ADVERTISEMENT

ಕೋಲಾರ: ಕ್ರಿಸ್‌ಮಸ್‌ ಹಬ್ಬಕ್ಕೆ ಬೆಳಕಿನ ಮೆರುಗು

ಜಿಲ್ಲೆಯಲ್ಲಿ ಗರಿಗೆದರಿದ ಸಂಭ್ರಮ, ಚರ್ಚ್‌ಗಳಿಗೆ ಅಲಂಕಾರ, ಇಂದು ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:16 IST
Last Updated 25 ಡಿಸೆಂಬರ್ 2025, 7:16 IST
ಕೋಲಾರದ ನಗರದ ಮೆಥೊಡಿಸ್ಟ್‌ ಚರ್ಚ್‌ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು
ಕೋಲಾರದ ನಗರದ ಮೆಥೊಡಿಸ್ಟ್‌ ಚರ್ಚ್‌ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು   

ಕೋಲಾರ: ಜಗತ್ತಿಗೆ ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆಯ ಚರ್ಚ್‌ಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಕ್ರೈಸ್ತ ಸಮುದಾಯದವರು ಗುರುವಾರ ಕ್ರಿಸ್‌ಮಸ್‌ ಹಬ್ಬ ಆಚರಿಸಲಿದ್ದು, ಸಕಲ ಸಿದ್ಧತೆ ನಡೆದಿದೆ.

ಕ್ಯಾರಲ್ಸ್‌ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು, ನಗರದ ರಂಗಮಂದಿರ ಎದುರು ಇರುವ ಮೆಥೊಡಿಸ್ಟ್‌ ಚರ್ಚ್‌, ಮೆಕ್ಕೆ ವೃತ್ತದಲ್ಲಿರುವ ಮೇರಿ ಚರ್ಚ್‌, ಬೆತ್ತನಿ ಚರ್ಚ್, ಚಿಕ್ಕಬಳ್ಳಾಪುರ ರಸ್ತೆಯ ಈಲಂ ಚರ್ಚ್‌ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಚರ್ಚ್‌ಗಳೂ ಸಿಂಗಾರಗೊಂಡಿವೆ.

ಚರ್ಚ್ ಆವರಣದಲ್ಲಿ ವೈವಿಧ್ಯಮಯದ ಗೋದಳಿಗಳನ್ನು ನಿರ್ಮಿಸಲಾಗಿದೆ. ಏಸು ಕ್ರಿಸ್ತ ಹುಟ್ಟಿದಾಗಿನಿಂದ ಹಿಡಿದು ಶಿಲುಬೆಗೆ ಏರಿಸುವ ತನಕ ಸಾಗಿಬಂದ ಬದುಕಿನ ಕಥನ ಹೇಳುತ್ತಿವೆ. ಅವುಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದು, ಬೆಳಕಿನ ಲೋಕವೇ ಸೃಷ್ಟಿಯಾಗಿದೆ. ಮಕ್ಕಳ ಮನಸೂರೆಗೊಳ್ಳುವ ಸಂತಾಕ್ಲಾಸ್‌ ಪ್ರತಿಕೃತಿಗಳು ಆಕರ್ಷಣೆಯ ಕೇಂದ್ರ ಬಿಂದು ಎನಿಸಿವೆ.

ADVERTISEMENT

ಗುರುವಾರ ಬೆಳಿಗ್ಗೆ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ, ಕ್ರಿಸ್ತನ ಆರಾಧನೆ, ಹಬ್ಬದ ಶುಭಾಶಯ ವಿನಿಮಯ ನಡೆಯಲಿದೆ. ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಕ್ರೈಸ್ತ ಧರ್ಮೀಯರ ಮನೆಗಳಲ್ಲೂ ಹಬ್ಬದ ಸಂಭ್ರಮ ಗರಿಗೆದರಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ತರಹೇವಾರಿ ಆಲಂಕಾರಿಕ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸುವ ಕಾಯಕದಲ್ಲಿ ತೊಡಗಿದ್ದರು. ಕೆಂಪು ಬಣ್ಣದ ನಕ್ಷತ್ರ, ಬಣ್ಣ ಬಣ್ಣದ ಆಕಾಶಬುಟ್ಟಿಗಳು, ಕಿರುದೀಪಗಳಲ್ಲಿ ನಗು ತುಳುಕಿಸುತ್ತಿದ್ದ ಹಸಿರು ಕ್ರಿಸ್‌ಮಸ್‌ ಟ್ರೀ ಇವೆಲ್ಲವೂ ಮನೆಯ ಕಳೆ ಹೆಚ್ಚಿಸಿದ್ದವು. ಅದಕ್ಕಾಗಿ ಎರಡು ದಿನಗಳಿಂದ ತಯಾರಿ ನಡೆದಿದೆ.

ಚರ್ಚ್‌ ಮುಂದೆ ನಿರ್ಮಿಸಿರುವ 30 ಅಡಿ ಎತ್ತರದ ಆಕರ್ಷಕ ಗೋಪುರ 

ಕ್ರಿಸ್‌ಮಸ್‌ ಅಂಗವಾಗಿ ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ಗಳ ಮಾರಾಟ ಜೋರಾಗಿದೆ. ವಿವಿಧ ಶಾಲೆಗಳಲ್ಲಿ ಬುಧವಾರವೇ ಕ್ರಿಸ್‌ಮಸ್ ಆಚರಿಸಲಾಯಿತು. ಪುಟಾಣಿ ಮಕ್ಕಳು ಕೆಂಪು ಟೊಪ್ಪಿ ಧರಿಸಿ, ಸಾಂಟಾ ಕ್ಲಾಸ್‌ ವೇಷಧಾರಿಯಿಂದ ಕೇಕು, ಚಾಕೊಲೆಟ್‌ ಸ್ವೀಕರಿಸಿ ಖುಷಿ ಪಟ್ಟರು.

ಚರ್ಚ್‌ ಆವರಣದಲ್ಲಿರುವ ಮರಕ್ಕೆ ವಿದ್ಯುತ್‌ ದೀಪದ ಅಲಂಕಾರ

ಬುಧವಾರ ರಾತ್ರಿ ಕ್ರಿಸ್‌ಮಸ್ ಕ್ಯಾರಲ್ಸ್ ನಂತರ ಮಹೋನ್ನತ ಗೀತೆಯೊಂದಿಗೆ ವಿಶೇಷ ಪೂಜೆ ನಡೆಯುತ್ತದೆ. ಏಸುಕ್ರಿಸ್ತರ ಸಂದೇಶವನ್ನು ಚರ್ಚ್‌ಗಳಲ್ಲಿ ಹರ್ಷಗೀತೆಗಳ (ಕ್ಯಾರಲ್ಸ್‌) ಮೂಲಕ ರಾತ್ರಿ ಸಾದರಪಡಿಸಲಾಗುತ್ತದೆ. ಚರ್ಚ್‌ಗಳಲ್ಲಿ ಸಂಜೆಯಿಂದಲೇ ನೂರಾರು ಮಂದಿ ಕ್ರೈಸ್ತ ಸಮುದಾಯದವರು ಸೇರಿದ್ದರು.

ಮೆಥೊಡಿಸ್ಟ್‌ ಚರ್ಚ್‌ನಲ್ಲಿ ಗೋದಲಿ ನಿರ್ಮಿಸಿದ್ದು ಕಣ್ಮನ ಸೆಳೆಯಿತು
ಮೆಥೊಡಿಸ್ಟ್‌ ಚರ್ಚ್‌ನಲ್ಲಿ ಗಮನ ಸೆಳೆಯುತ್ತಿರುವ ಸಾಂತಾಕ್ಲಾಸ್‌ನ ಸವಾರಿಯ ಪ್ರತಿಕೃತಿ
ಚರ್ಚ್‌ ಆವರಣದಲ್ಲಿ ಕಣ್ಮನ ಸೆಳೆಯುತ್ತಿರುವ ಅಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.