ADVERTISEMENT

ಕೋಲಾರ: ಭಿಕ್ಷುಕನ ಮೊಗದಲ್ಲಿ ನಗು ಅರಳಿಸಿದ ಜಿಲ್ಲಾಧಿಕಾರಿ!

ನಗರಸಭೆಯಿಂದ ಅಂಗವಿಕಲ ವ್ಯಕ್ತಿಗೆ ಬ್ಯಾಟರಿ ಚಾಲಿತ ವಾಹನ ಕೊಡಿಸಿದ ಎಂ.ಆರ್‌.ರವಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:49 IST
Last Updated 17 ಡಿಸೆಂಬರ್ 2025, 5:49 IST
ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಅಂಗವಿಕಲ ಭಿಕ್ಷುಕ ಖಾಸಿಂ ಖಾನ್‌ ಅವರಿಗೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ನೀಡಿದರು
ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಅಂಗವಿಕಲ ಭಿಕ್ಷುಕ ಖಾಸಿಂ ಖಾನ್‌ ಅವರಿಗೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ನೀಡಿದರು   

ಕೋಲಾರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ವ್ಯಕ್ತಿ ಕಂಡು ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರ ಮನ ಮಿಡಿದಿದೆ. ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ಕೊಡಿಸಿ ಆ ವ್ಯಕ್ತಿಯ ಮೊಗದಲ್ಲಿ ನಗು ಅರಳಿಸಿದ್ದಾರೆ.

ಜಿಲ್ಲಾಧಿಕಾರಿಯು ಈಚೆಗೆ ನಗರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ನಿಮಿತ್ತ ನಗರದ ಪ್ರದಕ್ಷಿಣೆ ಕೈಗೊಂಡಿದ್ದರು. ಈ ವೇಳೆ ಬಸ್‌ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ 60 ವರ್ಷ ವಯಸ್ಸಿನ ಖಾಸಿಂ ಖಾನ್ ಎಂಬ ವ್ಯಕ್ತಿಯ ಪರಿಸ್ಥಿತಿ ಗಮನಿಸಿದ್ದಾರೆ.

ಇದೇ ವೇಳೆ ಆ ಖಾಸಿಂ ಖಾನ್‌ ಪರಿಸ್ಥಿತಿ ಬಗ್ಗೆ ಸುತ್ತಲಿನ ಆಟೊ ಚಾಲಕರು ಕೂಡ ಎಂ.ಆರ್.ರವಿ ಗಮನಕ್ಕೆ ತಂದಿದ್ದಾರೆ. ಸುಮಾರು ವರ್ಷಗಳಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದು, ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವಿಚಾರ ತಿಳಿಸಿದ್ದಾರೆ. ಬದುಕು ಸಾಗಿಸಲು ಸರ್ಕಾರದಿಂದ ಏನಾದರೂ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ADVERTISEMENT

ಆದಾಗಿ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿಯು ನಗರಸಭೆ ಆಯುಕ್ತ ನವೀನ್ ಚಂದ್ರ ಜೊತೆ ಮಾತನಾಡಿ ಸೌಲಭ್ಯ ದೊರಕಿಸುವ ಪ್ರಯತ್ನ ಮಾಡಿದ್ದಾರೆ. ಅದರಂತೆ ನಗರಸಭೆಯಿಂದ ಮಂಗಳವಾರ ಎಂ.ಆರ್‌.ರವಿ ಸಮ್ಮುಖದಲ್ಲಿ ಜಿಲ್ಲಾಡಳಿತ ಭವನ ಎದುರು ದ್ವಿಚಕ್ರ ವಾಹನವನ್ನು ನೀಡಲಾಯಿತು.

ಖಾಸಿಂ ಖಾನ್ ಅವರಿಗೆ ವಯಸ್ಸಾಗಿದ್ದು ಭಿಕ್ಷಾಟನೆ ಮಾಡುತ್ತಿದ್ದಾರೆ. ಅವರ ಜೀವನಕ್ಕಾಗಿ ಮುಂದಿನ ದಿನಗಳಲ್ಲಿ ನಗರಸಭೆಯಿಂದಲೇ ಸಣ್ಣ ವ್ಯಾಪಾರಕ್ಕೆ ಪೆಟ್ಟಿಗೆ ಅಂಗಡಿ ಮಾಡಿಕೊಡಬೇಕು. ಪಿಂಚಣಿ ವ್ಯವಸ್ಥೆ ಮಾಡಿಸಬೇಕು ಎಂ.ಆರ್.ರವಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಖಾಸಿಂ ಖಾನ್, ‘ನನ್ನದು ಮೂಲತಃ ಚಿಂತಾಮಣಿ. ಅಪಘಾತದಲ್ಲಿ ಕಾಲು ತುಂಡಾಯಿತು. ಹಲವಾರು ವರ್ಷಗಳಿಂದ ಕೋಲಾರದ ರಹಮತ್‌ ನಗರದಲ್ಲಿ ವಾಸಿಸುತ್ತಿದ್ದೇನೆ. ಬಾಡಿಗೆ ಮನೆ ಇದ್ದು, ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದೇನೆ. ಈಗ ಜಿಲ್ಲಾಧಿಕಾರಿ ಸಹಾಯ ಮಾಡಿದ್ದು, ಖುಷಿ ಉಂಟು ಮಾಡಿದೆ’ ಎಂದರು.

ನಗರಸಭೆಯ ಆಯುಕ್ತ ನವೀನ್ ಚಂದ್ರ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆಯಂತೆ ನಗರಸಭೆಯಿಂದ ಪೆಟ್ಟಿಗೆ ಅಂಗಡಿ ಇಟ್ಟುಕೊಳ್ಳಲು ಸಹಾಯ ಮಾಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಶ್ರೀನಿವಾಸ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಇದ್ದರು.

ನಗರ ಸುತ್ತಾಟ ವೇಳೆ ಖಾಸಿಂ ಖಾನ್‌ ಪರಿಸ್ಥಿತಿ ತಿಳಿಯಿತು. ಸುತ್ತಲಿನವರು ಅವರ ಸಂಕಷ್ಟ ಬಿಚ್ಚಿಟ್ಟರು. ಏನಾದರೂ ಸಹಾಯ ಮಾಡಬೇಕೆಂದುಕೊಂಡೆ. ಇಂಥ ಕೆಲಸ ಮಾಡುವುದು ನನ್ನ ಕರ್ತವ್ಯ.
–ಎಂ.ಆರ್.ರವಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.