ADVERTISEMENT

ಕೋಲಾರದಲ್ಲಿ ಪುಷ್ಪ ಪ್ರದರ್ಶನ: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..

ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಜೊತೆ ಸೆಲ್ಫಿ ತೆಗೆದು, ರೀಲ್ಸ್‌ ಮಾಡಿ ಖುಷಿಪಡುತ್ತಿರುವ ಯುವತಿಯರು

ಕೆ.ಓಂಕಾರ ಮೂರ್ತಿ
Published 28 ಜನವರಿ 2026, 6:48 IST
Last Updated 28 ಜನವರಿ 2026, 6:48 IST
ಹೂವು ಚೆಲುವೆಲ್ಲಾ ನಂದೆದಿತು
ಹೂವು ಚೆಲುವೆಲ್ಲಾ ನಂದೆದಿತು   

ಕೋಲಾರ: ಹೂವುಗಳ ಆಕರ್ಷಣೆ ಯಾರಿಗಿಲ್ಲ ಹೇಳಿ? ಅದರಲ್ಲೂ ಯುವತಿಯರಿಗೆ, ಮಹಿಳೆಯರಿಗೆ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ನಗರದಲ್ಲಿ ಹೂವಿನ ಲೋಕವೇ ಸೃಷ್ಟಿಯಾಗಿದ್ದು, ಎಲ್ಲರ ಚಿತ್ತ ಫಲಪುಷ್ಪ ಪ್ರದರ್ಶನ ತಾಣದ ಹಾದಿ ಹಿಡಿದಿದೆ.

ಜಿಲ್ಲಾ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ಸೃಷ್ಟಿಯಾಗಿರುವ ಹೂವುಗಳ ಅಂದಚಂದಕ್ಕೆ ಮನಸೋಲದವರೇ ಇಲ್ಲ.

ಯಾವ ಕಡೆ ಕಣ್ಣು ಹಾಯಿಸಿದರೂ ಹೂವುಗಳು ಘಮಲು. ಆ ಹೂವುಗಳೊಂದಿಗೆ ದುಂಬಿಗಳು ಹಾಗೂ ಚಿಟ್ಟೆಗಳ ಚಿನ್ನಾಟ. ಆ ಚಿತ್ತಾಪಹಾರಿ ದೃಶ್ಯದ ಜೊತೆಗೆ ಹೂವುಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿರುವ ಯುವತಿಯರು. ಕೆಲ ಯುವಕ ಯುವತಿಯರು ವಿವಿಧ ಹೂವಿನ ಗೀತೆಗಳಿಗೆ ರೀಲ್ಸ್‌ ಮಾಡುತ್ತಾ ಖುಷಿಪಡುತ್ತಿದ್ದದ್ದು ಕಂಡುಬಂತು. ಶುಭಮಂಗಳ ಸಿನಿಮಾದ ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’ ಎಂಬ ಗೀತೆ, ‘ನಾನು ನನ್ನ ಹೆಂಡತಿ’ ಸಿನಿಮಾದ ‘ಇದು ಹೂವಿನ ಲೋಕವೇ ಇಲ್ಲಿ ಗೆಳೆತಿಯರಿಲ್ಲವೇ?’, ಎಚ್‌2ಒ ಸಿನಿಮಾದ ‘ಹೂವೇ ನಿನ್ನೀ ನಗುವಿಗೆ ಕಾರಣವೇನೇ?’ ಎಂದು ಗುನುಗುತ್ತಾ ಸಂಭ್ರಮಿಸುತ್ತಿದ್ದರು.

ADVERTISEMENT

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳ, ಬಣ್ಣಬಣ್ಣದ ಹೂವುಗಳು ಇವೆ. ಜೊತೆಗೆ ಹೂವು ಹಾಗೂ ಹಣ್ಣುಗಳಿಂದ ರಚನೆಯಾದ ಕಲಾಕೃತಿಗಳು ಆಕರ್ಷಿಸುತ್ತಿವೆ. ಪ್ರಮುಖವಾಗಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಮರಳಿನ ಕಲಾಕೃತಿ ಗಮನ ಸೆಳೆಯುತ್ತಿದೆ. ಮನರಂಜನೆ ಜೊತೆಗೆ ಜ್ಞಾನಾರ್ಜನೆಗೂ ಅವಕಾಶ ನೀಡುತ್ತಿದೆ.

ನವಿಲು, ಚಿಟ್ಟೆ ಸೇರಿದಂತೆ ವಿವಿಧ ಕಲಾಕೃತಿಗಳು ಹಣ್ಣು ತರಕಾರಿಗಳಲ್ಲಿ ಮೂಡಿಬಂದಿವೆ. ಕಲ್ಲಂಗಡಿಯಲ್ಲಿ ಮೂಡಿದ ವಿವಿಧ ಸೆಲೆಬ್ರಿಟಿಗಳ ಚಿತ್ರಗಳು ನೋಡುಗರನ್ನು ವಿಶೇಷವಾಗಿ ಆಕರ್ಷಿಸಿವೆ. ಈಚೆಗೆ ಬಿಗ್ ಬಾಸ್‌ನಲ್ಲಿ ವಿಜೇತರಾದ ಗಿಲ್ಲಿ ನಟ, ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರ ಕಲಾಕೃತಿಗಳಿಗೆ ಸಾರ್ವಜನಿಕರು ಮಾರು ಹೋಗಿದ್ದಾರೆ.

ಕೋಲಾರ ಅವಿಭಜಿತ ಜಿಲ್ಲೆಯ ಮಹನಿಯರ ಛಾಯಾಚಿತ್ರಗಳು ರಂಗೋಲಿಯಲ್ಲಿ ಚಿತ್ರಿಸಲಾಗಿದೆ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ವಿವಿಧ ಭಾವಚಿತ್ರಗಳನ್ನು ಒಂದೇ ಸೂರಿನಡಿ ಇಡಲಾಗಿದೆ. ‌‌ವಿದೇಶಿ ಹೂಗಳ ಪ್ರದರ್ಶನ, ಎತ್ತಿನ ಗಾಡಿಯಲ್ಲಿ ಹೂ ಮತ್ತು ತರಕಾರಿಗಳ ಜೋಡಣೆ, ವಿವಿಧ ಅಲಂಕಾರಿಕ ಹೂ ಕುಂಡಗಳ ಜೋಡಣೆ ಇವೆ.

ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಈ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಕಳೆದ ಎರಡು ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೋಡಿ ತರಹೇವಾರಿ ಹೂವಿಗಳ ಸೌಂದರ್ಯವನ್ನು ಮನತುಂಬಿಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳು, ಮಹಿಳೆಯರು, ಯುವತಿಯರ ಸಂಖ್ಯೆಯೇ ಹೆಚ್ಚಿದೆ. ಈ ಪ್ರದರ್ಶನ ಜ.28ರ ಬುಧವಾರ ಕೊನೆಗೊಳ್ಳಲಿದೆ.

ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಂಗಳವಾರ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು
ಹೂವಿನ ಸೌಂದರ್ಯದ ಜೊತೆಗೆ ವಿಗ್ರಹಗಳು 
ತರಕಾರಿ ಕೆತ್ತನೆಯಲ್ಲಿ ಮೂಡಿಬಂದ ಗಿಲ್ಲಿ ನಟ

ಚಿತ್ತಾಪಹಾರಿ ಫಲಪುಷ್ಪ ಪ್ರದರ್ಶನ; ತರಹೇವಾರಿ ಹೂವು, ಹಣ್ಣುಗಳು ಕಲಾಕೃತಿ ಮಕ್ಕಳು, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಹೂವುಗಳ ಅಂದಚಂದಕ್ಕೆ ಮನಸೋಲದವರೇ ಇಲ್ಲ

ಮೂರೂವರೆ ಸಾವಿರ ಹೂಕುಂಡ ಇಡಲಾಗಿದೆ. ಅಲ್ಲದೇ ಕಲಾಕೃತಿಗಳ ನಿರ್ಮಾಣಕ್ಕೆ ಹೊರಗಡೆಯಿಂದ ಹೂವುಗಳನ್ನು ಖರೀದಿಸಿ ತರಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಎಸ್‌.ಆರ್.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.