ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಡಿಸಿಸಿ) ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಪುನರಾಯ್ಕೆಯಾಗಿದ್ದು, ಘಟಬಂಧನ್‌ಗೆ ಮುಖಭಂಗವಾಗಿದೆ.
ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ನಿರ್ದೇಶಕರ ಕ್ಷೇತ್ರಕ್ಕೆ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಡೆಲಿಗೇಟ್ ಆಗಿ ಸ್ಪರ್ಧಿಸಿದ್ದ ಅವರು, 12 ಮತಗಳಿಂದ ಶಾಸಕ ಕೆ.ವೈ.ನಂಜೇಗೌಡ ಬೆಂಬಲಿಗ ಮಾಲೂರಿನ ಬಿ.ಆರ್.ಶ್ರೀನಿವಾಸ್ ಅವರನ್ನು ಮಣಿಸಿದ್ದಾರೆ.
ಜಿದ್ದಾಜಿದ್ದಿನ ಪೈಪೋಟಿ ಹಾಗೂ ಭಾರಿ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದ ಚುನಾವಣೆಯಲ್ಲಿ ಗೋವಿಂದಗೌಡ 29 ಮತ ಪಡೆದರೆ, ಪ್ರತಿಸ್ಪರ್ಧಿ ಶ್ರೀನಿವಾಸ್ ಕೇವಲ 17 ಮತ ಗಳಿಸಿದ್ದಾರೆ.
ಈ ಕ್ಷೇತ್ರಕ್ಕೆ ಒಟ್ಟು 48 ಮತಗಳಿದ್ದವು. ಆದರೆ, ಕೊನೆ ಕ್ಷಣದಲ್ಲಿ ಎರಡು ಮತಗಳು ಅನರ್ಹವಾಗಿದ್ದು, 46 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬುಧವಾರ ಮತದಾನ ನಡೆದ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುತ್ತಮುತ್ತ ಬೆಳಿಗ್ಗೆಯಿಂದಲೇ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಮತ ಎಣಿಕೆ ನಡೆಯುವಾಗ ಸ್ಥಳಕ್ಕೆ ಬಂದ ಗೋವಿಂದಗೌಡ ವಿರುದ್ಧ ಕೆಲವರು ಘೋಷಣೆ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ಕಾರಣಕ್ಕೆ ಜಿಲ್ಲಾ ಪೊಲೀಸರು ಭಾರಿ ಬಿಗಿ ಭದ್ರತೆ ಕಲ್ಪಿಸಿದ್ದರು.
ಕಣದಲ್ಲಿದ್ದ ಉಳಿದ 11 ನಿರ್ದೇಶಕ ಕ್ಷೇತ್ರಗಳಿಗಿಂತ ಗೋವಿಂದಗೌಡ ಹಾಗೂ ಶ್ರೀನಿವಾಸ್ ಹಣಾಹಣಿ ರಾಜಕೀಯ ಹಾಗೂ ವಿವಿಧ ಕಾರಣಗಳಿಂದ ಮಹತ್ವ ಪಡೆದುಕೊಂಡಿತ್ತು.
ಗೋವಿಂದಗೌಡ ಅವರು ಡಿಸಿಸಿ ಬ್ಯಾಂಕ್‌ಗೆ ಮತ್ತೆ ಬಾರದಂತೆ ತಡೆಯಲು ಕಾಂಗ್ರೆಸ್‌ನ ಒಂದು ಬಣ (ಘಟಬಂಧನ್) ಭಾರಿ ಪ್ರಯತ್ನ ನಡೆಸಿತ್ತು. ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಲಾಗಿತ್ತು.
ಮತದಾನಕ್ಕೆ ಹಿಂದಿನ ದಿನ (ಮಂಗಳವಾರ) ಲೋಕಾಯುಕ್ತ ಪೊಲೀಸರು ಡಿಸಿಸಿ ಬ್ಯಾಂಕ್‌ನ ಹಣ ದುರ್ಬಳಕೆ ಆರೋಪ ಪ್ರಕರಣದಲ್ಲಿ ಗೋವಿಂದಗೌಡ ಅವರ ನಿವಾಸ, ಬ್ಯಾಂಕ್‌ನ ಕೇಂದ್ರ ಕಚೇರಿ, ಚಿಂತಾಮಣಿ ಶಾಖೆ ಸೇರಿದಂತೆ 10 ಕಡೆ ಶೋಧ ಕಾರ್ಯಾಚರಣೆ ನಡೆಸಿ ಹಲವಾರು ಕಡತ ವಶಕ್ಕೆ ಪಡೆದಿದ್ದರು. ಈ ಹಂತದಲ್ಲಿ ಶೋಧ ಕಾರ್ಯ ನಡೆದಿರುವುದಕ್ಕೆ ಸಹಜವಾಗಿಯೇ ರಾಜಕೀಯ ಬಣ್ಣ ಲಭಿಸಿತ್ತು.
ಎಂ.ಎಲ್.ಅನಿಲ್ ಕುಮಾರ್ ಅವರಂತೂ ಬಹಿರಂಗವಾಗಿ ಗೋವಿಂದಗೌಡ ವಿರುದ್ಧ ಮುಗಿಬಿದ್ದಿದ್ದರು. ಡಿಸಿಸಿ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕೆಂದು ವಿಧಾನ ಮಂಡಲ ಅಧಿವೇಶನದಲ್ಲಿ ಒತ್ತಾಯಿಸಿದ್ದರು. ಬ್ಯಾಂಕ್‌ನಲ್ಲಿ ₹ 400 ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೂಡ ಮಾಡಿದ್ದರು. ಗೋವಿಂದಗೌಡ ವಿರುದ್ಧ ವಿವಿಧ ಠಾಣೆಗಳಲ್ಲಿ ಏಳು ಎಫ್‌ಐಆರ್ ದಾಖಲಾಗಿದ್ದವು.
ಇತ್ತ ಕಾಂಗ್ರೆಸ್‌ನ ಮತ್ತೊಂದು ಬಣದ (ಕೆ.ಎಚ್.ಮುನಿಯಪ್ಪ ಬಣ) ಶಾಸಕರಾದ ರೂಪಕಲಾ ಶಶಿಧರ್, ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಹಲವರು ಗೋವಿಂದಗೌಡ ಬೆಂಬಲಕ್ಕೆ ನಿಂತಿದ್ದರು. ಅಷ್ಟೆ ಅಲ್ಲದೇ; ಶುತ್ರುವಿನ ಶತ್ರು ಮಿತ್ರ ಎಂಬಂತೆ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಕೆಲವರು ಪರೋಕ್ಷವಾಗಿ ಸಹಕಾರ ನೀಡಿರುವುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.