ADVERTISEMENT

ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ: ಬಣ ಜಗಳ, ಸಭೆ ಮೊಟಕು!

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:47 IST
Last Updated 25 ಡಿಸೆಂಬರ್ 2025, 7:47 IST
ಕೋಲಾರದಲ್ಲಿ ‌ಬುಧವಾರ ನಡೆದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಘಟಕದ ಸಭೆಯಲ್ಲಿ ಬಣಗಳ ಜಗಳ
ಕೋಲಾರದಲ್ಲಿ ‌ಬುಧವಾರ ನಡೆದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಘಟಕದ ಸಭೆಯಲ್ಲಿ ಬಣಗಳ ಜಗಳ   

ಕೋಲಾರ: ಮನರೇಗಾದ ಹೆಸರು ಬದಲಾಯಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕರೆದಿದ್ದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ ಕೊನೆಯ ಹಂತದಲ್ಲಿ ಬಣ ಜಗಳ ಶುರುವಾದ ಕಾರಣ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಮೊಟಕುಗೊಳಿಸಿ ಹೊರಬಂದರು.

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಅಭಿಷೇಕ್‌ ದತ್ತ ಹಾಗೂ ರಾಜ್ಯ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮಿಗಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೊತ್ತೂರು ಮಂಜುನಾಥ್‌ ಬೆಂಬಲಿಗರು ಹಾಗೂ ಕೆ.ಎಚ್‌.ಮುನಿಯಪ್ಪ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಸೀತಿಹೊಸೂರು ಮುರಳಿಗೌಡ ಅವರನ್ನು ನೇಮಕ ಮಾಡಿರುವುದಕ್ಕೆ ಶಾಸಕರ ಬಣದ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರ ಜೊತೆ ಚರ್ಚೆಸದೇ ನೇಮಕ ನಡೆದಿದೆ ಎಂದು ದೂರಿದರು.

ADVERTISEMENT

ಇನ್ನೇನು ಸಭೆ ಮುಗಿಯುವ ಹಂತಕ್ಕೆ ಬಂದಿತ್ತು. ಆಗ ಸಭೆಗೆ ಪ್ರವೇಶಿಸಿ ಪ್ರಶ್ನೆ ಎತ್ತಿದರು. ಕೊತ್ತೂರು ಮಂಜುನಾಥ್‌ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ‌ ಉದ್ಘಾಟನೆಗೆ ಅಡ್ಡಿಪಡಿಸಿದವರಿಗೆ ಪಟ್ಟ ಕಟ್ಟಲಾಗಿದೆ ಆಕ್ರೋಶ ವ್ಯಕ್ತಪಡಿಸಿದರು.

ಹೊರಗೆ ಹೋಗಿ‌ ಎಂದರೆ ಹೋಗುತ್ತೇವೆ. ‘ತಪ್ಪು ಮಾಡಿದ್ದನ್ನು ಪ್ರಶ್ನೆ ಮಾಡಬಾರದೇ? ಕ್ರಮ ಆಗಬೇಕು ಎಂದು ಶಾಸಕರ ಬೆಂಬಲಿಗರಾದ ಖಾದ್ರಿಪುರ ಬಾಬು, ರಾಜ್‌ಕುಮಾರ್‌, ಕುಮಾರ್‌ ಸೇರಿದಂತೆ ಕೆಲವರು ಪಟ್ಟು‌ ಹಿಡಿದರು.

ಇದಕ್ಕೆ ಕೆ.ಎಚ್‌.ಮುನಿಯಪ್ಪ ಬಣದವರು ಪ್ರತಿರೋಧ ವ್ಯಕ್ತಪಡಿಸಿದರು. ಪಕ್ಷಕ್ಕೆ 30 ವರ್ಷಗಳಿಂದ ದುಡಿದವರನ್ನು‌ ದೂರವಿಡಲಾಗುತ್ತಿದೆ. ನಾವು ಪಕ್ಷ ಕಟ್ಟಿದವರು, ನಿಷ್ಠಾವಂತ ಕಾರ್ಯಕರ್ತರು ಎಲ್ಲಿ ಹೋಗಬೇಕು? ಜೆಡಿಎಸ್‌, ಬಿಜೆಪಿ ಜೊತೆ ಗುರುತಿಸಿಕೊಂಡವರಿಗೆ, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಪದವಿ ಕೊಡಲಾಗುತ್ತಿದೆ. ಬರೀ ಶಾಸಕರ ಬೆಂಬಲಿಗರನ್ನೇ ವಿವಿಧ ಸ್ಥಾನಗಳಿಗೆ ನೇಮಕ ಮಾಡಲಾಗುತ್ತಿದೆ ಎಂದು ವಾಗ್ದಾಳಿ‌ ನಡೆಸಿದರು.

ಅಭಿಷೇಕ್‌ ದತ್ತ ಮಧ್ಯ ಪ್ರವೇಶಿಸಿ ಸಮಾಧಾನಪಡಿಸಲು ಪ್ರಯತ್ನಿಸಿದರು. ‘ಇದು ಮನರೇಗಾ ವಿಚಾರದಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಹಮ್ಮಿಕೊಂಡಿರುವ ಸಭೆ. ಏಕೆ ಅಡ್ಡಿಪಡಿಸುತ್ತಿದ್ದೀರಿ? ಆಸಕ್ತಿ ಇಲ್ಲವಾದರೆ ಹೊರಗೆ ಹೋಗಿ’ ಎಂದರು.

ಇಷ್ಟಾದರೂ ಎರಡೂ ಬಣಗಳ ಮುಖಂಡರು ಕೇಳಲಿಲ್ಲ. ಬದಲಾಗಿ ಪರಸ್ಪರ ದೂರಿನ ಸುರಿಮಳೆಗರೆದರು. ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು. ಹೀಗಾಗಿ, ಅಭಿಷೇಕ್‌ ದತ್ತ ತಮ್ಮ ಭಾಷಣ ಮೊಟಕುಗೊಳಿಸಿ, ಸಚಿನ್‌ ಮಿಗಾ ಹಾಗೂ ಕಿಸಾನ್‌ ಘಟಕದ ಪದಾಧಿಕಾರಿಗಳ ಜೊತೆ ಹೊರನಡೆದರು.

ವಾಗ್ವಾದದ ವೇಳೆ ಕಿಸಾನ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌ ಮೌನಕ್ಕೆ ಶರಣಾಗಿದ್ದರು.

ಈ ಮಧ್ಯೆ ಕಾರ್ಯಕರ್ತರೊಬ್ಬರು ಎದ್ದು ನಿಂತು, ‘ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಕಾಂಗ್ರೆಸ್‌ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ದೊಡ್ಡ ಹೋರಾಟ ಮಾಡಿದ್ದಾರೆ. ಆದರೆ, ಅವರಿಗೆ ಅಧಿಕಾರ‌ ಸಿಕ್ಕಿಲ್ಲ’ ಎಂದಾಗ ಮುಖಂಡರು ಆಕ್ಷೇಪಿಸಿ, ‘ಇದು ಕಿಸಾನ್‌ ಕಾಂಗ್ರೆಸ್‌ ಸಭೆ, ಅವೆಲ್ಲಾ ಇಲ್ಲಿ ಚರ್ಚಿಸಬಾರದು’ ಎಂದರು.

ಸಭೆಯಲ್ಲಿ ವೆಂಕಟೇಶ್‌, ಆಂಜಿನಪ್ಪ, ಲಾಲ್‌ ಬಹದ್ದೂರು ಶಾಸ್ತ್ರಿ, ಸುಭಾಶ್‌ ಗೌಡ, ರಾಜ್ಯ ಹಾಗೂ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.