ADVERTISEMENT

ಮಾಲೂರು ಲಾಜಿಸ್ಟಿಕ್‌ ಪಾರ್ಕ್‌ನಲ್ಲಿ 5,500 ಕನ್ನಡಿಗರಿಗೆ ಉದ್ಯೋಗ ಭರವಸೆ

ಲಾಜಿಸ್ಟಿಕ್‌ ಪಾರ್ಕ್‌ನ 20 ಲಕ್ಷ ಚದರ ಅಡಿ ಪ್ರದೇಶದಲ್ಲಿ ಗೋದಾಮು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 21:03 IST
Last Updated 3 ಅಕ್ಟೋಬರ್ 2022, 21:03 IST
   

ಮಾಲೂರು (ಕೋಲಾರ): ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಆಲ್‌ಕಾರ್ಗೊ ಸಮೂಹ ನಿರ್ಮಿಸಿರುವ ಲಾಜಿಸ್ಟಿಕ್ ಪಾರ್ಕ್ ಅನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.

100 ಎಕರೆ ಪ್ರದೇಶದಲ್ಲಿರುವಲಾಜಿಸ್ಟಿಕ್ ಪಾರ್ಕ್‌ನ 20 ಲಕ್ಷ ಚದರ ಅಡಿ ಜಾಗದಲ್ಲಿ ಗೋದಾಮು ನಿರ್ಮಿಸಲಾಗಿದೆ. ಫ್ಲಿಪ್‌ಕಾರ್ಟ್, ಅಮೆಜಾನ್, ಡೆಕಥ್ಲಾನ್ ಸೇರಿದಂತೆ ಇ-ಕಾಮರ್ಸ್ ಕಂಪನಿಗಳ ವಹಿವಾಟಿಗೆಸೌಲಭ್ಯಒದಗಿಸಿದೆ. ಫ್ಲಿಪ್‌ಕಾರ್ಟ್ ಐದು ಲಕ್ಷ ಚದರ ಅಡಿ, ಅಮೆಜಾನ್ ಮೂರು ಲಕ್ಷ ಚದರ ಅಡಿ, ಡೆಕಥ್ಲಾನ್ ಕಂಪನಿ ಒಂಬತ್ತು ಲಕ್ಷ ಚದರ ಅಡಿ ಪ್ರದೇಶದಲ್ಲಿ ಗೋದಾಮು ನಿರ್ಮಿಸಿವೆ.

‘ಇ–ಕಾಮರ್ಸ್‌ ಕಂಪನಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯ ಕಲ್ಪಿಸಲು ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಿಸಲಾಗಿದೆ. 5,500 ಕನ್ನಡಿಗರಿಗೆ ಉದ್ಯೋಗಾವಕಾಶ ಒದಗಿಸಲಿದ್ದೇವೆ. ರಾಜ್ಯ ಹಾಗೂ ನೆರೆಯ ಆಂಧ್ರಪ್ರದೇಶ, ತಮಿಳುನಾಡಿಗೆ ಸುಲಭವಾಗಿ ಲಾಜಿಸ್ಟಿಕ್ ಸಂಪರ್ಕ ಸಾಧಿಸಬಹುದು’ ಎಂದು ಆಲ್‌ಕಾರ್ಗೊ ಲಾಜಿಸ್ಟಿಕ್‌ ಕಂಪನಿಯ ಅಧ್ಯಕ್ಷ ಶಶಿಕಿರಣ್‌ ಶೆಟ್ಟಿ ಹೇಳಿದರು.

ADVERTISEMENT

‘ಬೆಂಗಳೂರು ಸಮೀಪದ ನೆಲಮಂಗಲ ಬಳಿ 100 ಎಕರೆ ಜಮೀನನ್ನು ಕೆಐಎಡಿಬಿಯಿಂದ ಖರೀದಿಸಿದ್ದೇವೆ. ಹೊಸಕೋಟೆಯಲ್ಲಿ 75 ಎಕರೆ ಜಮೀನು ಖರೀದಿಸಿ ಅಲ್ಲಿಗೂ ಸೌಲಭ್ಯ ವಿಸ್ತರಿಸಲಾಗುವುದು’ ಎಂದರು.

ಸ್ಥಳೀಯರಿಗೆ ಉದ್ಯೋಗಕ್ಕೆ ಮನವಿ: ‘ಕೈಗಾರಿಕಾ ಪ್ರದೇಶ ಸ್ಥಾಪಿಸಲು ಜಾಗ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಸಿಎಸ್‌ಆರ್‌ ನಿಧಿಯಡಿ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯ ಕೈಗೊಳ್ಳಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.