ಕೋಲಾರ: ತಾಲ್ಲೂಕಿನ ಹರಟಿ ಬಳಿ ಅರಣ್ಯ ಪ್ರದೇಶದ ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಇಲಾಖೆಯವರು ತೆರವು ಮಾಡಿ ಗಿಡಗಳನ್ನು ನೆಡಲು ತೆಗೆದಿದ್ದ ಗುಂಡಿಗಳನ್ನು ರೈತರು ಹಾಗೂ ಮಹಿಳೆಯರ ಭಾನುವಾರ ಮುಚ್ಚಿದ್ದಾರೆ.
ಈ ಪ್ರದೇಶದೊಳಗೆ ಏಕಾಏಕಿ ಪ್ರವೇಶಿಸಿ, ‘ಯಾವುದೇ ಜಂಟಿ ಸರ್ವೇ ಮಾಡದೆ ಏಕಾಏಕಿ ನಮ್ಮ ಜಮೀನುಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಪ್ರಾಣ ಹೋದರೂ ಜಮೀನು ಬಿಡಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಅನ್ನ ಕೊಡುವ ರೈತ, ನಮ್ಮ ಭೂಮಿ ನಮ್ಮ ಹಕ್ಕು ಎಂದು ಜೈ ಹಾಕಿದರು. ಇವರಿಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟಾಚಲಪತಿ, ಕಾರ್ಯಕರ್ತರು ಬೆಂಬಲವಾಗಿ ನಿಂತರು.
ಈ ವೇಳೆ ಸ್ಥಳಕ್ಕೆ ಬಂದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ರೈತರನ್ನು ತಡೆಯಲು ಮುಂದಾದರು. ಗಿಡಗಳನ್ನು ನೆಡಲು ಅರಣ್ಯ ಇಲಾಖೆ ತೆಗೆದಿದ್ದ ಗುಂಡಿಗಳನ್ನು ಮುಚ್ಚುವಾಗ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಹೀಗಾಗಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ತಮ್ಮ ಬಳಿ ದಾಖಲೆಗಳಿವೆ, ತಮ್ಮ ಭೂಮಿಯನ್ನು ತಮಗೆ ಬಿಟ್ಟುಕೊಡಿ ಎಂದು ರೈತರು ಆಗ್ರಹಿಸಿದರು. ಪ್ರತಿಭಟನಕಾರರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಅಲ್ಲೇ ಅಡುಗೆ ಮಾಡಲಾರಂಭಿಸಿದರು.
‘₹ 20 ಲಕ್ಷ ಖರ್ಚು ಮಾಡಿ ಕಾಂಪೌಂಡ್, ಕೊಳವೆಬಾವಿ ಹಾಕಿ ಪಾಲಿ ಹೌಸ್ ನಿರ್ಮಿಸಿದ್ದೆವು. ಒಡವೆ ಇಟ್ಟು ಮತ್ತೆ ₹ 5 ಲಕ್ಷ ಸಾಲ ಮಾಡಿದ್ದೆ. ಬೆಳೆ ಬೆಳೆಯಲು ಬಿಡಿ ಎಂದು ಅರಣ್ಯ ಇಲಾಖೆಯವರನ್ನು ಕೋರಿದ್ದೆ. ಆದರೆ, ಪಾಲಿ ಹೌಸ್ ಒಡೆದು ಹಾಕಿದ್ದಾರೆ. ಸಾಲ ತೀರಿಸುವುದಾದರೂ ಹೇಗೆ? ಬಡ್ಡಿ ಕಟ್ಟಲು ಹಣವಿಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಈ ಜಮೀನು ನಮ್ಮ ಸುಪರ್ದಿಯಲ್ಲಿದ್ದು, ದುರಸ್ತಿಯಾಗಿದೆ’ ಎಂದು ರೈತ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
‘ಜಮೀನಿಗೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲೆಗಳಿವೆ. ತಾಕತ್ತಿದ್ದರೆ ಅರಣ್ಯ ಇಲಾಖೆಯವರು ತಮ್ಮ ದಾಖಲಿ ತೋರಿಸಲಿ ನೋಡೋಣ’ ಎಂದು ರೈತರು ಸವಾಲು ಹಾಕಿದರು.
ತಾಲ್ಲೂಕಿನ ಎಚ್.ಮಲ್ಲಂಡಹಳ್ಳಿ, ಹರಟಿ, ಶಿಳ್ಳಂಗೆರೆ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದೆ ಎನ್ನಲಾಗಿದ್ದ ಸುಮಾರು 343 ಎಕರೆ ಭೂಮಿಯನ್ನುಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ತೆರವು ಮಾಡಿತ್ತು. ಒತ್ತುವರಿ ಪ್ರದೇಶದಲ್ಲಿದ್ದ ರೈತರ ಬೆಳೆ, ಕೆಲವೊಂದು ಕಟ್ಟಡಗಳು ತೆರವು ಮಾಡಿ ಅರಣ್ಯ ಇಲಾಖೆಯು ಟ್ರೆಂಚ್ ಮಾಡಿ ತೆರವು ಮಾಡಿದ ಜಾಗದಲ್ಲಿ ಗಿಡಗಳನ್ನು ನೆಡುವ ಸಲುವಾಗಿ ಗುಂಡಿ ತೆಗೆಯಲಾಗಿತ್ತು.
ಎಚ್.ಮಲ್ಲಂಡಹಳ್ಳಿ ಹಾಗೂ ಹರಟಿ, ಶಿಳ್ಳಂಗೆರೆ ಗ್ರಾಮದ ಸರ್ವೆ ನಂ 31ರಲ್ಲಿ ಅರಣ್ಯ ಇಲಾಖೆಗೆ ಸೇರಿದ 934 ಎಕರೆ ಭೂಮಿ ಇದೆ. ಅದರಲ್ಲಿ ಕಂದಾಯ ಇಲಾಖೆ 343 ಎಕರೆ ಭೂಮಿಯನ್ನು ಭೂರಹಿತ ರೈತರಿಗೆ ದರ್ಖಾಸ್ತು ಮೂಲಕ ಮಂಜೂರು ಮಾಡಿದೆ. ಇನ್ನ ಉಳಿಕೆ 616 ಎಕರೆ ಭೂಮಿ ಮಾತ್ರ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಹಲವು ವರ್ಷಗಳಿಂದ ನೂರಾರು ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ರೈತರು ಸ್ವಾಧೀನದಲ್ಲಿದ್ದು, ಅವರ ಹೆಸರಲ್ಲಿ ದಾಖಲೆ ಪತ್ರಗಳು ಬರುತ್ತಿವೆ.
ಆದರೆ, ಅರಣ್ಯ ಇಲಾಖೆಯವರು ಈ ಜಾಗ ಮೈಸೂರು ಅರಸರ ಕಾಲದಿಂದಲೂ ಇಲಾಖೆಗೆ ಸೇರಿದ್ದು, ನೋಟಿಫೈಡ್ ಫಾರೆಸ್ಟ್ ಎಂದು ಹೇಳಿ ಒತ್ತುವರಿಯಾಗಿದ್ದ 343 ಎಕರೆ ಭೂಮಿಯನ್ನು ಎರಡು ತಿಂಗಳ ಹಿಂದೆ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ಮಾಡಿದ್ದರು.
ಈಗಿರುವಾಗಲೇ ಈಚೆಗೆ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಇದೇ ವಿಚಾರ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ದಿಶಾ ಸಭೆಯಲ್ಲೂ ಸುದೀರ್ಘ ಚರ್ಚೆ ನಡೆದಿತ್ತು. ಈ ವೇಳೆ ಶಾಸಕರು ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದಾದ ನಂತರ ರೈತರು ಜನಪ್ರತಿನಿಧಿಗಳು ಬೆಂಬಲವಿದೆ ಎಂದು ಭಾವಿಸಿ ರೈತರು ಏಕಾಏಕಿ ಅರಣ್ಯ ಇಲಾಖೆ ತೆರವು ಮಾಡಿದ್ದ ಪ್ರದೇಶಕ್ಕೆ ಪ್ರವೇಶಿಸಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಸದ್ಯ ಪೊಲೀಸರು ರೈತರನ್ನು ವಾಪಸ್ ಕಳಿಸಿದ್ದಾರೆ. ಆದರೆ, ಈ ರೀತಿ ಅತಿಅಕ್ರಮ ಪ್ರವೇಶವನ್ನು ಸಹಿಸುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ನಡೆಯುತ್ತಿರುವ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ರೈತರ ನಡುವೆ ಮಾತಿನ ಚಕಮಿಕಿ ಎಚ್.ಮಲ್ಲಂಡಹಳ್ಳಿ, ಹರಟಿ, ಶಿಳ್ಳಂಗೆರೆ ಗ್ರಾಮದಲ್ಲಿನ ಅರಣ್ಯ ಪ್ರದೇಶ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಬೆಂಬಲ
ಕೋಲಾರ ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ 3 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡಿದ್ದೇವೆ. ಇನ್ನೂ 8 ಸಾವಿರ ಎಕರೆ ತೆರವುಗೊಳಿಸಬೇಕಿದೆ. ಆ.30ಕ್ಕೆ ಜಂಟಿ ಸರ್ವೆ ನಡೆಸುತ್ತೇವೆಸರೀನಾ ಸಿಕ್ಕಲಿಗಾರ್ ಡಿಸಿಎಫ್
ಪಹಣಿಯಲ್ಲಿ ನಮ್ಮ ಹೆಸರಿನಲ್ಲಿ ಈ ಜಮೀನು ಇದ್ದು ಉಳುಮೆ ಮಾಡುತ್ತೇವೆ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಮ್ಮ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾರೆಹರಟಿ ಭಾಗದ ರೈತರು
ನುಗ್ಗಿದ್ದು ರೈತರಲ್ಲ; ಭೂಗಳ್ಳರು ‘
ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಸುಪರ್ದಿಗೆ ಪಡೆದಿರುವ ಅರಣ್ಯ ಇಲಾಖೆಯ ಭೂಮಿಯೊಳಗೆ ಮತ್ತೆ ನುಗ್ಗಿದವರು ರೈತರಲ್ಲ; ಭೂಗಳ್ಳರು ಬೇನಾಮಿಗಳ ಕುಮ್ಮಕ್ಕು ಇದೆ’ ಎಂದು ಡಿಸಿಎಫ್ ಸರೀನಾ ಸಿಕ್ಕಲಿಗಾರ್ ತಿರುಗೇಟು ನೀಡಿದರು. ‘ಅರಣ್ಯ ಇಲಾಖೆ ಭೂಮಿಯೊಳಗೆ ನುಗ್ಗಿ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಎಫ್‌ಐಆರ್ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ‘ಕೆಲ ರಿಯಲ್ ಎಸ್ಟೇಟ್ ಮಾಫಿಯಾದವರು ಅರಣ್ಯ ಭೂಮಿಯನ್ನು ಕಡಿಮೆ ದರಕ್ಕೆ ಬಡ ರೈತರಿಗೆ ಶಿಕ್ಷಕರಿಗೆ ಮಾರಾಟ ಮಾಡಿ ಟೋಪಿ ಹಾಕಿದ್ದಾರೆ. ಅಂಥವರ ಒತ್ತಾಯಕ್ಕೆ ಬಿದ್ದು ಈಗ ರಿಯಲ್ ಎಸ್ಟೇಟ್‌ದಾರರು ಭೂಗಳ್ಳರು ಅರಣ್ಯ ಇಲಾಖೆ ಮೇಲೆ ದೋಷಾರೋಪ ಮಾಡುತ್ತಿದ್ದಾರೆ’ ಎಂದರು. ‘ಅರಣ್ಯ ಇಲಾಖೆ ಭೂಮಿ ಉಳಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಸ್ವಂತ ಜಮೀನನ್ನು ಉಳಿಸಲು ಅಲ್ಲ. ಅರಣ್ಯ ಉಳಿದರೆ ನಾವು ಉಳಿಯುತ್ತೇವೆ. ಜನರು ಎಚ್ಚೆತ್ತುಕೊಂಡು ಈ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು. ಮೊದಲೇ ಜಿಲ್ಲೆಯಲ್ಲಿ ಅರಣ್ಯ ಭೂಮಿ ಕಡಿಮೆ ಇದೆ’ ಎಂದು ಹೇಳಿದರು. ‘ಅರಣ್ಯ ಜಮೀನನ್ನು ಆಕ್ರಮಿಸಿಕೊಳ್ಳಲು ಹಿಂದೆ ಟ್ರ್ಯಾಕ್ಟರ್ ಜೆಸಿಬಿ ತಂದಿದ್ದು ವಶಪಡಿಸಿಕೊಂಡಿದ್ದೆವು. ಹೀಗಾಗಿ ಈ ಬಾರಿ ಕೂಲಿ ಕೊಟ್ಟು ಜನರನ್ನು ಕರೆದು ಬಂದಿದ್ದಾರೆ’ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.