ADVERTISEMENT

ಕೋಲಾರ | 9 ನಿರ್ದೇಶಕರ ಆಯ್ಕೆಗೆ ಚುನಾವಣೆ

ಸಹಕಾರ ಒಕ್ಕೂಟದ ನಿರ್ದೇಶಕರ ಚುನಾವಣೆ; 16 ಸ್ಥಾನಗಳ ಪೈಕಿ 7 ಮಂದಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:18 IST
Last Updated 29 ಸೆಪ್ಟೆಂಬರ್ 2025, 7:18 IST
ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ
ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ   

ಕೋಲಾರ: ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆದಿದ್ದು, ರಾಜಕೀಯ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ತೆರೆ ಮರೆಯ ಕಸರತ್ತು ನಡೆಸಿದರು.

ಒಕ್ಕೂಟದ ಚುನಾಯಿತ 16 ಸ್ಥಾನಗಳ ಪೈಕಿ 9 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಇನ್ನುಳಿದ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಬ್ಬರು ಅಧಿಕಾರಿ (ಡಿಆರ್‌ಸಿಎಸ್‌) ನಿರ್ದೇಶಕರಾಗಿರುತ್ತಾರೆ. ಗೆದ್ದ ಬಳಿಕ ನೂತನ ನಿರ್ದೇಶಕರು ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ವಿಜಯೋತ್ಸವ ಆಚರಿಸಿದರು. ಇಬ್ಬರ ಫಲಿತಾಂಶ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ.

ಕೋಲಾರದ ಬೆಟ್ಟಹೊಸಪುರ ಹಾಲು ಡೇರಿಯ ಮುರಳೀಧರ್‌ ವಿ., ಕೋಲಾರದ ಜಯನಗರ ಸಫಲಮ್ಮದೇವಿ ಮೀನುಗಾರರ ಸಹಕಾರ ಸಂಘದ ಎಸ್.ಆರ್.ಮುರಳಿಗೌಡ, ಬಂಗಾರಪೇಟೆ ತಾಲ್ಲೂಕಿನ ನಾಯಕರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಎಚ್.ಎಂ.ಹನುಮಂತಯ್ಯ, ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ಸೊಸೈಟಿ ಎನ್.ನಾಗರಾಜ್, ಬಂಗಾರಪೇಟೆಯ ಕಾರಮಂಗಲ ಸೊಸೈಟಿಯ ಎಸ್.ಮಂಜುನಾಥ್, ಎಚ್.ಜಿ.ಹೊಸೂರು ಮಹಿಳಾ ಡೇರಿಯ ವಿ.ಸುಬ್ಬಮ್ಮ ಚುನಾವಣೆಯಲ್ಲಿ ವಿಜಯಶಾಲಿಗಳಾಗಿದ್ದಾರೆ.

ADVERTISEMENT

ಇತರ ಸಹಕಾರ ಸಂಘಗಳಿಂದ ನಡೆದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುರಳಿಗೌಡ 16 ಮತ ಪಡೆದರೆ, ಎದುರಾಳಿ ರುದ್ರಸ್ವಾಮಿ 8 ಮತ ಗಳಿಸಿದರು.

8 ಮತಗಳಿಂದ ಗೆದ್ದ ಮುರಳೀಗೌಡ ಮಾತನಾಡಿ, ‘ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ 16 ಮತಗಳು ಬಂದಿದ್ದು 8 ಮತಗಳ ಅಂತರದಿಂದ ಗೆದ್ದಿದ್ದೇನೆ. ಹಿರಿಯ ಸಹಕಾರಿ ಬ್ಯಾಲಹಳ್ಳಿ ಗೋವಿಂದಗೌಡರ ಸಹಕಾರದಿಂದ ಚುನಾವಣೆಯಲ್ಲಿ ಗೆಲುವು ಲಭಿಸಿದೆ.‌ ಎಲ್ಲಾ ಸಹಕಾರ ಸಂಘಗಳ ಡೆಲಿಗೇಟ್‌ಗಳಿಗೆ ಧನ್ಯವಾದಗಳು. ಜೊತೆಗೆ ವಿರೋಧಿಗಳಿಗೂ ಒಳ್ಳೆಯದಾಗಲಿ’ ಎಂದರು.

ಶ್ರೀನಿವಾಸಪುರ ಎಂಪಿಸಿಎಸ್ ಕ್ಷೇತ್ರದಿಂದ ಮಂಜುನಾಥರೆಡ್ಡಿ 41 ಮತ ಹಾಗೂ ಹಾಲಿನ ಡೇರಿ ಮುಳಬಾಗಿಲು ಕ್ಷೇತ್ರದಿಂದ ವಿ.ರಘುಪತಿರೆಡ್ಡಿ 32 ಮತ ಅವರ ಫಲಿತಾಂಶ ಕಾಯ್ದಿರಿಸಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥ ಆಗಬೇಕಿದೆ ಎಂಬುದು ಗೊತ್ತಾಗಿದೆ.

ಸಹಕಾರಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಫಲಿತಾಂಶ ಕ್ಷೇತ್ರ; ಪಡೆದ ಮತಗಳು ಕೃಷಿ ಪತ್ತಿನ ಸಂಘ (ಕೋಲಾರ); ಎನ್‌.ನಾಗರಾಜ್–7 ಸವಿತಾ ಎನ್‌.ಶೆಟ್ಟಿ–6 ಕೃಷಿ ಪತ್ತಿನ ಸಂಘ (ಮುಳಬಾಗಿಲು); ಜೈಪ್ರಕಾಶ್‌ ನಾಯಕ್‌–4 ಎಂ.ಲಕ್ಷ್ಮಿನಾರಾಯಣ–8 ಕೃಷಿ ಪತ್ತಿನ ಸಂಘ (ಬಂಗಾರಪೇಟೆ); ಪಿ.ಎನ್‌.ಕೃಷ್ಣಾರೆಡ್ಡಿ–4 ಎಸ್‌.ಮಂಜುನಾಥ್‌–6 ಹಾಲಿನ ಡೇರಿ (ಕೋಲಾರ); ಮುರಳೀಧರ ವಿ–94 ಎನ್‌.ವಿ.ರಾಜೇಂದ್ರ–62 ಹಾಲಿನ ಡೇರಿ (ಬಂಗಾರಪೇಟೆ); ಎಸ್‌.ನಾರಾಯಣಗೌಡ–19 ಹನುಮಂತಯ್ಯ ಎಚ್.ಎಂ–26 ಹಾಲಿನ ಡೇರಿ (ಮುಳಬಾಗಿಲು); ವಿ.ರಘುಪತಿ ರೆಡ್ಡಿ–32 ಸುರೇಶ್‌–16 ಹಾಲಿನ ಡೇರಿ (ಶ್ರೀನಿವಾಸಪುರ); ಜೆ.ಸಿ.ಮಂಜುನಾಥ್‌ರೆಡ್ಡಿ–41 ಎಸ್‌.ವಿ.ಸುಧಾಕರ್‌–37 ಮಹಿಳಾ ಸಹಕಾರ ಸಂಘಗಳ ಕ್ಷೇತ್ರ; ಆರ್‌.ಅರುಣಾ–16 ವಿ.ಸುಬ್ಬಮ್ಮ–17 ಇತರೆ ಸಹಕಾರ ಸಂಘ; ಮುರಳಿಗೌಡ ಎಸ್‌.ಆರ್–16 ಎಸ್‌.ಆರ್‌.ರುದ್ರಸ್ವಾಮಿ–8

ಹಾಲಿನ ಡೇರಿಗಳಿಂದ ಆಯ್ಕೆ ಸಹಕಾರ ಒಕ್ಕೂಟಕ್ಕೆ ಸದಸ್ಯತ್ವ ಪಡೆದಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ (ಕೋಲಾರ ತಾಲ್ಲೂಕು ಮತಕ್ಷೇತ್ರ) ಬೆಟ್ಟಹೊಸಪುರದ ವಿ.ಮುರಳೀಧರ್ 32 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದರು. ಕಾಂಗ್ರೆಸ್‌ ಬೆಂಬಲದಿಂದ ಕಣಕ್ಕಿಳಿದಿದ್ದ ಮುರಳೀಧರ್‌ 94 ಮತ ಪಡೆದರೆ ಎನ್‌.ವಿ.ರಾಜೇಂದ್ರ 62 ಮತ ಗಳಿಸಿದರು. ಮತ್ತೊಬ್ಬ ಸ್ಪರ್ಧಿ ಸೊಣ್ಣೇಗೌಡ ಆರ್‌. ಅವರಿಗೆ ಒಂದೂ ಮತ ಸಿಗಲಿಲ್ಲ. ‘ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾಂಗ್ರೆಸ್‌ ಪರವಾಗಿವೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ. ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಧನ್ಯವಾದಗಳು’ ಎಂದು ಕೋಮುಲ್‌ ನಿರ್ದೇಶಕ ಚಂಜಿಮಲೆ ಜೆ.ರಮೇಶ್‌ ಹೇಳಿದರು. ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಕೂಡ ಸಹಕಾರ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.