ADVERTISEMENT

ಕೋಲಾರ | ಮುಂದಿನ ವರ್ಷದಿಂದ ಅದ್ದೂರಿ ದಸರೆ 

ವಿಜಯದಶಮಿ ದಿನ ಅಂಬಾರಿಯಲ್ಲಿ ಕೋಲಾರಮ್ಮನ ಮೆರವಣಿಗೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:18 IST
Last Updated 4 ಅಕ್ಟೋಬರ್ 2025, 6:18 IST
ಕೋಲಾರದಲ್ಲಿ ಬನ್ನಿ ಪೂಜೆ ಮುಗಿಸಿ ನಗರಕ್ಕೆ ಮೆರವಣಿಗೆ ಮೂಲಕ ಹಿಂತಿರುಗಿದ ಉತ್ಸವಮೂರ್ತಿ ಪಲ್ಲಕ್ಕಿಗಳ ಮೇಲೆ ಗಣ್ಯರು ಪುಷ್ಪವೃಷ್ಟಿ ಮಾಡಿದರು 
ಕೋಲಾರದಲ್ಲಿ ಬನ್ನಿ ಪೂಜೆ ಮುಗಿಸಿ ನಗರಕ್ಕೆ ಮೆರವಣಿಗೆ ಮೂಲಕ ಹಿಂತಿರುಗಿದ ಉತ್ಸವಮೂರ್ತಿ ಪಲ್ಲಕ್ಕಿಗಳ ಮೇಲೆ ಗಣ್ಯರು ಪುಷ್ಪವೃಷ್ಟಿ ಮಾಡಿದರು     

ಕೋಲಾರ: ನಗರದಲ್ಲಿ ಸೌಹಾರ್ದದ ಸಂಕೇತವಾಗಿ ಮುಂದಿನ ವರ್ಷದಿಂದ 9 ದಿನ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ದಸರಾ ಹಬ್ಬ ಆಚರಿಸೋಣ. ವಿಜಯದಶಮಿಯಂದು ನಗರದೇವತೆ ಕೋಲಾರಮ್ಮ ದೇವಿಯನ್ನು ಆನೆಯ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಬೃಹತ್ ಮೆರವಣಿಗೆ ನಡೆಸೋಣ ಎಂದು ಐಪಿಎಸ್‌ ಅಧಿಕಾರಿ ಡಿ.ದೇವರಾಜ್ ತಿಳಿಸಿದರು.

ನಗರದಲ್ಲಿ ವಿಜಯದಶಮಿ ಅಂಗವಾಗಿ ದಸರಾ ಉತ್ಸವ ಸಮಿತಿಯಿಂದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಕೆ.ಆರ್.ಧನರಾಜ್ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದೇವತೆಗಳ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿ ನೆನಪಿನ ಕಾಣಿಕೆ ವಿತರಿಸಿ ಅವರು ಮಾತನಾಡಿದರು.

ಕೆ.ಎಸ್.ಗಣೇಶ್ ಅಧ್ಯಕ್ಷತೆಯ ದಸರಾ ಉತ್ಸವ ಸಮಿತಿ ಮುಂದಿನ ವರ್ಷದಿಂದ ಅದ್ದೂರಿ ದಸರಾ ಆಚರಣೆಗೆ ರೂಪುರೇಷೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ದಸರೆ ಎಲ್ಲಾ ಜಾತಿ, ಧರ್ಮಗಳು ಒಂದೆಡೆ ಸೇರಿ ನಡೆಸುವ ನಾಡಹಬ್ಬವಾಗಿದ್ದು, ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ದಸರೆಯ ಕೊನೆ ದಿನ ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದವರೆಗೆ ಆನೆಗಳ ಅಂಬಾರಿಯಲ್ಲಿ ಕೋಲಾರಮ್ಮ ದೇವತೆ ಕೂರಿಸಿ ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ದೇವರ ಭವ್ಯ ಉತ್ಸವ ಮಾಡೋಣ ಎಂದು ತಿಳಿಸಿದರು.

ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಮಾತನಾಡಿ, ಕೋಲಾರದಲ್ಲಿ ಅದ್ದೂರಿ ದಸರಾ ಆಚರಿಸುವ ಆಶಯವಿದ್ದು, ದೇವರಾಜ್‌ ಸಹಕಾರ ನೀಡಲು ಮುಂದಾಗಿರುವುದು ಸಂತಸದ ವಿಷಯ ಎಂದರು.

ಅಂಬೇಡ್ಕರ್ ನಗರದ ಶ್ರೀರೇಣುಕಾ ಯಲ್ಲಮ್ಮ ದೇವಾಲಯ ಧರ್ಮಾಧಿಕಾರಿ ಎ.ಕೃಷ್ಣಪ್ಪ, ಕೋಲಾರ ನಗರದಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಎಲ್ಲಾ ಜಾತಿ ಧರ್ಮೀಯರು ಕೂಡಿ ಆಚರಿಸುವಂತ ವಾತಾವರಣವನ್ನು ದಸರಾ ಉತ್ಸವ ಸಮಿತಿ ರೂಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗಾಂಧಿನಗರ ನಾರಾಯಣಸ್ವಾಮಿ, ಶಾಂತಿ ಸೌಹಾರ್ದ ಸಮಿತಿಯ ಇಮ್ರಾನ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಿಂದ ಬನ್ನಿ ಪೂಜೆ ಮುಗಿಸಿಕೊಂಡು ದೇವಾಲಯಗಳಿಗೆ ವಾಪಸ್ ಹಿಂತಿರುಗಿದ ಇಪ್ಪತ್ತಕ್ಕೂ ಹೆಚ್ಚು ದೇವತೆಗಳ ಉತ್ಸವ ಮೂರ್ತಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಗತಿಸಿ ನೆನಪಿನ ಕಾಣಿಕೆ ನೀಡಲಾಯಿತು.

ವೇದಿಕೆಯಲ್ಲಿ ಸಮಿತಿ ಕಾರ್ಯದರ್ಶಿ ಹರೀಶ್‍ಬಾಬು, ನಗರಸಭೆ ಸದಸ್ಯರಾದ ಮರಳೀಗೌಡ, ಮಂಜುನಾಥ್, ಕಠಾರಿಪಾಳ್ಯ ಮಂಜುನಾಥ್, ಸಾಧಿಕ್ ಪಾಷಾ, ಬಜರಂಗದಳ ಬಾಲಾಜಿ, ಅಪ್ಪಿ ಆನಂದ್, ಎಪಿಎಂಸಿ ಪುಟ್ಟರಾಜು, ಚಾಂದ್‍ಪಾಷಾ, ಕೌಸರ್, ಮು.ರಾಘವೇಂದ್ರ, ಮುಖಂಡರಾದ ತ್ಯಾಗರಾಜು, ಪ್ರಶಾಂತ್, ಕಿಶೋರ್, ಮುನಿವೆಂಕಟಯಾದವ್, ನಿತಿನ್, ವೆಂಕಟಾಚಲಪತಿ, ಜನಾರ್ದನ್, ಬಿಜೆಪಿ ಮಂಜುನಾಥ್, ಸಾಮಾ ಹರೀಶ್, ನಾಗರಾಜ್, ಅಜಿತ್, ಪಾಪಣ್ಣ, ಡೆಕೋರೇಷನ್ ಕೃಷ್ಣ, ಅಶೋಕ್, ಸಾಯಿಮೌಳಿ, ಅರ್ಜುನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.