ADVERTISEMENT

ಕೋಲಾರ ಪಾಲಿಕೆ ರಚನೆಗೆ ಸಮೀಕ್ಷೆ

ನಗರ ಅಭಿವೃದ್ಧಿಗೆ ಯೋಜನೆ: ಸಂಸದ ಮುನಿಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 5:10 IST
Last Updated 25 ನವೆಂಬರ್ 2022, 5:10 IST
ಕೋಲಾರದಲ್ಲಿ ಗುರುವಾರ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್‌ ಇದ್ದಾರೆ
ಕೋಲಾರದಲ್ಲಿ ಗುರುವಾರ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್‌ ಇದ್ದಾರೆ   

ಕೋಲಾರ: ‘ನಗರದ ಅಭಿವೃದ್ಧಿ ನಿಟ್ಟಿನಲ್ಲಿ ಕೋಲಾರ ನಗರಸಭೆಯನ್ನು ಪಾಲಿಕೆಯಾಗಿ (ಕಾರ್ಪೊರೇಷನ್‌) ಬದಲಾಯಿಸಬೇಕು. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ವರದಿ ಕೊಡಿ’ ಎಂದು ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೇಂದ್ರ ಪುರಸ್ಕೃತ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೋಲಾರ ನಗರ ಸುತ್ತಲಿನ ಅಮ್ಮೇರಹಳ್ಳಿ, ಟಮಕ. ಅರಹಳ್ಳಿ, ಛತ್ರಕೋಡಿಹಳ್ಳಿ ಸೇರಿಸಿ ಎಷ್ಟು ವಿಸ್ತೀರ್ಣವಿದೆ? ಎಷ್ಟು ಜನಸಂಖ್ಯೆ ಇದೆ ಎಂಬುದರ ಅಧ್ಯಯನ ನಡೆಸಿ. ಸರ್ಕಾರದ ಮಟ್ಟದಲ್ಲಿ ನಾನು ಈಗಾಗಲೇ ಮಾತನಾಡಿದ್ದೇನೆ’ ಎಂದರು.

ADVERTISEMENT

‘ಕಾರ್ಪೊರೇಷನ್‌ ಆಗಿ ಬದಲಾದರೆ ನಗರ ಅಭಿವೃದ್ಧಿ ಕಾಣುತ್ತದೆ. ಹೊರ ವರ್ತುಲ (ರಿಂಗ್‌) ರಸ್ತೆ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗುತ್ತವೆ’ ಎಂದು ಹೇಳಿದರು.

‘ಈಗಿನ ನಗರಸಭೆ ಕಟ್ಟಡ ಕುರಿ ಕೊಟ್ಟಿಗೆ ಇದ್ದಂತಿದೆ. ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ನಗರಸಭೆ ಅಧ್ಯಕ್ಷರು ಕೋಲಾರ ಹಾಳು ಮಾಡಿದ್ದು, ಈಗಲೂ ಹಾಳು ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಇದುವರೆಗೆ ಏನು ಕೆಲಸ ನಡೆದಿದೆ ಮಾಹಿತಿ ನೀಡಿ. ಖಾತೆ ಎಷ್ಟು ಬಾಕಿ ಉಳಿದಿವೆ’ ಎಂದು ಪ್ರಶ್ನಿಸಿದರು.

ಆಯುಕ್ತೆ ಬಿ.ಎಸ್‌.ಸುಮಾ, ‘ಒಂದು ವರ್ಷದಿಂದ ಸುಮಾರು 500 ಖಾತೆ ಪರಿಶೀಲನೆಗೆ ಬಾಕಿ ಇವೆ. ನಗರದ ಸುತ್ತಲಿನ ಗ್ರಾಮ ಪಂಚಾಯಿತಿಗಳಿಂದ 10 ಸಾವಿರ ಖಾತೆ ನಗರಸಭೆಗೆ ವರ್ಗಾವಣೆ ಆಗಿವೆ. ಸಿಬ್ಬಂದಿ ಕೊರತೆ ಇದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ನಗರ ವ್ಯಾಪ್ತಿಯಲ್ಲಿ ಶೇ 30 ರಷ್ಟು ಮಂದಿ ಮಾತ್ರ ಕಂದಾಯ ಪಾವತಿಸುತ್ತಿದ್ದಾರೆ. ನೀರಿನ ಬಳಕೆ ಶುಲ್ಕವೇ ಸುಮಾರು ₹ 3 ಕೋಟಿ ಬಾಕಿ ಇದೆ. ನಗರಸಭೆಯಲ್ಲಿ ಮನ್ನಾ ಮಾಡಲು ನಿರ್ಣಯ ಮಾಡಿದ್ದರು’ ಎಂದು ತಿಳಿಸಿದರು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುನಿಸ್ವಾಮಿ, ‘ನೀರಿನ ಬಾಕಿ ಮನ್ನಾ ಮಾಡಲು ಅಧ್ಯಕ್ಷರಿಗೆ ಅಧಿಕಾರ ಇಲ್ಲ. ಬಿಬಿಎಂಪಿಯಲ್ಲೇ ಇದು ಸಾಧ್ಯವಾಗಿಲ್ಲ’ ಎಂದರು.

‘ಕೇವಲ ಶೇ 30ಕಂದಾಯ ಪಾವತಿಯಾದರೆ ಕೋಲಾರ ಅಭಿವೃದ್ಧಿ ಆಗುವುದು ಯಾವಾಗ? ತೆರಿಗೆ ಬಾಕಿದಾರರ ಪಟ್ಟಿ ಮಾಡಿ ಗುರಿ ನಿಗದಿ ಮಾಡಿ. ಬೋಗಸ್ ಮಾಡುವವರನ್ನು ಪತ್ತೆ ಹಚ್ಚಿ. ತೆರಿಗೆ ಸಂಗ್ರಹಿಸಿ’ ಎಂದು ತಾಕೀತು ಮಾಡಿದರು.

‘ಸದ್ಯದಲ್ಲೇ ನಗರಸಭೆಯ ಸಭೆ ನಡೆಸಲಿದ್ದು, ಪ್ರತಿಯೊಂದು ಮಾಹಿತಿ ಕೊಡಬೇಕು. ಎಷ್ಟು ಮಂದಿ ಕೆಲಸ ಮಾಡುತ್ತಾರೆ? ಎಷ್ಟು ವಾಹನ, ಯಂತ್ರಗಳಿವೆ ಎಂಬುದನ್ನು ಹೇಳಬೇಕು. ಮೂರು ವರ್ಷಗಳಿಂದ ಎಷ್ಟು ಬಿಲ್ ಆಗಿದೆ ಎಂಬುದಕ್ಕೆ ವಾರ್ಡ್ ವಾರು ಮಾಹಿತಿ ಬೇಕು. ಮೊದಲು ಕೋಲಾರ ನಗರಸಭೆ, ನಂತರ ಬಂಗಾರಪೇಟೆ ಪುರಸಭೆ ಸಭೆ ನಡೆಸುತ್ತೇನೆ’ ಎಂದು ತಿಳಿಸಿದರು.

‘ರೇಷ್ಮೆ ಇಲಾಖೆಯು ಉದ್ಯಮದ ಅಭಿವೃದ್ಧಿ, ಗುಣಮಟ್ಟದ ಸೊಪ್ಪು, ಗೂಡು ಉತ್ಪಾದನೆ ಕುರಿತಂತೆ ಅಗತ್ಯ ಮಾಹಿತಿಯನ್ನು ರೇಷ್ಮೆ ಕೃಷಿಕರಿಗೆ ಒದಗಿಸಲು ಆನ್‍ಲೈನ್ ವ್ಯವಸ್ಥೆ ಮಾಡಬೇಕು. ಸೊಪ್ಪು ಬೆಳೆಯುವವರಿಗೆ ವಿಮೆಗೆ ಆಗ್ರಹವಿದ್ದು, ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಸುವೆ’ ಎಂದರು.

ಮೀನುಗಾರಿಕೆ ಇಲಾಖೆ ಅಧಿಕಾರಿ ಪೆದ್ದಪ್ಪ, ‘ಜಿಲ್ಲೆಯ 144 ಕೆರೆ ಮತ್ತು ಮಾರ್ಕಂಡೇಯ ಜಲಾಶಯ ಹಾಗೂ ಬೇತಮಂಗಲ ಜಲಾಶಯ ಮೀನು ಸಾಕಣೆ ಮಾಡಲಾಗುತ್ತದೆ. ಈಗ ಅವಧಿ ಮುಗಿದಿದ್ದು, ಟೆಂಡರ್ ಕರೆಯಬೇಕಿದೆ’ ಎಂದು ಮಾಹಿತಿ
ನೀಡಿದರು.

ಈ ಮಾಹಿತಿಗೆ ಪ್ರತಿಕ್ರಿಯಿಸಿದ ಸಂಸದ, ‘ಮೀನು ಮರಿ ಸಾಕಣೆ ಮಾಡಲು ಮೀನುಗಾರಿಕೆ ಇಲಾಖೆಗೆ ಸಾಧ್ಯವಾಗದಿದ್ದರೆ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಿಕೊಡಿ, ಯುವಕರು ಸಿದ್ಧರಾಗಿದ್ದಾರೆ’ ಎಂದರು.

ಕುಡಿಯುವ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ, ‘ಅರಣ್ಯ ಇಲಾಖೆಯ ಸಾವಿರಾರು ಎಕರೆ ಒತ್ತುವರಿ ಆಗಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಆದರೆ, ಯರಗೋಳ್ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿದರೆ ಮುಚ್ಚುತ್ತಾರೆ,ಏಕೆ?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಗುರುತಿಸಿರುವ 159 ಕೆರೆ ಸರ್ವೇ ಮಾಡಿ. ಯಾರೇ ಒತ್ತುವರಿ ಮಾಡಿದ್ದರೂ ತೆರವುಗೊಳಿಸಿ ಬೌಂಡರಿ ಹಾಕಿ’ ಎಂದರು.

ಜಿಲ್ಲಾಧಿಕಾರಿ ವೆಂಕಟ್‍ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್‌, ಪ್ರೊಬೇಷನರಿ ಐಎಎಸ್ ಅಧಿಕಾರಿ ವಿನಾಯಕ್ ನಾರವಾಡೆ ಹಾಗೂ ಅಧಿಕಾರಿಗಳು ಇದ್ದರು.

ಆಯುಕ್ತೆ ಪರ ನಿಂತ ಸಂಸದ

ಕೋಲಾರ ನಗರಸಭೆಯಲ್ಲಿ ಎರಡು ತಿಂಗಳಿನಿಂದ ಸದಸ್ಯರು ಹಾಗೂ ಆಯುಕ್ತರ ನಡುವೆ ಜಟಾಪಟಿ ನಡೆಯುತ್ತಿದ್ದು, ಆಯುಕ್ತೆ ಬಿ.ಎಸ್.ಸುಮಾ ಅವರ ಕ್ರಮವನ್ನು ಸಂಸದ ಮುನಿಸ್ವಾಮಿ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಲು ಹೋದಾಗ ಅಡೆತಡೆ ಸರ್ವೇಸಾಮಾನ್ಯ. ಭ್ರಷ್ಟಾಚಾರ ರಹಿತ ಆಡಳಿತ ನನ್ನ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ನಗರಸಭೆ ಆಯುಕ್ತರ ಗುರಿ’ ಎಂದರು.

‘ನಕಲಿ ಖಾತೆ ತಡೆಗಟ್ಟಲು ಆಯುಕ್ತರು ಮುಂದಾಗಿದ್ದಾರೆ. ಕಾನೂನುಬಾಹಿರ ಚಟುವಟಿಕೆ ತಡೆಯಲು ಹೋಗಿದ್ದು, ಜನಪ್ರತಿನಿಧಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಳ್ಳೆಯ ಕೆಲಸ ಮಾಡುವವರು ಜೊತೆಗೆ ಇರುತ್ತೇವೆ’ ಎಂದು ನುಡಿದರು.

‘ನಿಮ್ಮನ್ನು ವರ್ಗಾವಣೆ ಮಾಡಲು ಪ್ರಯತ್ನ ನಡೆಯುತ್ತಿವೆ. ಕಾನೂನುಬಾಹಿರ ಚಟುವಟಿಕೆ ಮಾಡುವವರಿಗೆ ಬಗ್ಗಬೇಡಿ. ನೀವು ಕಾಸು ಪಡೆಯಲ್ಲ ಎಂಬುದು ಗೊತ್ತು. ನ್ಯಾಯಯುತವಾಗಿ ಕೆಲಸ ಮಾಡಿ, ಹೆದರಬೇಡಿ’ ಎಂದು ಅಭಯ ನೀಡಿದರು.

ಉದ್ಯೋಗ ಮೇಳ ಆಯೋಜಿಸಿ

ಕೋಲಾರ ನಗರದಲ್ಲಿ ಮುಂದಿನ ತಿಂಗಳು ಬೃಹತ್ ಉದ್ಯೋಗ ಮೇಳ‌ ಆಯೋಜಿಸಬೇಕು ಎಂದು ಸಂಸದರು ಸೂಚನೆ ನೀಡಿದರು. ‘ಜಿಲ್ಲೆಯ 10 ಸಾವಿರ ಜನರಿಗೆ ಉದ್ಯೋಗ ಸಿಗಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಬೇಕು’ ಎಂದರು.

ರಸ್ತೆ ಅಭಿವೃದ್ಧಿಗೂ ಹಣ ಕೊಡಿ

ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದರು ಗಣಿಗಾರಿಕೆಯಿಂದ ಬರುವ ಗೌರವಧನವನ್ನು ರಸ್ತೆ ಅಭಿವೃದ್ಧಿಗೂ ಕೊಡಬೇಕು ಎಂದರು.

‘ಲಾರಿಯೊಂದಕ್ಕೆ 20 ಟನ್ ಮಿತಿ ವಿಧಿಸಲಾಗಿದೆ. 25ಕ್ಕೂ ಹೆಚ್ಚು ಟನ್ ತುಂಬಿಸುತ್ತಿದ್ದಾರೆ. ಇದರಿಂದ ರಸ್ತೆ ಹಾಳಾಗುತ್ತಿವೆ. ಹೀಗಾಗಿ, ಗೌರವಧನವನ್ನು ರಸ್ತೆ ಅಭಿವೃದ್ಧಿಗೂ ಕೊಡಬೇಕು’ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.