ADVERTISEMENT

ಫೆ.6ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ: 3,500ಕ್ಕೂ ಹೆಚ್ಚು ಮಂದಿ ಭಾಗಿ‌ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:14 IST
Last Updated 23 ಜನವರಿ 2026, 7:14 IST
ಕೋಲಾರದಲ್ಲಿ ಗುರುವಾರ ಸರ್ಕಾರಿ ನೌಕರರ ಕ್ರೀಡಾಕೂಟ ‌ಸಂಬಂಧ ಪದಾಧಿಕಾರಿಗಳ ಸಭೆ ನಡೆಯಿತು
ಕೋಲಾರದಲ್ಲಿ ಗುರುವಾರ ಸರ್ಕಾರಿ ನೌಕರರ ಕ್ರೀಡಾಕೂಟ ‌ಸಂಬಂಧ ಪದಾಧಿಕಾರಿಗಳ ಸಭೆ ನಡೆಯಿತು   

ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಫೆ.6 ಮತ್ತು 7 ರಂದು ಎರಡು ದಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ಎ. ಅಜಯ್ ಕುಮಾರ್ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಗುತ್ತಿದೆ. ಫೆ.6ರಂದು ಬೆಳಿಗ್ಗೆ 11 ಗಂಟೆಗೆ ಉಸ್ತುವಾರಿ ಸಚಿವ ಬೈರತಿ ಸುರೇಶ ಕ್ರೀಡಾಕೂಟಕ್ಕೆಚಾಲನೆ ನೀಡಲಿದ್ದಾರೆ. ಶಾಸಕ ಕೊತ್ತೂರು. ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ, ಸಂಸರ ಮಲ್ಲೇಶ್ ಬಾಬು, ವಿಧಾನ ಪರಿಷತ್ ಶಾಸಕ ಎಂ.ಎಲ್. ಅನಿಲಕುಮಾರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದರು.

ADVERTISEMENT

ಸರ್ಕಾರಿ ನೌಕರರ ಜೊತೆಗೆ ನಗರದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೂ ಪಾಲ್ಗೊಂಡು ಸಂಜೆ 6 ಗಂಟೆಯ ನಂತರ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಕ್ರೀಡಾಕೂಟಕ್ಕೆ ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಎಲ್ಲಾ ನೌಕರರಿಗೆ ಮಾಹಿತಿ ನೀಡಲಾಗಿದೆ. ಕ್ರೀಡಾಕೂಟ ಉದ್ಘಾಟನೆ ದಿನ‌ ಬೆಳಿಗ್ಗೆ 11 ರ ವರೆಗೆ ನೋಂದಣಿಗೆ ಅವಕಾಶವಿದೆ. 3,500ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇಲ್ಲಿ ಗೆದ್ದವರು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಅರ್ಹರಾಗಲಿದ್ದು, ಅಲ್ಲಿಂದ 1೦೦ ಮಂದಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ. ಇದರಿಂದ ಸರ್ಕಾರಿ ನೌಕರ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದರು.

ಕ್ರೀಡಾಕೂಟಕ್ಕೆ ತೀರ್ಪುಗಾರರು ನೇಮಕವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಳ್ಳಲಿದೆ. ಇಂತಹ ಕಾರ್ಯಕ್ರಮಗಳಿಂದ ನೌಕರರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಎಲ್ಲರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಕ್ರೀಡೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಟಿ-ಶರ್ಟ್ ಹಾಗೂ ಟೋಪಿಗಳನ್ನು ವಿತರಿಸಲಾಗುವುದು. ರಾಜ್ಯಮಟ್ಟದಲ್ಲಿ ಆಡುವ ನೌಕರರಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಲಾಗುವುದು. ಈ ಬಾರಿ ಶಿಸ್ತು ಮತ್ತು ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು ಎಲ್ಲಾ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉದ್ಘಾಟನೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪಥಸಂಚಲನದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ಕೆ. ಎನ್.ಮಂಜುನಾಥ್, ಕಾರ್ಯದರ್ಶಿ ಸತೀಶ್, ರಾಜ್ಯ ಪರಿಷತ್ ಸದಸ್ಯ ಶ್ರೀನಿವಾಸರೆಡ್ಡಿ, ಖಜಾಂಚಿ ಮುರಳಿಮೋಹನ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷರು ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷ ಬೈರೇಗೌಡ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರು ರವಿ, ಕೆ. ಜಿ. ಎಫ್ ತಾಲ್ಲೂಕು ಅಧ್ಯಕ್ಷರು ನರಸಿಂಹಮೂರ್ತಿ, ಹಿರಿಯ ಕಾರ್ಯಧ್ಯಕ್ಷ ಅನಿಲ್ ಸೇರಿದಂತೆ ಕಾರ್ಯಕಾರಿಣಿ ಸದಸ್ಯರು, ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು, ನಿರ್ದೇಶಕರು ಗಳು, ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.