ADVERTISEMENT

ಕೋಲಾರ ಮೆಕ್ಕೆ ಸರ್ಕಲ್‌ಗೆ ಸದ್ಯದಲ್ಲೇ ಹೊಸ ರೂಪ

‘ನನ್ನ ನಗರ ನನ್ನ ಕೊಡುಗೆ’ ಯೋಜನೆಯಡಿ ಸಿಎಂಆರ್‌ ಶ್ರೀನಾಥ್‌ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 3:21 IST
Last Updated 17 ಜನವರಿ 2026, 3:21 IST
ಕೋಲಾರ ನಗರದ ಮೆಕ್ಕೆ ವೃತ್ತದ ಅಭಿವೃದ್ಧಿ ನಿಟ್ಟಿನಲ್ಲಿ ಶುಕ್ರವಾರ ಸಿಎಂಆರ್ ಶ್ರೀನಾಥ್‌ ಅವರು ನಗರಸಭೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು
ಕೋಲಾರ ನಗರದ ಮೆಕ್ಕೆ ವೃತ್ತದ ಅಭಿವೃದ್ಧಿ ನಿಟ್ಟಿನಲ್ಲಿ ಶುಕ್ರವಾರ ಸಿಎಂಆರ್ ಶ್ರೀನಾಥ್‌ ಅವರು ನಗರಸಭೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು   

ಕೋಲಾರ: ಜಿಲ್ಲಾಧಿಕಾರಿ ಎಂ.ಆರ್‌.ರವಿ ಆಲೋಚನೆಯ ‘ನನ್ನ ನಗರ ನನ್ನ ಕೊಡುಗೆ’ ಯೋಜನೆಯಡಿ ಟೊಮೆಟೊ ಉದ್ಯಮಿ ಹಾಗೂ ಸಮಾಜ ಸೇವಕ ಸಿಎಂಆರ್‌ ಶ್ರೀನಾಥ್‌ ಅವರು ನಗರದ ಮೆಕ್ಕೆ ಸರ್ಕಲ್‌ ಅಭಿವೃದ್ಧಿಪಡಿಸಲಿದ್ದು, ಸದ್ಯದಲ್ಲೇ ಹೊಸ ರೂಪ ಸಿಗಲಿದೆ.

ನಗರದ ಸೌಂದರ್ಯೀಕರಣ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಮಾರ್ಗದರ್ಶನದಲ್ಲಿ ಈ ಕೆಲಸ ನಡೆಯಲಿದೆ.

ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಎಂ.ಆರ್‌.ರವಿ ನೇತೃತ್ವದಲ್ಲಿ ಈಚೆಗೆ ನಡೆದ ನಗರದ ಪ್ರಮುಖರ ಸಭೆಯಲ್ಲಿ ಉದ್ಯಾನ, ವೃತ್ತಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ಉದ್ದಿಮೆದಾರರು, ವ್ಯಾಪಾರಿಗಳು, ಗಣ್ಯರ ಸಹಭಾಗಿತ್ವದಲ್ಲಿ ಕೋಲಾರ ಅಭಿವೃದ್ಧಿ ಕುರಿತೂ ಸಮಾಲೋಚನೆ ನಡೆದಿತ್ತು.

ADVERTISEMENT

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂಆರ್‌ ಶ್ರೀನಾಥ್‌, ಮೆಕ್ಕೆ ವೃತ್ತ ಅಭಿವೃದ್ಧಿಪಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಕ್ಕೆ ಜಿಲ್ಲಾಧಿಕಾರಿಯಿಂದ ಅಧಿಕೃತ ಅನುಮತಿ ಕೂಡ ಸಿಕ್ಕಿದೆ‌. ಅಷ್ಟೇ ಅಲ್ಲದೆ, ಈ ಕಾರ್ಯಕ್ಕೆ ಮುಂದಾಗಿರುವ ಅವರನ್ನು ಎಂ.ಆರ್.ರವಿ ಅಭಿನಂದಿಸಿದ್ದಾರೆ.

‌ಅದರಂತೆ ಶುಕ್ರವಾರ ಮೆಕ್ಕೆ ವೃತ್ತಕ್ಕೆ ಭೇಟಿ ನೀಡಿದ ಸಿಎಂಆರ್‌ ಶ್ರೀನಾಥ್‌, ಅಭಿವೃದ್ಧಿಯ ರೂಪುರೇಷೆಗಳ ಬಗ್ಗೆ ನಗರಸಭೆ ಎಂಜಿನಿಯರ್‌ಗಳ ಜೊತೆ ಚರ್ಚಿಸಿದರು. ನೀಲನಕ್ಷೆ ತಯಾರಿಸಿಕೊಡುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ಶ್ರೀನಿವಾಸ್‌, ಕಿರಿಯ ಎಂಜಿನಿಯರ್‌ ಜಿ.ಅಭಿಲಾಷ್‌ ಅವರಿಗೆ ಹೇಳಿದರು.

ನಗರದ ಅಭಿವೃದ್ಧಿಗೆ ನಾವೂ ಜೋಡಿಸಿದ್ದೇವೆ. ಮೆಕ್ಕೆ ವೃತ್ತ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರು ಸಹಕಾರ ನೀಡುತ್ತಿದ್ದಾರೆ ಎಂದು ಸಿಎಂಆರ್‌ ಶ್ರೀನಾಥ್‌ ಹೇಳಿದರು.

ವಾಹನಗಳ ಶಿಸ್ತುಬದ್ಧ ಸಂಚಾರಕ್ಕೆ ಜಿಗ್‌ಜಾಗ್‌, ಸಾರ್ವಜನಿಕರ ಓಡಾಟಕ್ಕೆ ವೃತ್ತದ ನಾಲ್ಕೂ ದಿಕ್ಕಿನಲ್ಲಿ ಸ್ಟೇನ್‌ಲೆಸ್‌ ಸ್ಟೀಲ್‌ ರೇಲಿಂಗ್ಸ್‌ ನಿರ್ಮಾಣ, ಸೂಚನಾ ಫಲಕಗಳು, ದೀಪಗಳ ಅಳವಡಿಕೆ, ಗೋಡೆಗಳ ಅಲಂಕಾರ, ಸಾಮಾಜಿಕ ಸಂದೇಶ ನೀಡುವ ಚಿತ್ರ ಬಿಡಿಸುವುದು, ತ್ರಿಭುಜಕಾರದಲ್ಲಿರುವ ಪಾರ್ಕ್‌ನ ಅಭಿವೃದ್ಧಿ, ಗಿಡ ನೆಟ್ಟು ಹಸಿರೀಕರಣ ಮಾಡುವ ಯೋಜನೆ ಇದೆ ಎಂದರು.

ಜಿಲ್ಲಾಧಿಕಾರಿ ಎಂ.ಆರ್‌.ರವಿ, ಪೌರಾಯುಕ್ತ ನವೀನ್‌ ಚಂದ್ರ ಜೊತೆಗೂಡಿ ಅವರ ಮಾರ್ಗದರ್ಶನ ಪಡೆದು ಅತ್ಯುತ್ತಮ ವೃತ್ತ ನಿರ್ಮಿಸಲು ಬದ್ಧ ಎಂದು ತಿಳಿಸಿದರು.

ಇಡೀ ಕೋಲಾರ ನಗರಕ್ಕೆ ಮಾದರಿಯಾಗುವಂತೆ‌ ಮೆಕ್ಕೆ ವೃತ್ತಕ್ಕೆ ಹೊಸ ರೂಪ ನೀಡಲಾಗುವುದು. ನಗರದ ಅಭಿವೃದ್ಧಿಯಲ್ಲಿ ನಾನೂ ಕೈಜೋಡಿಸುವೆ

–ಸಿಎಂಆರ್‌ ಶ್ರೀನಾಥ್‌ ಟೊಮೆಟೊ ಉದ್ಯಮಿ

ನಗರದ ಸರ್ಕಲ್‌ಗಳ ಅಭಿವೃದ್ಧಿ

ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ನಗರದ ಪ್ರಮುಖರ ಸಭೆಯಲ್ಲಿ  ಸರ್ಕಲ್‍ಗಳು ಹಾಗೂ ಪ್ರಮುಖ ಪಾರ್ಕ್‍ಗಳನ್ನು ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿತ್ತು. ನಗರದ ವೃತ್ತಗಳಲ್ಲಿ ಪಾದಚಾರಿ ಟೈಲ್ಸ್ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸ್ಟೇನ್‌ ಸ್ಟೀಲ್‌ ರೈಲಿಂಗ್ಸ್ ಅಳವಡಿಸಬೇಕು. ಅಂಬೇಡ್ಕರ್ ವೃತ್ತ ಮತ್ತು ಎಪಿಎಂಸಿ ವೃತ್ತ ಅಭಿವೃದ್ಧಿಗೆ ತಲಾ ₹17 ಲಕ್ಷ ರಾಣಿ ಚೆನ್ನಮ್ಮ ವೃತ್ತಕ್ಕೆ ₹16 ಲಕ್ಷ ಕ್ಲಾಕ್ ಟವರ್ ವೃತ್ತಕ್ಕೆ ₹14 ಲಕ್ಷ ಶ್ರೀನಿವಾಸಪುರ ಮತ್ತು ಅರಹಳ್ಳಿ ವೃತ್ತಕ್ಕೆ ತಲಾ ₹13 ಲಕ್ಷ ಗಂಗಮ್ಮ ದೇವಸ್ಥಾನ ವೃತ್ತಕ್ಕೆ ₹8 ಲಕ್ಷ ಟ್ರಯಾಂಗಲ್ ಸರ್ಕಲ್‌ಗೆ ₹8 ಲಕ್ಷ ಮೆಕ್ಕೆ ವೃತ್ತ ₹12 ಲಕ್ಷ ಕೋಲಾರಮ್ಮ ದೇವಸ್ಥಾನ ವೃತ್ತಕ್ಕೆ ₹10 ಲಕ್ಷ ಡೂಂ ಲೈಟ್ ವೃತ್ತವನ್ನು ₹12 ಲಕ್ಷದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು.

ಸಂಘ ಸಂಸ್ಥೆಗಳ ಸಹಭಾಗಿತ್ವ

ಕೋಲಾರ ನಗರದಲ್ಲಿನ ವೃತ್ತ ಹಾಗೂ ಉದ್ಯಾನ ಅಭಿವೃದ್ಧಿಪಡಿಸಲು ಸಹಭಾಗಿತ್ವ ವಹಿಸುವುದಾಗಿ ವಿವಿಧ ಸಂಘ ಸಂಸ್ಥೆಯವರು ಉದ್ಯಮಿಗಳು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಹೇಳಿದ್ದರು. ಅದರಂತೆ ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಅವರು ನಗರದ ಬಸ್ ನಿಲ್ದಾಣದ ಬಳಿ ಇರುವ ಪಲ್ಲವಿ ವೃತ್ತ ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್ ಅವರು ಮೆಕ್ಕೆ ವೃತ್ತ ಆರ್.ವಿ.ಶಿಕ್ಷಣ ಸಂಸ್ಥೆಯವರು ಡೂಮ್ ಲೈಟ್ ವೃತ್ತ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದರು. ದೇವರಾಜ ಅರಸು ಶಿಕ್ಷಣ ಸಂಸ್ಥೆಯವರು ಕೆಡಿಎ ಉದ್ಯಾನ ಒಲಿವಿಯಾ ರೆಸಾರ್ಟ್‌ನವರು ಅಂಬೇಡ್ಕರ್ ಉದ್ಯಾನ ಅಭಿವೃದ್ಧಿ ಮಾಡುವುದಾಗಿ ಸಭೆಯಲ್ಲಿ ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.