ADVERTISEMENT

ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲಂಚ!

ನಿಮ್ಮಲ್ಲಿಯೇ ಕಳ್ಳರಿದ್ದು, ಬೇರೆ ಕಡೆ ಹುಡುಕುತ್ತಿದ್ದೀರಿ ಎಂದು ದೂರಿದ ಶಾಸಕ ಕೊತ್ತೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:46 IST
Last Updated 22 ನವೆಂಬರ್ 2025, 6:46 IST
ಕೋಲಾರದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು. ಶಾಸಕರಾದ ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು. ಶಾಸಕರಾದ ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ಪಾಲ್ಗೊಂಡಿದ್ದರು    

ಕೋಲಾರ: ಅರಣ್ಯ ಇಲಾಖೆಯಲ್ಲಿ‌ ನಡೆದಿದೆ‌‌ ಎನ್ನಲಾದ ಲಂಚಾವತಾರ ಪ್ರಕರಣ ಶುಕ್ರವಾರ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು.

ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪ, ಪ್ರತ್ಯಾರೋಪದ ಚರ್ಚೆ ನಡೆಯುವಾಗ ಶಾಸಕ ಕೊತ್ತೂರು ಮಂಜುನಾಥ್, ‘ಅರಣ್ಯ ಇಲಾಖೆಯ ಸಿಬ್ಬಂದಿಯು ‌ಮರ‌ ಸಾಗಣೆ‌ ವಿಚಾರದಲ್ಲಿ ವ್ಯಾಪಾರಸ್ಥರೊಬ್ಬರಿಂದ ₹ 45 ಸಾವಿರ ಲಂಚ ಪಡೆದಿದ್ದಾರೆ’ ‌ಎಂದು ದೂರಿದರು.

ಅರಣ್ಯ ಇಲಾಖೆಯವರೇ ಮರ ಮಾರುತ್ತಾರೆ? ಕಳ್ಳತನ ಮಾಡುವವವರು ನಿಮ್ಮವರೇ? ನಿಮ್ಮಲ್ಲಿಯೇ ಕಳ್ಳರಿದ್ದಾರೆ? ಅದರೆ,‌ ನೀವು ಬೇರೆ ಕಳ್ಳರನ್ನು ಹುಡುಕುತ್ತಿದ್ದೀರಿ ಎಂದು ಹರಿಹಾಯ್ದರು.

ADVERTISEMENT

ರೈತರೊಬ್ಬರು ತಮ್ಮ ಜಮೀನಿನಲ್ಲಿರುವ ಮರ ಕಡಿಯುತ್ತಾರೆ. ಆ ಮರದ ತುಂಡುಗಳನ್ನು ಬೇರೆಯವರಿಗೆ ಮಾರಿದ್ದು, ಅವರು ತೆಗೆದುಕೊಂಡು ಹೋಗುತ್ತಾರೆ. ಕೋಲಾರಮ್ಮ ಕೆರೆ ಕೋಡಿ ಬಳಿಯ ಅಗ್ನಿಶಾಮಕ ದಳದ ಕಟ್ಟಡ ಬಳಿ ಟ್ರ್ಯಾಕ್ಟರ್‌ನಲ್ಲಿ ಆ ಮರಗಳನ್ನು ತುಂಬಿಕೊಂಡು ಬರುತ್ತಿರುತ್ತಾರೆ. ಅರಣ್ಯ ಇಲಾಖೆ ವಾಚರ್ ಹರೀಶ್, ಆ ವ್ಯಕ್ತಿಯನ್ನು ಹಿಡಿದು ದುಡ್ಡು ಕೊಟ್ಟರೆ ‌ಕೇಸ್ ಹಾಕಲ್ಲ ಎನ್ನುತ್ತಾರೆ. ಫೋನ್ ‌ಪೇ‌ ಮೂಲಕ ಲಂಚ ಹಾಕಿಸಿಕೊಳ್ಳುತ್ತಾರೆ.‌ ವ್ಯಾಪಾರಸ್ಥ ಮುನಿಸ್ವಾಮಿ ಎಂಬುವರ ಮೂಲಕ ಒಟ್ಟು ₹ 45 ಸಾವಿರ ಹಾಕಿಸಿಕೊಳ್ಳುತ್ತಾರೆ ಎಂದು ದಾಖಲೆ ತೋರಿಸಿದರು.

ಡಿಸಿಎಫ್ ಮಾತನಾಡಿ, ಈ ಸಂಬಂಧ ದೂರು ಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಿ ತಪ್ಪಿದ್ದರೆ ಕ್ರಮವಹಿಸಲಾಗುವುದು ಎಂದರು.

ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ಅರಣ್ಯ ಸಂರಕ್ಷಣಾಧಿಕಾರಿಗೆ (ಸಿಎಫ್‌) ಪತ್ರ ಬರೆದು ಆ ವಾಚರ್ ಅಮಾನತು ಮಾಡಲು ಶಿಫಾರಸು ಮಾಡಿ ಎಂದು ಜಿಲ್ಲಾಧಿಕಾರಿ ಹಾಗೂ‌ ಡಿಸಿಎಫ್‌ಗೆ ಸೂಚನೆ ನೀಡಿದರು.

ಫೋನ್‌ ಪೇನಲ್ಲಿ ₹ 45 ಸಾವಿರ ಹಣ ಪಡೆಯಲಾಗಿದೆ ಎಂದು ದೂರಿದ ಶಾಸಕ ತನಿಖೆ ನಡೆಸುತ್ತಿದ್ದು, ತಪ್ಪಿದ್ದರೆ ಕ್ರಮ ವಹಿಸಲಾಗುವುದು: ಡಿಸಿಎಫ್‌ ಅರಣ್ಯ ವಾಚರ್‌ ಅಮಾನತಿಗೆ ಶಿಫಾರಸು ಮಾಡಿ: ಸಚಿವ ಸೂಚನೆ

ರಸ್ತೆ ಬದಿ ಗಿಡ ನೆಡಲು ₹ 150 ಕೋಟಿ‌ ಖರ್ಚು ಮಾಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಎಲ್ಲೆಲ್ಲಿ ಎಷ್ಟೆಷ್ಟು ಗಿಡ ನೆಟ್ಟಿದ್ದೀರಿ ತೋರಿಸಿ ನೋಡೋಣ 

-ಕೊತ್ತೂರು ಮಂಜುನಾಥ್ ಶಾಸಕ

ನಮ್ಮ ಭೂಮಿ ಕಸಿಯಲು ಅವರೇನು ಹಿಟ್ಲರ್ರಾ? ‘ಸರ್ಕಾರದಿಂದ ಮಂಜೂರು ಪಡೆದುಕೊಂಡಿರುವ ನಾವು ರಿಯಲ್‌ ಎಸ್ಟೇಟ್‌ ಮಾಫಿಯಾದವರೇ? ನಮ್ಮ ಭೂಮಿ ಕಬಳಿಸಲು ಅವರೇನು ಹಿಟ್ಲರ್ರಾ?’ ಎಂದು ಕೆಲ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕೆ‌ಡಿಪಿ ಸಭೆಗೂ ಮುನ್ನ ಸಚಿವ ಬೈರತಿ ಸುರೇಶ್‌ ಎದುರು ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗರೆದರು. ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಆಗಿದೆ ಎಂದು ರೈತರನ್ನು ಒಕ್ಕಲೆಬ್ಬಿಸುತ್ತಿದ್ದು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದರಿಂದ ಸಣ್ಣ ರೈತರು ಬೀದಿಪಾಲಾಗಿದ್ದು ನ್ಯಾಯ ಕೊಡಿಸಬೇಕು ಎಂದು ಮುಳಬಾಗಿಲು ಕೋಲಾರ ಶ್ರೀನಿವಾಸಪುರ ಕೆಜಿಎಫ್‌ ತಾಲ್ಲೂಕಿನಿಂದ ಬಂದಿದ್ದ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಆರ್‌.ಶ್ರೀನಿವಾಸನ್‌ ಮಾತನಾಡಿ ‘ಬೆಳೆ ಬೆಳೆದಿರುವ ರೈತರ ಜಮೀನನ್ನು ಏಕಾಏಕಿಯಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಗೋಮಾಳದಿಂದ ರೈತರಿಗೆ ಮಂಜೂರು ಆಗಿರುವ ಜಾಗವನ್ನು ದಬ್ಬಾಳಿಕೆಯಿಂದ ತೆರವು ಮಾಡಿದ್ದಾರೆ’ ಎಂದು ದೂರಿದರು. ರೈತರ ಮನವಿಗೆ ಸ್ಪಂದಿಸಿದ ಸಚಿವ ಬೈರತಿ ಸುರೇಶ್‌ ಕಂದಾಯ ಅರಣ್ಯ ಹಾಗೂ ರೈತರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಗೆ ಸೂಚಿಸಿದರು. ಅಲ್ಲದೇ ಜಿಲ್ಲಾಮಟ್ಟದ ಎಸ್‌ಐಟಿ ವರದಿ ಸಲ್ಲಿಸಿ ರಾಜ್ಯಮಟ್ಟದ ಎಸ್‌ಐಟಿ ತೀರ್ಮಾನ ಮಾಡುವರೆಗೆ ಒಕ್ಕಲೆಬ್ಬಿಸದಂತೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.