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಸುಮಾರು 800 ವರ್ಷಗಳ ಪುರಾತನ ದೇವಾಲಯ ನಾಶವಾಗುತ್ತಿದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.

ADVERTISEMENT

ಶೈವ ಸಂಪ್ರದಾಯಕ್ಕೆ ಸೇರಿದ ಈ ದೇವಾಲಯ, 1265ರ ಆಸುಪಾಸಿನಲ್ಲಿ ನಿರ್ಮಾಣವಾಗಿದೆ. ದೇವಾಲಯದಲ್ಲಿ ಚೋಳ, ಹೊಯ್ಸಳ ಮತ್ತು ವಿಜಯನಗರ ಕಾಲದ ಶಾಸನಗಳು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಇವೆ. ದೇವಾಲಯದಲ್ಲಿ ನಡೆಯುವ ಲಕ್ಷ ದೀಪೋತ್ಸವ, ಕಾವಡಿ ಜಾತ್ರೆ, ಬ್ರಹ್ಮ ರಥೋತ್ಸವ, ಮಹಾ ಶಿವರಾತ್ರಿ, ಕಾರ್ತಿಕ ಸೋಮವಾರದಂದು ಸಾವಿರಾರು ಭಕ್ತರು ಆಗಮಿಸುತ್ತಾರೆ.

ದೇವಾಲಯವನ್ನು ಕೆಲ ವರ್ಷಗಳ ಹಿಂದೆ ಧರ್ಮಸ್ಥಳ ದೇವಾಲಯ ನೀಡಿದ ಅನುದಾನದಲ್ಲಿ ಪುನರುಜ್ಜೀವನ ಮಾಡಲಾಗಿತ್ತು. ಆದರೆ, ಮತ್ತೆ ವಿನಾಶದತ್ತ ತಲುಪಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಶ್ರದ್ಧಾಕೇಂದ್ರವಾಗಿರುವ ದೇವಾಲಯದ ಕಲ್ಯಾಣಿ ಕಟ್ಟೆ ಸಂಪೂರ್ಣ ನಾಶವಾಗಿದೆ. ದೇವಾಲಯದ ಒಂದು ಭಾಗ ಶಿಥಿಲಗೊಂಡಿದೆ. ಹಾಗಾಗಿ ಕೂಡಲೇ ದುರಸ್ತಿಗೊಳಿಸಿ ಭಕ್ತರಿಗೆ ಅವಕಾಶ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಲಕ್ಷ ದೀಪೋತ್ಸವ ಕಾರ್ಯಕ್ರಮ ಡಿ.3ರಂದು ನಡೆಯಲಿದೆ. ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಷ್ಟರೊಳಗೆ ದೇಗುಲ ದುರಸ್ತಿಯಾಗಲಿ.
ವೆಂಕಟರಾಮ ಮಡಿವಾಳ, ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.