ADVERTISEMENT

ಕೋಲಾರ | 16ಕ್ಕೆ ಅಡುಗೆ ಕಾರ್ಮಿಕರಿಗೆ ಗುರುತಿನ ಚೀಟಿ–ಕೆ.ವಿ.ಸುರೇಶ್‌

ರಾಜ್ಯದಲ್ಲಿ 10 ಲಕ್ಷ ಅಡುಗೆ ಕಾರ್ಮಿಕರು, ಸಾಮಾಜಿಕ ಭದ್ರತಾ ಮಂಡಳಿ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:13 IST
Last Updated 13 ಫೆಬ್ರುವರಿ 2026, 7:13 IST
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ ರಾಜ್ಯ ಅಧ್ಯಕ್ಷ ಕೆ.ವಿ.ಸುರೇಶ್‌ ಕುಮಾರ್‌, ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ರಮೇಶ್‌ ಬಾಬು ಮಾತನಾಡಿದರು
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ ರಾಜ್ಯ ಅಧ್ಯಕ್ಷ ಕೆ.ವಿ.ಸುರೇಶ್‌ ಕುಮಾರ್‌, ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ರಮೇಶ್‌ ಬಾಬು ಮಾತನಾಡಿದರು    

ಕೋಲಾರ: ದೇಶದಲ್ಲೇ ಮೊದಲ ಬಾರಿ ಅಡುಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಈ ಸಂಬಂಧ ಫೆ.16ರಂದು ಮಧ್ಯಾಹ್ನ 2 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ ರಾಜ್ಯ ಅಧ್ಯಕ್ಷ ಕೆ.ವಿ.ಸುರೇಶ್‌ ಕುಮಾರ್‌ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ‌ ರಚಿಸಲಾಯಿತು. ಈ ಮೂಲಕ ಪಿಂಚಣಿ, ವಿದ್ಯಾಭ್ಯಾಸ ಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳು ದೊರಕಿತು. ರಾಜ್ಯ ಅಡುಗೆ ಕಾರ್ಮಿಕರ ಸಂಘಕ್ಕೆ 2025ರಲ್ಲಿ ಮಾನ್ಯತೆ ಸಿಕ್ಕಿದೆ’ ಎಂದರು.

ಅಡುಗೆ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಮಂಡಳಿ ರಚನೆ ಮಾಡಬೇಕು. ಈ ಮೂಲಕ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಈಗಾಗಲೇ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪವಿರಿಸಿದ್ದು, ಕಲ್ಯಾಣ ‌ಮಂಟಪಗಳಲ್ಲಿ ನಡೆಯು‌ವ ಮದುವೆ ಹಾಗೂ ಇನ್ನಿತರ‌ ಕಾರ್ಯಕ್ರಮಗಳಿಗೆ ಶೇ 1 ಸೆಸ್ ಹಾಕುವಂತೆ ಕೋರಿದ್ದೇವೆ. ಈ ನಿಧಿಯನ್ನು ಅಡುಗೆ ಕಾರ್ಮಿಕರ ‌ಮಂಡಳಿಗೆ‌ ನೀಡಬಹುದು. ಈ ಬಗ್ಗೆ ಕಾರ್ಮಿಕ ಸಚಿವರ ಗಮನ ಸೆಳೆದಿದ್ದೇವೆ ಎಂದು ಹೇಳಿದರು.

ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ರಮೇಶ್‌ ಬಾಬು ಮಾತನಾಡಿ, ‘1 ಲಕ್ಷ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 10 ಲಕ್ಷ ಅಡುಗೆ ಕಾರ್ಮಿಕರು ಇದ್ದಾರೆ. ಪ್ರತಿ ಜಿಲ್ಲೆಯಲ್ಲಿ 3 ಸಾವಿರ ಇದ್ದಾರೆ’ ಎಂದರು.

ಅಡುಗೆ ಕಾರ್ಮಿಕರಿಗೆ ಅಪಘಾತವಾದರೆ, ಗಾಯಗೊಂಡು ಅಂಗವಿಕಲರಾದರೆ ₹ 1ಲಕ್ಷ ವಿಮೆ ಸಿಗುತ್ತಿದೆ. ಸಹಜ ಮರಣ ಹೊಂದಿದರೆ ₹ 10 ಸಾವಿರ ಸಿಗುತ್ತಿದೆ ಎಂದು ತಿಳಿಸಿದರು.

16ರಂದು ಕೋಲಾರಮ್ಮ ದೇವಾಲಯದ ಎದುರು ಇರುವ ಅನ್ನಪೂರ್ಣೇಶ್ವರಿ ದೇವಾಲಯದ ಬಳಿಕ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 27 ರಿಂದ ನಮ್ಮ ಟ್ರಸ್ಟ್‌ ವತಿಯಿಂದ ಪ್ರತಿ ಶುಕ್ರವಾರ ಅನ್ನದಾನವನ್ನು ಇಟಿಸಿಎಂ ವೃತ್ತದ ಬಳಿ ಇರುವ ಟ್ರಸ್ಟ್‌ ಕಚೇರಿ ಆವರಣದಲ್ಲಿ ಮಾಡಲಾಗುವುದು ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಸಕ ಕೊತ್ತೂರು ‌ಮಂಜುನಾಥ್ ವಹಿಸಲಿದ್ದು, ಸಂಸದ ಎಂ.ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಎಂ.ಆರ್.ರವಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶ್ಯಾಮ್ ಕುಮಾರ್,‌ ಕ್ಯಾಲನೂರು ಮಂಜುನಾಥ್, ನಾಗರಾಜ್, ಶ್ರೀಕಾಂತ್, ಮಾಲೂರು ಶ್ರೀನಾಥ್, ವೆಂಕಟನಾರಾಯಣ, ಶ್ಯಾಮಕುಮಾರ್ ಹೋಳೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.