ಬಂಗಾರಪೇಟೆ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಮೀನನ್ನು ಕೋಮುಲ್ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡು ಸೋಲಾರ್ ಘಟಕ ನಿರ್ಮಿಸುತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದ್ದು, ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕೆಂದು ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ.
ಕೋಲಾರ ತಾಲ್ಲೂಕಿನ ಹುತ್ತೂರು ಗ್ರಾಮದ ಸ.ನಂ 103 ರಲ್ಲಿ 153 ಎಕರೆ ಜಾಗವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿತು. ಆದರೆ ಕೋಮುಲ್ ಈ ಜಾಗದಲ್ಲಿ ಮೇವು ಉತ್ಪಾದನೆ ಸಲುವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೆ ಪ್ರದೇಶವನ್ನೂ ಒಳಗೊಂಡಂತೆ ಯಾವುದೇ ದುರಸ್ತಿ, ಟಿಪ್ಪಣಿ ಸರ್ವೆ, ಭೂ ಪರಿವರ್ತನೆ ಆದೇಶ ಹಾಗೂ ಸರ್ಕಾರದ ಪೂರ್ವಾನುಮತಿ ಪಡೆಯದೆ ಸೋಲಾರ್ ಘಟಕ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂದು ದೂರಿದ್ದಾರೆ.
ಈ ಕುರಿತು ಅಧಿವೇಶದಲ್ಲಿ ಧ್ವನಿ ಎತ್ತಿ ಕೋಮುಲ್ ಕೈಗೊಂಡಿರುವ ಕಾನೂನು ಬಾಹಿರ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕಂದಾಯ ಸಚಿವರ ಗಮನ ಸೆಳೆಯಲಾಗಿತು. ಕಂದಾಯ ಸಚಿವ ಕೃಷ್ಣಬೈರೇಗೌಡ ಸಹ ಕೋಮುಲ್ ಇತರೇ ಕಾರ್ಯಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿರುವುದು ಸರಿ ಇಲ್ಲವೆಂದು ಮತ್ತು ಇಲಾಖೆಯಿಂದ ಯಾವುದೇ ಅನುಮತಿ ಸಹ ಪಡೆದಿದಿಲ್ಲ ಎಂದು ಉತ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.