ADVERTISEMENT

ಸಮೃದ್ಧಿ, ವೆಂಕಟಶಿವಾರೆಡ್ಡಿ ಕಾಂಗ್ರೆಸ್‌ಗೆ‌ ಬರ್ತಾರೆ: ಕೊತ್ತೂರು ಮಂಜುನಾಥ್

ಡಿಕೆಶಿ, ಸಿದ್ದರಾಮಯ್ಯ ಜೊತೆ ಒಂದು ಸುತ್ತಿನ ಚರ್ಚೆ: ಶಾಸಕ ಕೊತ್ತೂರು ಮಂಜುನಾಥ್‌, ಎಂಎಲ್‌ಸಿ ಅನಿಲ್‌ ಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 16:16 IST
Last Updated 9 ಫೆಬ್ರುವರಿ 2024, 16:16 IST
ಕೋಲಾರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿದರು
ಕೋಲಾರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿದರು   

ಕೋಲಾರ: ‘ಜೆಡಿಎಸ್ ಶಾಸಕರಾದ ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಜಿ.ಕೆ.ವೆಂಕಟಶಿವಾರೆಡ್ಡಿ ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಈ ಸಂಬಂಧ ಜಿಲ್ಲೆಯ ಹಿರಿಯ ಮುಖಂಡರೊಬ್ಬರ ನೇತೃತ್ವದಲ್ಲಿ ಇವರಿಬ್ಬರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಒಂದು ಸುತ್ತಿನ ಮಾತುಕತೆ ನಡೆದಿದೆ' ಎಂದು ಕೋಲಾರ ಶಾಸಕ, ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಇವರಿಬ್ಬರನ್ನೂ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದಾಗಿ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್ ಕುಮಾರ್ ಹಾಗೂ ನನ್ನ ಬಳಿ ಶಿವಕುಮಾರ್ ಚರ್ಚಿಸಿದ್ದಾರೆ. ಪಕ್ಷಕ್ಕೆ ಸ್ವಾಗತಿಸುವುದಾಗಿ ಸಮ್ಮತಿ ಸೂಚಿಸಿದ್ದೇವೆ’ ಎಂದರು.

‘ಲೋಕಸಭೆ ಚುನಾವಣೆಗೆ ಮುನ್ನವೇ ಇವರಿಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಒಳ್ಳೆಯದು. ಶ್ರೀನಿವಾಸಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ವೆಂಕಟಶಿವಾರೆಡ್ಡಿ ಅವರ ನಾಮಪತ್ರಕ್ಕೆ ರಮೇಶ್ ಕುಮಾರ್ ಸೂಚಕರಾಗಲಿದ್ದಾರೆ. ಮುಳಬಾಗಿಲಿನಲ್ಲಿ ನಾನು ಸಮೃದ್ಧಿ ಮಂಜುನಾಥ್ ಅವರಿಗೆ ಸೂಚಕನಾಗುತ್ತೇನೆ. ಇಬ್ಬರನ್ನೂ ಗೆಲ್ಲಿಸುವ ಜವಾಬ್ದಾರಿ ನಮ್ಮದು' ಎಂದು ತಿಳಿಸಿದರು‌.

ADVERTISEMENT

‘ಸಮೃದ್ಧಿ ಮಂಜುನಾಥ್‌ ಅವರಿಗೆ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ನೀಡಿದರೂ ನಾನು ಸ್ವಾಗತಿಸುತ್ತೇನೆ. ಪಕ್ಷ ತೀರ್ಮಾನ ಕೈಗೊಂಡರೆ ನಾವೆಲ್ಲಾ ಒಪ್ಪಲೇಬೇಕಾಗುತ್ತದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವೆಂಕಟಶಿವಾರೆಡ್ಡಿ ಸ್ಪರ್ಧಿಸಿದರೆ ಮುಂದೆ ರಮೇಶ್‌ ಕುಮಾರ್‌ ಅವರನ್ನು ಪಕ್ಷ ಎಂಎಲ್‌ಸಿ ಮಾಡಬಹುದು ಅಥವಾ ರಾಜ್ಯಸಭೆಗೆ ಕಳುಹಿಸಬಹುದು. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ’ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್‌, ‘ನಮ್ಮ ಪಕ್ಷದ ಹಿರಿಯ ನಾಯಕರೊಬ್ಬರು ಜೆಡಿಎಸ್‌ನ ಈ ಇಬ್ಬರು ಶಾಸಕರನ್ನು ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿ ಕಾಂಗ್ರೆಸ್‌ ಸೇರ್ಪಡೆ ಸಂಬಂಧ ಚರ್ಚಿಸಿದ್ದಾರೆ. ನಾವು ಕೂಡ ರಮೇಶ್‌ ಕುಮಾರ್‌ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದೇವೆ. ಅವರಿಬ್ಬರೂ ಸ್ಥಾನಕ್ಕೆ ರಾಜೀನಾಮೆ ಬರುವುದಾದರೆ ಸ್ವಾಗತ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು.

ಮುಳಬಾಗಿಲು, ಶ್ರೀನಿವಾಸಪುರ ಜೆಡಿಎಸ್‌ ಶಾಸಕರು ಜಿಲ್ಲೆಯ ಹಿರಿಯ ನಾಯಕತ್ವ ಮುಂದಾಳತ್ವದಲ್ಲಿ ಭೇಟಿ–ಅನಿಲ್‌, ಕೊತ್ತೂರು ನನ್ನ, ರಮೇಶ್‌ ಕುಮಾರ್ ಒಪ್ಪಿಗೆ ಇದೆ–ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.