ADVERTISEMENT

ಕೋಲಾರ | ಕಲಬೆರಕೆ ಹಾಲಿನ ದಂಧೆ: ದಾಳಿಗೆ ಸೂಚನೆ

ಅಶುದ್ಧ ಕುಡಿಯುವ ನೀರು ಪೂರೈಕೆದಾರರ ವಿರುದ್ಧ ಕ್ರಮ, ಜಿಲ್ಲಾಧಿಕಾರಿ ಎಂ.ಆರ್‌.ರವಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:12 IST
Last Updated 13 ಫೆಬ್ರುವರಿ 2026, 7:12 IST
ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತಾ ಸಮಿತಿ ಸಭೆ ನಡೆಯಿತು
ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತಾ ಸಮಿತಿ ಸಭೆ ನಡೆಯಿತು   

ಕೋಲಾರ: ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಲಬೆರಕೆ ಹಾಲು ಮತ್ತು ಅಶುದ್ಧ ಕುಡಿಯುವ ನೀರು ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ನಡೆದ ಆಹಾರ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಡೇರಿಗಳು ಮತ್ತು ಹಾಲು ಸಂಗ್ರಹ ಕೇಂದ್ರಗಳಲ್ಲಿ ಕಲಬೆರಕೆ ನಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಕೇಂದ್ರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತಕ್ಷಣವೇ ಮುಚ್ಚಲು ಆದೇಶಿಸಿದರು.

ADVERTISEMENT

ಬಿಸಿಯೂಟ ತಯಾರಿಕೆಗೆ ಬಳಸುವ ಹಾಲು ಮತ್ತು ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳು ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಆಹಾರ ಸುರಕ್ಷತಾ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕರ ಆರೋಗ್ಯ ಅತ್ಯಂತ ಮುಖ್ಯ. ವಿಶೇಷವಾಗಿ ಮಕ್ಕಳಿಗೆ ಪೂರೈಕೆಯಾಗುವ ಹಾಲು ಮತ್ತು ನೀರಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಮುಂದಿನ ಒಂದು ವಾರದೊಳಗೆ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವರದಿ ನೀಡಬೇಕು ಕಟ್ಟಪ್ಪಣೆ ಹೊರಡಿಸಿದರು.

ನಿಯಮಗಳನ್ನು ಸರಿಯಾಗಿ ಓದಿಕೊಳ್ಳದ ಮತ್ತು ಜಾರಿಗೊಳಿಸಲು ವಿಫಲರಾಗುವ ಆಹಾರ ಸುರಕ್ಷತಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ವರದಿಗಾಗಿ ಕಾಯುವ ಮೊದಲು ಪ್ರಾಥಮಿಕ ಹಂತದಲ್ಲೇ ಅಕ್ರಮಗಳನ್ನು ತಡೆಯುವ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್, ಆಹಾರ‌ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್, ಎಲ್ಲಾ ತಾಲ್ಲೂಕು ಆಹಾರ ಸುರಕ್ಷತಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

ಎಂ.ಆರ್‌.ರವಿ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತಾ ಸಮಿತಿ ಸಭೆ ಪ್ರಾಥಮಿಕ ಹಂತದಲ್ಲೇ ಅಕ್ರಮಗಳನ್ನು ತಡೆಯುವ ಕೆಲಸ ಮಾಡಿ ಅನಧಿಕೃತ ಹಾಲು ಸಂಗ್ರಹಣಾ ಕೇಂದ್ರಗಳ ವಿರುದ್ಧ ಸಮರ

ಹೋಟೆಲ್‌ ಹಾಸ್ಟೆಲ್‌ಗೆ ಅಶುದ್ಧ ನೀರು ಕೋಲಾರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಹೋಟೆಲ್‌ ಹಾಗೂ ಹಾಸ್ಟೆಲ್‍ಗಳಲ್ಲಿ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಶುದ್ಧ ನೀರು ಪೂರೈಕೆ ಮಾಡುತ್ತಿರುವ ಖಾಸಗಿ ಏಜೆನ್ಸಿಗಳ ಪರವಾನಗಿ ರದ್ದುಪಡಿಸಲು ಮತ್ತು ಅಂತಹ ಹೋಟೆಲ್‍ಗಳನ್ನು ಜಪ್ತಿ ಮಾಡಲು ಎಂ.ಆರ್.ರವಿ ನಿರ್ದೇಶನ ನೀಡಿದರು.

ಕಾರ್ಯಪಡೆ ರಚನೆಗೆ ಸೂಚನೆ ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಪೊಲೀಸ್‌ ಇನ್‌ಸ್ಪೆಕ್ಟರ್‌ ತಾಲ್ಲೂಕು ಪಂಚಾಯಿತಿ ಇಒ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ್‌) ರಚಿಸಿ ಅನಧಿಕೃತ ಹಾಲು ಸಂಗ್ರಹಣಾ ಕೇಂದ್ರಗಳ ವಿರುದ್ಧ ಸಮರ ಸಾರಲು ಎಂ.ಆರ್.ರವಿ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.