
ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಪಡೆದುಕೊಳ್ಳಲು ಹೋರಾಟ ತೀವ್ರಗೊಳಿಸಲು ನೀರಾವತಿ ಹೋರಾಟ ಸಮಿತಿ ತೀರ್ಮಾನಿಸಿದೆ. ಅಲ್ಲದೇ, ಸದ್ಯದಲ್ಲೇ ಕೋಲಾರದಲ್ಲಿ ಬೃಹತ್ ಮಟ್ಟದ ಜಲಾಗ್ರಹ ಸಮಾವೇಶ ಆಯೋಜನೆಗೂ ಮುಂದಾಗಿದೆ.
ಈ ಸಂಬಂಧ ನಗರ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಟನೆಗಳ ಮುಖಂಡರು, ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ನೀರಾವರಿ ವಿಚಾರದಲ್ಲಿ ಸರ್ಕಾರಗಳು ಕಡೆಗಣಿಸಿಕೊಂಡು ಬಂದಿದ್ದು, ಶಾಶ್ವತ ಯೋಜನೆ ರೂಪಿಸದೆ ಇರುವ ಕುರಿತು ಜನ ಜಾಗೃತಿಗೊಳಿಸಲು ಸಮಾವೇಶ ಅನಿವಾರ್ಯವಾಗಿದೆ. ಇದಕ್ಕೆ ಮೂರು ಜಿಲ್ಲೆಗಳಿಗೆ ಸೇರಿ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಯಿತು.
ಸಂಕ್ರಾತಿಯ ನಂತರ ಜಲಾಗ್ರಹ ಸಮಾವೇಶ ಆಯೋಜನೆ ಮಾಡಲು ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಟನೆಗಳ ಮುಖಂಡರು ಸರ್ವಾನುಮತದಿಂದ ಬೆಂಬಲ ಸೂಚಿಸಿ ಅಭಿಪ್ರಾಯ ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಜನಪ್ರತಿನಿಧಿಗಳಲ್ಲಿರುವ ಇಚ್ಛಾಶಕ್ತಿ ಕೊರತೆಯಿಂದ ನೀರಾವರಿ ಯೋಜನೆ ಜಾರಿಗೊಂಡಿಲ್ಲ. ಹೋರಾಟದ ಸ್ವರೂಪ ತೀವ್ರಗೊಳಿಸುವ ಅನಿವಾರ್ಯವಿದ್ದು, ಜಲಾಗ್ರಹ ಚಳವಳಿ ಯಶಸ್ಸಿಗೆ ಶಕ್ತಿ ಮೀರಿ ಸಹಕಾರ ನೀಡಲಾಗುವುದು’ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ‘ನೀರಾವರಿ ಹೋರಾಟ ಜನರಿಗೆ ಗೊತ್ತಾಗಬೇಕು. ನೀರಿಗಾಗಿ ಭಿಕ್ಷೆ ಬೇಡುತ್ತಿದ್ದರೂ ಸರ್ಕಾರ ಹಾಗೂ ಶಾಸಕರು ಸ್ಪಂದಿಸುತ್ತಿಲ್ಲ. ಸಭೆಗೆ ಎಲ್ಲಾ ಶಾಸಕರು ಬರಬೇಕು. ನಮ್ಮ ಪಾಲಿನ ನೀರು ಕೊಡಬೇಕು’ ಎಂದು ಆಗ್ರಹಿಸಿದರು.
ಸಭೆಯಲ್ಲಿ ಕಾರ್ಮಿಕರ, ರೈತ, ದಲಿತ, ಕನ್ನಡ ಪರ, ವಿದ್ಯಾರ್ಥಿಪರ ಸಂಟನೆಗಳ ಮುಖಂಡರು ಮಾತನಾಡಿದರು.
ಸಂಸದ ಎಂ.ಮಲ್ಲೇಶ್ ಬಾಬು, ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಚಲಾಪತಿ, ವಿವಿಧ ಸಂಟನೆಗಳ ಮುಖಂಡರಾದ ಅಬ್ಬಣಿ ಶಿವಪ್ಪ, ಡಾ.ಡಿ.ಕೆ.ರಮೇಶ್, ಹೊಳಲಿ ಪ್ರಕಾಶ್, ಪ್ರವೀಣ್ ಗೌಡ, ವಿ.ಕೆ.ರಾಜೇಶ್, ಕುರುಬರಪೇಟೆ ವೆಂಕಟೇಶ್, ಚಿನ್ನಪ್ಪರೆಡ್ಡಿ, ನವೀನ್, ನೀಲಟೂರು ಚಂದ್ರಶೇಖರ್, ಮೇಡಿಹಾಳ ರಾಘವೇಂದ್ರ, ಟಿ.ವಿಜಯಕುಮಾರ್, ಟಿ.ಎಂ.ವೆಂಕಟೇಶ್, ಡಾ.ಪ್ರಭಾಕರ್, ರಾಕೇಶ್, ರಾಮು ಶಿವಣ್ಣ, ನಾರಾಯಣಸ್ವಾಮಿ, ರಾಕೇಶ್, ಬಾಬುಮೌನಿ, ಮಾಗೇರಿ ನಾರಾಯಣಸ್ವಾಮಿ ಇದ್ದರು.
ಆಂಧ್ರದಿಂದ ನೀರು ಪಡೆಯಲು ಅವಕಾಶವಿದೆ
ನೀರಿಗಾಗಿ ಜಿಲ್ಲೆಯ ಜನರು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ ಸಂಗತಿ. ನೀರಿಗಾಗಿ ಹೋರಾಟ ಅನಿವಾರ್ಯವಾಗಿದ್ದು ಜಲಾಗ್ರಹ ಸಮಾವೇಶಕ್ಕೆ ಸಹಕಾರ ನೀಡಲಾಗುವುದು ಎಂದು ಸಂಸದ ಎಂ.ಮಲ್ಲೇಶ್ ಬಾಬು ಭರವಸೆ ನೀಡಿದರು. ಪಕ್ಕದ ಆಂಧ್ರದ ಕುಪ್ಪಂಗೆ ನೀರು ಬಂದಿದ್ದು ಅಲ್ಲಿಂದ ನೀರು ಹರಿಸುವ ಬಗ್ಗೆ ಕೇಳಿಕೊಂಡಿದ್ದೇನೆ. ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ಟಿಡಿಪಿ ಸಂಸದರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಡಿಸಿಎಂ ಪವನ್ ಕಲ್ಯಾಣ ಅವರನ್ನು ಸಂಪರ್ಕಿಸಿ ಬೇಡಿಕೆ ಇಟ್ಟಿದ್ದೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಮೂಲಕ ಕೇಂದ್ರ ಸರ್ಕಾರದ ಸಹಕಾರ ಪಡೆದು ಕನಸು ನನಸಾಗಿಸಲು ಪ್ರಯತ್ನ ಮಾಡಲಾಗುವುದು ಎಂದರು. ಮೇಕೆದಾಟು ಎತ್ತಿನಹೊಳೆ ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಕೃಷ್ಣಾ ಭದ್ರಾ ಮೇಲ್ದಂಡೆ ಯೋಜನೆಗಳು ನಮ್ಮ ಮುಂದಿದ್ದು ಹಕ್ಕೊತ್ತಾಯ ಮಂಡಲಿಸಲು ಅಜೆಂಡಾ ಇಟ್ಟುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಸಮಸ್ಯೆ ಬಗ್ಗೆ ಅರಿತು ಹೋರಾಟಕ್ಕೆ ಬನ್ನಿ
ನೀರಿಗಾಗಿ ಹೋರಾಟ ನೆನ್ನೆ ಮೊನ್ನೆಯದಲ್ಲ. ಹಲವು ದಶಕಗಳ ಚಳವಳಿಯಾಗಿದೆ. ನೀರಿನ ಅಭಾವದಿಂದ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ. ಇದರಿಂದಾಗಿಯೇ ಮೂರು ಜಿಲ್ಲೆಗಳ ಜನ ಸೇರಿ ತೆಲಂಗಾಣ ಮಾದರಿ ಹೋರಾಟ ಕೈಗೆತ್ತಿಕೊಳ್ಳಬೇಕಿದೆ. ರಾಜ್ಯ ಸರ್ಕಾರದ ಕಿವಿಹಿಂಡುವ ಕೆಲಸ ನಡೆಯಬೇಕಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಹೇಳಿದರು. ಈವರೆಗೆ ₹ 30 ಸಾವಿರ ಕೋಟಿ ವೆಚ್ಚದ ಯೋಜನೆಗಳು ಜಾರಿಯಾದವೇ ಹೊರತು ಶುದ್ಧ ಕುಡಿಯುವ ನೀರು ಲಭ್ಯವಾಗಿಲ್ಲ. 2013ರಲ್ಲಿ ಯಾಮಾರಿದ ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಪ್ರವೇಶಿಸಿ ಹೋರಾಟದ ದಿಕ್ಕು ತಪ್ಪಿಸಿದರು. ಈಗ ಆ ರೀತಿ ಆಗುವುದು ಬೇಡ ಎಂದರು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಂಚನೆಗೆ ಒಳಗಾಗಿದ್ದೇವೆ. ನೀರಿನ ಪಾಲು ಕೇಳಲು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲು ಸಭೆಗೆ ಆಹ್ವಾನಿಸಿದಾಗ ಯಾರೊಬ್ಬರು ಬರಲಿಲ್ಲ. ಇದರಿಂದಾಗಿ ತೆಲಂಗಾಣ ಮಾದರಿ ಹೋರಾಟವೇ ಜಲಾಗ್ರಹ ಎಂದು ಹೇಳಿದರು.
ಕುಡಿಯುವ ನೀರಿನ ಹಕ್ಕು ಸಿಗಲೇಬೇಕು
ಜನ ಸಂಘಟನೆ ಮಾಡಿ ಕುಡಿಯುವ ನೀರಿನ ಹಕ್ಕನ್ನು ನಾವು ಹೋರಾಟದ ಮೂಲಕವಾದರೂ ಪಡೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹೇಳಿದರು. ರಾಜ್ಯದಲ್ಲಿ ಕೋಲಾರದಲ್ಲಿ ಮಾತ್ರ ಜಲಮೂಲವಿಲ್ಲ. ಕೆ.ಸಿ.ವ್ಯಾಲಿ ನೀರು ಬಂದ ಮೇಲೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕಲುಷಿತ ನೀರು ಕುಡಿಯುತ್ತಿದ್ದೇವೆ. ನಾವು ಸುಮ್ಮನೇ ಕೇಳಿದರೆ ಯಾರೂ ಕೊಡಲ್ಲ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಬೇಕಿದೆ ಎಂದರು. ನೀರು ಶಿಕ್ಷಣ ಚಿಕಿತ್ಸೆ ಉಚಿತವಾಗಿ ಕೊಡಬೇಕು. ಆದರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.