ADVERTISEMENT

ಕೋಲಾರ: ಉತ್ತಮ ಪಲ್ಲಕ್ಕಿಗೆ ₹ 1 ಲಕ್ಷ ನಗದು!

ಏ.14ಕ್ಕೆ ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ಧತೆ: ಪಲ್ಲಕ್ಕಿಗಳಿಗೆ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:31 IST
Last Updated 10 ಏಪ್ರಿಲ್ 2025, 15:31 IST
ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು    

ಕೋಲಾರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಇದೇ ತಿಂಗಳ 14 ರಂದು ನಗರದಲ್ಲಿ ಅದ್ದೂರಿಯಾಗಿ ನಡೆಸಲು ವಿವಿಧ ಸಂಘಟನೆಗಳು ತೀರ್ಮಾನಿಸಿದ್ದು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆಕರ್ಷಕ ಪಲ್ಲಕ್ಕಿ, ಸ್ತಬ್ಧಚಿತ್ರಗಳಿಗೆ ನಗದು ಬಹುಮಾನ ದೊರೆಯಲಿದೆ ಎಂದು ದಲಿತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಈ ಮಾಹಿತಿ ನೀಡಿದರು.

‘ಈ ಬಾರಿ ಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸುವ ಪಲ್ಲಕ್ಕಿ, ಸ್ತಬ್ಧಚಿತ್ರ ತೇರುಗಳಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್‌ ಎಂ.ಎಲ್‌.ಅನಿಲ್‌ ಕುಮಾರ್‌ ಸಹಕಾರದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್ ಮೊದಲ ಬಹುಮಾನವಾಗಿ ₹ 1 ಲಕ್ಷ, ಎರಡನೇ ಬಹುಮಾನವಾಗಿ ₹ 75 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 50 ಸಾವಿರ ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿ ಪಲ್ಲಕ್ಕಿಗೂ ₹10 ಸಾವಿರ ಗೌರವಧನ ನೀಡುವುದಾಗಿ ಪ್ರಕಟಿಸಿದ್ದಾರೆ’ ಎಂದರು.

ADVERTISEMENT

‘ಜಯಂತಿಯಂದು ಬೆಳಿಗ್ಗೆ 9 ಗಂಟೆಗೆ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಜನಪ್ರತಿನಿಧಿಗಳು, ದಲಿತ ಹಾಗೂ ಅಲ್ಪಸಂಖ್ಯಾತ ಮುಖಂಡರು ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಮೆರವಣಿಗೆಯಲ್ಲಿ ಭಾಗವಹಿಸುವ ಪಲ್ಲಕ್ಕಿಗಳಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡುತ್ತಾರೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ಅಂಬೇಡ್ಕರ್ ಪಲ್ಲಕ್ಕಿಗಳನ್ನು ತರಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಈ ಬಾರಿ ವಿಶೇಷವಾಗಿ ಹೆಚ್ಚಿನ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮೆರವಣಿಗೆಗೆ ಪಲ್ಲಕ್ಕಿ ತರುವುದಲ್ಲದೆ ಕ್ಲಾಕ್ ಟವರ್ ಬಳಿ ಪಲ್ಲಕ್ಕಿಗಳಿಗೆ ಅದ್ದೂರಿ ಸ್ವಾಗತ ಕೋರಲಿದ್ದಾರೆ. ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮೆರವಣಿಗೆಯು ಬಂಗಾರಪೇಟೆ ವೃತ್ತ, ಡೂಂ ಲೈಟ್ ವೃತ್ತ, ಕ್ಲಾಕ್ ಟವರ್ ಮೂಲಕ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ, ಅಮ್ಮವಾರಿ ಪೇಟೆ, ಮೆಕ್ಕೆ ವೃತ್ತದ ಮೂಲಕ ರಂಗಮಂದಿರ ಸೇರಲಿದೆ. ಈ ಸಂಬಂಧ ಅನುಮತಿ ಕೋರಿದ್ದೇವೆ. ನಂತರ ಜಿಲ್ಲಾಡಳಿತದಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಮಧ್ಯಾಹ್ನ 2 ಗಂಟೆಗೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ಬಹುಮಾನ ಹಾಗೂ ಪ್ರೋತ್ಸಾಹಧನ ವಿತರಿಸಲಾಗುವುದು’ ಎಂದು ತಿಳಿಸಿದರು.

ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಸದಸ್ಯ ಚಂದ್ರಮೌಳಿ, ಮುಖಂಡರಾದ ಟಿ.ವಿಜಯ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಿ.ಪಿ.ಎಸ್.ಮುನಿರಾಜು, ಶ್ರೀಕೃಷ್ಣ, ಅಂಬರೀಶ್, ಅಬ್ದುಲ್ ಖಯ್ಯೂಮ್, ಕುರಿಗಳ ರಮೇಶ್, ಖಾದರೀಪುರ ಬಾಬು, ಮೇಡಿಹಾಳ ಮುನಿ ಆಂಜಿನಪ್ಪ, ಕಿರಣ್, ಸಿ.ವೆಂಕಟೇಶ್ ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ ನೀಡಲಿರುವ ಉಸ್ತುವಾರಿ ಸಚಿವ ಕ್ಲಾಕ್‌ ಟವರ್‌ ಮೂಲಕ ಹಾದು ಹೋಗಲಿರುವ ಮೆರವಣಿಗೆ ಭಾಗವಹಿಸುವ ಪ್ರತಿ ಪಲ್ಲಕ್ಕಿಗೂ ₹ 10 ಸಾವಿರ ಗೌರವಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.