ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್) ಅಧ್ಯಕ್ಷ ಸ್ಥಾನಕ್ಕೆ ನಗರದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಮಾಲೂರು ಶಾಸಕ ಹಾಗೂ ಒಕ್ಕೂಟದ ನಿರ್ದೇಶಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆಯಾದರು.
ಒಕ್ಕೂಟದ ಹಿಂದಿನ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಅವರ ಅಧಿಕಾರಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ನಂಜೇಗೌಡ ಹಾಗೂ ಜೆಡಿಎಸ್ ಪಕ್ಷದಿಂದ ನಿರ್ದೇಶಕ ಆರ್.ರಾಮಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದರು.
ಒಕ್ಕೂಟದಲ್ಲಿ ಒಟ್ಟು 17 ನಿರ್ದೇಶಕರಿದ್ದಾರೆ. ಈ ಪೈಕಿ 13 ಮಂದಿ ಚುನಾಯಿತರು, ಒಬ್ಬರು ನಾಮನಿರ್ದೇಶಿತರು ಹಾಗೂ ವಿವಿಧ ಇಲಾಖೆಗಳ 3 ಅಧಿಕಾರಿಗಳು ಸೇರಿದ್ದಾರೆ. ಚುನಾಯಿತ ನಿರ್ದೇಶಕರ ಪೈಕಿಕಾಂಗ್ರೆಸ್ ಬೆಂಬಲಿತ 9 ಮಂದಿ ಹಾಗೂ ಜೆಡಿಎಸ್ ಬೆಂಬಲಿತ 4 ಮಂದಿ ಇದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ನಂಜೇಗೌಡ, ರಾಜೇಂದ್ರಗೌಡ ಹಾಗೂ ಜೆಡಿಎಸ್‌ನಲ್ಲಿ ಕೆ.ವಿ.ನಾಗರಾಜ್, ರಾಮಕೃಷ್ಣೇಗೌಡ ಅಧ್ಯಕ್ಷಗಾದಿಯ ಆಕಾಂಕ್ಷಿಗಳಾಗಿದ್ದರು.
ಅಂತಿಮವಾಗಿ ನಂಜೇಗೌಡ ಮತ್ತು ರಾಮಕೃಷ್ಣೇಗೌಡ ಬೆಳಿಗ್ಗೆ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ನಿರ್ದೇಶಕರೆಲ್ಲಾ ಚರ್ಚೆ ನಡೆಸಿ ರಾಮಕೃಷ್ಣೇಗೌಡರ ನಾಮಪತ್ರ ವಾಪಸ್ ತೆಗೆಸಲಾಯಿತು. ಹೀಗಾಗಿ ಚುನಾವಣಾಧಿಕಾರಿಯು ನಂಜೇಗೌಡರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಮಾದರಿ ಒಕ್ಕೂಟ: ‘ಸುಮಾರು ₹ 25 ಕೋಟಿ ನಷ್ಟದಲ್ಲಿರುವ ಒಕ್ಕೂಟವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ರಾಜ್ಯಕ್ಕೆ ಮಾದರಿ ಹಾಲು ಒಕ್ಕೂಟವಾಗಿ ಮಾಡುವುದು ನನ್ನ ಗುರಿ’ ಎಂದು ನೂತನ ಅಧ್ಯಕ್ಷ ನಂಜೇಗೌಡ ತಿಳಿಸಿದರು.
‘ಒಕ್ಕೂಟದ ವ್ಯಾಪ್ತಿಯ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 11 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 3 ಲಕ್ಷ ಲೀಟರ್‌ನಷ್ಟು ಹಾಲಿನ ಪುಡಿ ತಯಾರಿಕೆಗೆ ಹೋಗುತ್ತಿರುವುದರಿಂದ ಒಕ್ಕೂಟಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.
ನಿಯೋಗ ಹೋಗುತ್ತೇವೆ: ‘ಸದ್ಯದಲ್ಲೇ ಒಕ್ಕೂಟದ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಪಟ್ಟಿ ಮಾಡುತ್ತೇನೆ. ಇಲ್ಲಿನ ನ್ಯೂನತೆ ಸರಿಪಡಿಸಲು ಸಂಸದ ಕೆ.ಎಚ್.ಮುನಿಯಪ್ಪ, ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ನೇತೃತ್ವದಲ್ಲಿ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು, ಒಕ್ಕೂಟದ ನಿರ್ದೇಶಕರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ನಿಯೋಗ ಹೋಗುತ್ತೇವೆ’ ಎಂದು ಹೇಳಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೆಗಾ ಡೇರಿಯನ್ನು ಸದ್ಯದಲ್ಲೇ ಉದ್ಘಾಟಿಸಲಾಗುತ್ತದೆ. ಮೆಗಾ ಡೇರಿ ಕಾರ್ಯಾರಂಭ ಮಾಡಿದರೆ ಒಕ್ಕೂಟದ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮಾಲೂರು ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನನ್ನು ಒಕ್ಕೂಟದ ಅಧ್ಯಕ್ಷನನ್ನಾಗಿ ಮಾಡಿದರೆ ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಸೌಕರ್ಯ ಕಲ್ಪಿಸಿಕೊಡುತ್ತೇನೆ ಎಂದು ನಿರ್ದೇಶಕರು ವಿಶ್ವಾಸವಿಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುತ್ತೇನೆ. ನನ್ನ ಆಯ್ಕೆಗೆ ಸಹಕರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಕೆ.ಎಚ್.ಮುನಿಯಪ್ಪ, ನಿರ್ದೇಶಕರು ಹಾಗೂ ಎರಡು ಜಿಲ್ಲೆಯ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಒಕ್ಕೂಟದ ನಿರ್ದೇಶಕರಾದ ಕೆ.ವಿ.ನಾಗರಾಜ್, ಜಯಸಿಂಹ ಕೃಷ್ಣಪ್ಪ, ಅಶ್ವತ್ಥ್‌ರೆಡ್ಡಿ, ಆರ್.ರಾಮಕೃಷ್ಣೇಗೌಡ, ರಾಜೇಂದ್ರಗೌಡ, ವ್ಯವಸ್ಥಾಪಕ ನಿರ್ದೇಶಕ ಹುನುಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.