ADVERTISEMENT

ಕೋಲಾರ |ಗಣಿಗಾರಿಕೆ ವೇಳೆ ಕಲ್ಲು ಬಿದ್ದು ಸಾವು: ಕಾನೂನು ಕ್ರಮ, ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:11 IST
Last Updated 24 ಜನವರಿ 2026, 7:11 IST
ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪತ್ನಿ ಜೀವಿತಾ, ಕಟುಂಬಸ್ಥರು, ಹೋರಾಟಗಾರರು ಮಾತನಾಡಿದರು
ಕೋಲಾರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪತ್ನಿ ಜೀವಿತಾ, ಕಟುಂಬಸ್ಥರು, ಹೋರಾಟಗಾರರು ಮಾತನಾಡಿದರು   

ಕೋಲಾರ: ತಾಲ್ಲೂಕಿನ ತಲಗುಂದ –ಪುರಹಳ್ಳಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ವೇಳೆ ಹಿಟಾಚಿ ಮೇಲೆ ಕಲ್ಲುಬಂಡೆ ಬಿದ್ದು ಷಣ್ಮುಗ ಮೃತಪಟ್ಟಿದ್ದಾರೆ. ಆದರೆ, ಅದನ್ನು ತಿರುಚಿ ಟಿಪ್ಪರ್‌–ಬೈಕ್‌ ನಡುವೆ ಅಪಘಾತವೆಂದು ಬಿಂಬಿಸುತ್ತಿದ್ದಾರೆ. ವೇಮಗಲ್‌ ಠಾಣೆಯಲ್ಲಿ ದೂರ ದಾಖಲಿಸಿದ್ದರೂ ಪೊಲೀಸರು ಕ್ರಮ ವಹಿಸಿಲ್ಲ ಎಂದು ಪತ್ನಿ ಜೀವಿತಾ, ಕಟುಂಬಸ್ಥರು, ಹೋರಾಟಗಾರರು ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಲ್ಲು ಗಣಿಗಾರಿಕೆಯಲ್ಲಿ ಷಣ್ಮುಗ ಹಿಟಾಚಿ ‌ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜ.15 ರಂದು ಮಧ್ಯಾಹ್ನ ಮೂರು ಗಂಟೆಯಲ್ಲಿ ಮಣ್ಣು ಸರಿಸುವ ವೇಳೆ ದೊಡ್ಡ ಬಂಡೆ ಉರುಳಿ ಹಿಟಾಚಿ ಮೇಲೆ ಬಿದ್ದಿದೆ. ಆಗ ಪತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಮರೆಮಾಚಲು ಬೈಕ್ ಅನ್ನು ಟಿಪ್ಪರ್‌ ಕೆಳಗಡೆ ಇಟ್ಟು ಅಪಘಾತದಲ್ಲಿ ಸತ್ತಿದ್ದಾರೆ ಎಂದು ಗಣಿ ಮಾಲೀಕರು ನನಗೆ ಸುಳ್ಳು ಹೇಳಿದ್ದಾರೆ. ಪತಿ ಮೃತ್ತಪಟ್ಟ 2 ಗಂಟೆ ನಂತರ ಎಸ್ಎನ್ಆರ್ ಜಿಲ್ಲಾಸ್ಪತ್ರೆಗೆ ಶವ ಸಾಗಿಸಿದ್ದಾರೆ. ಈ ಎರಡು ಗಂಟೆ ಅವಧಿಯಲ್ಲಿ ಸಾಕ್ಷಿನಾಶ ಮಾಡಲು ಪ್ರಯತ್ನ ಪಟ್ಟಿದ್ದಾರೆ’ ಎಂದರು.

ಘಟನೆ ನಡೆದ ದಿನವೇ ದೂರು ಕೊಡಲು ಹೋದೆ. ವೇಮಗಲ್ ಪೋಲಿಸರು ದೂರು ದಾಖಲಿಸಿಕೊಳ್ಳದೆ ವಿಳಂಬ ಮಾಡಿದರು. ಮರು ದಿನ ಸಂಜೆ ಆರು ಗಂಟೆಗೆ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟಿರುವುದಲ್ಲದೇ ಬಂಡೆ ಬಿದ್ದು ಅವಘಡ ನಡೆದಿರುವುದರಿಂದ ತಮ್ಮ ತಲೆ ಮೇಲೆ ಎಲ್ಲಿ ಪ್ರಕರಣ ಬರುತ್ತೆ ಎಂದು ನೈಜ ಘಟನೆ ಮರೆಮಾಚಿ ಅಪಘಾತ ಎಂದು ಬಿಂಬಿಸಲು ಷಡ್ಯಂತ್ರ ನಡೆಸಿದ್ದಾರೆ. ಗಣಿ ಇಲಾಖೆಯ ಉಪನಿರ್ದೇಶಕರನ್ನು ಎ1 ಆರೋಪಿಯಾಗಿ ದೂರು ನೀಡಿದರೆ ಪೊಲೀಸರು ಎ3 ಆರೋಪಿಯನ್ನಾಗಿ ಮಾಡಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ. ನಮ್ಮ ಕುಟುಂಬಕ್ಕೆ ಷಣ್ಮುಗ ಒಬ್ಬರೇ ದಿಕ್ಕಾಗಿದ್ದರು. ಅವರನ್ನು ಕಳೆದುಕೊಂಡ ಈಗ ನಾವು ಅನಾಥವಾಗಿದ್ದೇವೆ ನಮಗೆ ಸರ್ಕಾರವೇ ನೆರವಿಗೆ ಬರಬೇಕಾಗಿದೆ’ ಎಂದು ಮನವಿ ಮಾಡಿದರು.

ADVERTISEMENT

ಕರ್ನಾಟಕ ಸಂರಕ್ಷಣಾ ಸೇನೆ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ‘ಷಣ್ಮುಗ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ. ಷಣ್ಮುಗ ಅವರ ತಂದೆ ತಾಯಿ ವೃದ್ಧರಾಗಿದ್ದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರೂ ಚಿಕ್ಕ ಮಕ್ಕಳಿದ್ದು ಇವರಿಗೆ ಅಸರೆಯಾಗಿದ್ದ ಷಣ್ಮುಗ ಮೃತಪಟ್ಟಿರುವುದರಿಂದ ಕುಟುಂಬಕ್ಕೆ ಯಾರು ದಿಕ್ಕು ಇಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೃತಪಟ್ಟ ಚಾಲಕನ ತಂದೆ ಗೋವಿಂದಪ್ಪ, ತಾಯಿ ಮಂಗಮ್ಮ, ಸಂಬಂಧಿಕರಾದ ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.