ADVERTISEMENT

ಕೋಲಾರ | ಹಿಂದಿನ ಸರ್ಕಾರದಲ್ಲಿ ಆಗದ್ದು, ನಮ್ಮಿಂದ ಕಾರ್ಯಗತ: ಸತೀಶ ಜಾರಕಿಹೊಳಿ

₹10 ಕೋಟಿ ವೆಚ್ಚದಲ್ಲಿ ಎರಡು ಸೇತುವೆ, ರಸ್ತೆ ನಿರ್ಮಾಣ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:51 IST
Last Updated 9 ಅಕ್ಟೋಬರ್ 2025, 2:51 IST
ಸೇತುವೆ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕರಾದ ರೂಪಕಲಾ ಶಶಿಧರ್‌, ಎಸ್‌.ಎನ್‌.ನಾರಾಯಣಸ್ವಾಮಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜೊತೆಗಿದ್ದರು
ಸೇತುವೆ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕರಾದ ರೂಪಕಲಾ ಶಶಿಧರ್‌, ಎಸ್‌.ಎನ್‌.ನಾರಾಯಣಸ್ವಾಮಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜೊತೆಗಿದ್ದರು    

ಕೋಲಾರ\ಬೇತಮಂಗಲ: ಹಿಂದಿನ ಸರ್ಕಾರದ ಅವಧಿಯಲ್ಲಿ ಆಗದ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ. ಈ ಭಾಗದ ಜನರ ದಶಕಗಳ ಕನಸನ್ನು ನನಸು ಮಾಡಿದೆ. ಸಮಸ್ಯೆಗಳನ್ನು ಅರ್ಥ ಮಾಡಿಸುವವರು ಇದ್ದರೆ ಸ್ಪಂದಿಸಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕೆಜಿಎಫ್‌ ತಾಲ್ಲೂಕಿನ ನಲ್ಲೂರು ಹಾಗೂ ನತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪಾಲರ್‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎರಡು ಸೇತುವೆ ಹಾಗೂ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹಳ ವರ್ಷಗಳಿಂದ ಸೇತುವೆ ಇಲ್ಲದೆ ಈ ಭಾಗದ ಮಹಿಳೆಯರು, ರೈತರು, ಕಾರ್ಮಿಕರು, ಮಕ್ಕಳು ಓಡಾಡಲು ತೊಂದರೆ ಆಗಿತ್ತು. ಮಳೆಗಾಲದಲ್ಲಿ ಹಳ್ಳಿಗಳ ಸಂಪರ್ಕ ಕಡಿತಗೊಳ್ಳುತಿತ್ತು. ಈ ಸಮಸ್ಯೆ ಕುರಿತು ಶಾಸಕಿ ರೂಪಕಲಾ ಅವರು ನನ್ನ ಗಮನಕ್ಕೆ ತಂದರು. ಲೋಕೋಪಯೋಗಿ ಇಲಾಖೆಯಿಂದ ₹6 ಕೋಟಿ ವೆಚ್ಚದಲ್ಲಿ ಸೇತುವೆ, ₹4 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಮಾಡಿ ತೊಂದರೆ ನಿವಾರಣೆ ಮಾಡಲಾಗಿದೆ ಎಂದರು.

ADVERTISEMENT

ಬಹಳ ವರ್ಷಗಳಿಂದ ಆಗದ ಈ ಕೆಲಸವನ್ನು ನಮ್ಮ ಸರ್ಕಾರದಲ್ಲಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕರ ಪ್ರಯತ್ನದಿಂದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲಾಗಿದೆ. ಆದೇ ರೀತಿ ಪ್ರಸಕ್ತ ಸಾಲಿನಲ್ಲಿ 200 ಕಾಲಸಂಕ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರತಿ ಸಂಕ ನಿರ್ಮಾಣಕ್ಕೆ ₹10 ಲಕ್ಷದಿಂದ 30 ಲಕ್ಷ ಆಗುತ್ತದೆ. ಇದೇ ರೀತಿ ಕೋಲಾರ ಜಿಲ್ಲೆಯಲ್ಲಿ ನದಿ, ಕಾಲುವೆ ಹಾದು ಹೋಗಿರುವ ಕಡೆ ಆದ್ಯತೆ ಮೇರೆಗೆ ಸೇತುವೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ‘ರಾಜ್ಯ ಸರ್ಕಾರದ ಸಹಕಾರದಿಂದ ಈ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನು ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು. ಸರ್ಕಾರ ಸ್ಪಂದಿಸುತ್ತದೆ’ ಎಂದರು.

ಕೆಜಿಎಫ್‌ನ ಈ ಭಾಗದಲ್ಲಿ 1,200 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ತ್ವರಿತವಾಗಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಬೇಕು. ಮಾರಿಕುಪ್ಪಂ ಮತ್ತು ಕುಪ್ಪಂ ರೈಲ್ವೆ ಮಾರ್ಗಕ್ಕೆ ಅನುದಾನ ಮೀಸಲಿರಿಸಿದೆ. ಈ ಯೋಜನೆಗಳನ್ನು ಸಾಕಾರಗೊಳಿಸಬೇಕು. ಕೋಚ್ ಫ್ಯಾಕ್ಟರಿ ‌ಮಾಡಬೇಕು ಎಂದು ಹೇಳಿದರು.

ಶಾಸಕಿ ರೂಪಕಲಾ ಶಶಿಧರ್‌ ಮಾತನಾಡಿ, ‘ಇತಿಹಾಸ ಸೃಷ್ಟಿಸಿ, ಚರಿತ್ರೆಯಲ್ಲಿ ಉಳಿಯುವಂತ ಕೆಲಸ ಆಗಿದೆ. ಸಚಿವ ಸತೀಶ ಜಾರಕಿಹೊಳಿ ಜನರ ಸಮಸ್ಯೆಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದು, ಅವರ ಕಾಳಜಿಗೆ ಋಣಿಯಾಗಿರುತ್ತೇವೆ’ ಎಂದರು.

ಪಾಲರ್‌ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ತರಲಾಗಲಿಲ್ಲ. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನದ ವಿಚಾರದಲ್ಲಿ ಬದ್ಧವಾಗಿರಲು ಶಾಸಕರಿಗೆ ತಿಳಿಸಿದಾಗ ಅನುದಾನಕ್ಕೆ ಬೇಡಿಕೆ ಇಡಲಾಗಲಿಲ್ಲ. ಜನರು ಅನುಭವಿಸುತ್ತಿದ್ದ ತೊಂದರೆಗಳ ಬಗ್ಗೆ ಚಿತ್ರಗಳನ್ನು ತೋರಿಸಿ ಅರ್ಥೈಸಿದಾಗ ಸಚಿವರು ಪ್ರತಿಕ್ರಿಯೆ ನೀಡಲಿಲ್ಲ, ಮೌನವಾಗಿದ್ದರು. ಆಗ ನಿರಾಸೆ ಆಯಿತು. ನಂತರ ಅನುದಾನ ಮಂಜೂರು ಮಾಡಿದರು ಎಂದು ಸಂತಸ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ಐದಾರು ಮಂದಿ ವಿಶೇಷ ಗುಣ ಲಕ್ಷಣಗಳು ಇರುವ ಸಚಿವರು ಇದ್ದಾರೆ. ಸತೀಶ ಜಾರಕಿಹೊಳಿ ಮೌಢ್ಯತೆ ವಿರುದ್ಧ ಹೆಜ್ಜೆ ಇಡುವ ವ್ಯಕ್ತಿ, ಬಹಳ ಸರಳತೆ ಹೊಂದಿದ್ದಾರೆ ಎಂದು ಹೊಗಳಿದರು.

ಚಿಗರಾಪುರ, ಐಯ್ಯಪಲ್ಲಿ, ನಲ್ಲೂರು, ನತ್ತ, ಕಳ್ಳಿಕುಪ್ಪ, ಚಿನ್ನಪನಹಳ್ಳಿ ಮಾರ್ಗವಾಗಿ ಮದ್ದಿನಾಯಕನಹಳ್ಳಿ ಜಯಮಂಗಲ ಸೇರುವ ಮಾರ್ಗದಲ್ಲಿ ವ್ಯಾಪಾರಿ, ಮಹಿಳೆ, ವಿದ್ಯಾರ್ಥಿ, ರೈತರ ಸಮಸ್ಯೆಗೆ ಮುಕ್ತಿ ಸಿಕ್ಕಿದೆ ಎಂದು ಖುಷಿ ವ್ಯಕ್ತಪಡಿಸಿದರು.

ತಾಲ್ಲೂಕು ಆಡಳಿತ, ನಗರ ಭಾಗದಲ್ಲಿ ರಾಜಗೋಪುರ, ಅಂಬೇಡ್ಕರ್‌ ಅಧ್ಯಯನ ಕೇಂದ್ರ, ಸರ್ಕಾರಿ ಶಾಲೆ ಕಾಮಗಾರಿ ಕೈಗೆತ್ತಿಕೊಂಡಿದೆ. ರಸ್ತೆ, ಸೇತುವೆ ಸಿಮೀತವಾಗದೆ ಇದರ ಜತೆಗೆ ಈ ಭಾಗದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಿಕೊಡಬೇಕು ಎಂದು ಕೋರಿದರು.

ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಕೆರೆಗಳ ಬಗ್ಗೆ ಸೇರಿದಂತೆ ವಿವಿಧ ಹಾಡು ಹಾಡಿದರು. ಕೊಂಡರಾಜನಹಳ್ಳಿ ಮಂಜುಳಾ ನಿರೂಪಿಸಿದರು.

ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸದಸ್ಯ ವಳ್ಳಲ್‌ ಮುನಿಸ್ವಾಮಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಜಗದೀಶ್‌, ಕಾರ್ಯನಿರ್ವಾಹಕ ಎಂಜಿನಿಯರ್ ರಾಮಮೂರ್ತಿ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್‌ ಭರತ್‌, ಅರ್ಯವೈಷ್ಯ ನಿಗಮ ಮಂಡಳಿ ಅಧ್ಯಕ್ಷ ರಾಮಪ್ರಸಾದ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌, ಮುಖಂಡ ಪ್ರಸಾದ್‌ ಬಾಬು, ಅ.ಮು.ಲಕ್ಷ್ಮಿನಾರಾಯಣ, ತಾಲ್ಲೂಕು ಸಮಿತಿಯ ರಾಧಾಕೃಷ್ಣ, ವೆಂಕಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿನು ಕಾರ್ತಿಕ್, ಅಯ್ಯಪಲ್ಲಿ ಮಂಜುನಾಥ್, ದುರ್ಗಾಪ್ರಸಾದ್, ಇನಾಯತ್ ಉಲ್ಲಾ, ಹಂಗಳ ರಮೇಶ್, ಚಂದ್ರಪ್ಪ, ಕಮಸಂದ್ರ ನಾಗರಾಜ್, ಭಾರ್ಗವ್ ರಾಂ, ಬೌಂಡರಿ ಬಾಬು, ಶ್ರೀರಾಮಪ್ಪ, ಬ್ಯಾಟೆಗೌಡ, ಸುರೇಂದ್ರ ಗೌಡ, ನಲ್ಲೂರು ಶಂಕರ್, ವೆಂಕಟಾಚಲಪತಿ, ಮಂಜುನಾಥ್, ವೆಂಕಟರಾಮಪ್ಪ, ಸುಕನ್ಯಾ, ರಾಮ್ ಬಾಬು, ಚನ್ನಕೇಶವ ರೆಡ್ಡಿ, ಗೋಪಾಲ್ ಇದ್ದರು.

ನಲ್ಲೂರು ಹಾಗೂ ನತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪಾಲರ್‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ
ಸಚಿವ ಸತೀಶ ಜಾರಕಿಹೊಳಿ ಅವರು ಸಾಹುಕಾರ ಎಂಬುದನ್ನು ಕೇಳಿದ್ದೆ. ಆದರೆ ಅವರು ಮನಸ್ಸಿನಿಂದ ಸಾಹುಕಾರರು ವಿಶಾಲ ಮನಸ್ಸು ಹೊಂದಿದವರು ರೂಪಕಲಾ.
– ಶಶಿಧರ್‌, ಕೆಜಿಎಫ್‌ ಶಾಸಕಿ
ಜಿಲ್ಲೆಯಲ್ಲಿ ರೈಲು ಯೋಜನೆ ಜಾರಿಗೊಳಿಸುವ ಜವಾಬ್ದಾರಿ ಸಂಸದರಾದ ಕೋಲಾರದ ಮಲ್ಲೇಶ್ ಬಾಬು ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್‌ ಮೇಲಿದೆ. ಕೇಂದ್ರದ ಮೇಲೆ ಒತ್ತಡ ತರಬೇಕು.
– ಕೆ.ಎಚ್‌.ಮುನಿಯಪ್ಪ, ಆಹಾರ ಸಚಿವ
ರಾಜಕೀಯವಾಗಿ ಬೆಳೆಯಲು ಅಪ್ಪ ಕಾರಣ
ತಂದೆ ಕೆ.ಎಚ್‌.ಮುನಿಯಪ್ಪ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ ಹಲವಾರು ಸವಾಲು ಎದುರಿಸಿದ್ದಾರೆ. ಅವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.‌ ನಮಗೂ ಕಲಿಸಿದ್ದಾರೆ. ನಿತ್ಯ ಭಗವದ್ಗೀತೆ ಶ್ಲೋಕ ಓದಿಯೇ ರಾತ್ರಿ ಊಟ ಮಾಡುತ್ತಾರೆ. ನನಗೆ 15ನೇ ವಯಸ್ಸಿನಲ್ಲಿ ‌ವಾಲ್ಮೀಕಿ ರಾಮಾಯಣ ಪರಿಚಯಿಸಿ ಸುಂದರಖಾಂಡ ಹೇಳಿಕೊಟ್ಟರು. ಗುರುವಾಗಿ ನಿಂತು ಅವರು ಮಾಡಿದ ಪಾಠ ನಾನು ರಾಜಕೀಯದಲ್ಲಿ ‌ಗಟ್ಟಿಯಾಗಿ ನಿಲ್ಲಲು ಕಾರಣ‌ವಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್‌ ಭಾವುಕವಾಗಿ ನುಡಿದರು.

ಎಸ್‌ಎನ್‌ಎನ್‌ ಬಗ್ಗೆ ಅಭಿಮಾನ

ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಬಹಳ ಕೋಪವೆಂದು ನಾನು ಅವರೊಂದಿಗೆ ಮಾತನಾಡುವುದು ಕಡಿಮೆ. ಆದರೆ ಇಬ್ಬರೂ ಸೇರಿ ಕೆಜಿಎಫ್‌ ಹಾಗೂ ಬಂಗಾರಪೇಟೆ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಅವರ ಬಗ್ಗೆ ನನಗೆ ಅಭಿಮಾನ ಗೌರವವಿದೆ. ವಿಶೇಷವಾಗಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿಪಡಿಸುತ್ತೇವೆ. ಎರಡೂ ಕ್ಷೇತ್ರಗಳಿಗೆ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಶಾಸಕಿ ರೂಪಕಲಾ ಹೇಳಿದರು.

ರೂಪಮ್ಮಗೆ ಸೀಟು ಕೊಡಿ
ಎಸ್‌ಎನ್‌ಎನ್‌ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಶಶಿಧರ್ ನಿಂತುಕೊಂಡೇ ಸಚಿವರನ್ನು ಹಾಗೂ ಗಣ್ಯರನ್ನು ವಿಚಾರಿಸುತ್ತಿದ್ದರು. ಆಗ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ತಮ್ಮ ಆಸನದಿಂದ ಎದ್ದು ನಿಂತು ರೂಪಮ್ಮಗೆ ಸೀಟು ಕೊಡಿ. ನೀನು ಕುತ್ಕೊಮ್ಮ ಕುತ್ಕೊಮ್ಮ ಎಂದು ಹಟ ಹಿಡಿದರು. ರೂಪಕಲಾ ಕುಳಿತುಕೊಳ್ಳದೆ ಕಾರ್ಯಕ್ರಮದ ನಿರ್ವಹಣೆಯಲ್ಲಿ ತೊಡಗಿದ್ದರು.

ಮಳೆಯಲ್ಲೇ ಬಿರಿಯಾನಿಗೆ ಪೈಪೋಟಿ

ನಲ್ಲೂರು–ನತ್ತ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿವಿಧ ಹಳ್ಳಿಗಳಿಂದ ಜನರು ಬಂದಿದ್ದರು. ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟಕ್ಕೆ ಚಿಕನ್‌ ಬಿರಿಯಾನಿ ಹಾಗೂ ರೈಸ್‌ ಬಾತ್‌ ಮೊಸರನ್ನ ಮಾಡಿಸಲಾಗಿತ್ತು. ಜನರು ಮಳೆಯಲ್ಲಿಯೇ ಬಿರಿಯಾನಿಗೆ ಪೈಪೋಟಿ ನಡಸಿದರು. ಮಳೆಯಲ್ಲೇ ನಿಂತು ಊಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.