
ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆ ವೇಳೆ ಎರಡನೇ ಅವಧಿಯಲ್ಲಿ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ನನಗೆ ಭರವಸೆ ನೀಡಿದ್ದರು. ಹೀಗಾಗಿ ಆ ಮಾತು ಉಳಿಸಿಕೊಳ್ಳುತ್ತಾರೆ, ಜಿಲ್ಲೆಯ ಜನರು ಕಂಡ ಕನಸು ನನಸಾಗುತ್ತದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎನ್.ಎನ್.ನಾರಾಯಣಸ್ವಾಮಿ ಹೇಳಿದರು.
ನಗರದ ಕೋಲಾರಮ್ಮ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗೃಹ ಸಚಿವ ಜಿ.ಪರಮೇಶ್ವರ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ’ ಎಂದರು.
ಜಿಲ್ಲೆಯು ಗಡಿ ಭಾಗದಲ್ಲಿದ್ದು, ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿದೆ. ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಮಂತ್ರಿ ಸ್ಥಾನ ಸಿಗದ ಬಗ್ಗೆ ಈ ಭಾಗದ ಜನರಲ್ಲಿ ಬಹಳ ಅಸಮಾಧಾನವಿದೆ. ಅಲ್ಲದೆ, ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿದ್ದು ಸರಿಯಾದ ಸೌಲಭ್ಯಗಳೇ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಡಿಸಿದರು.
ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವ ತಮ್ಮ ಆಸೆಗೆ ಜಿಲ್ಲೆಯ ಶಾಸಕರ ಬೆಂಬಲವಿದೆಯೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ತಮಗೆ (ಮಾಧ್ಯಮದವರಿಗೆ) ಏನಾದರೂ ಅನುಮಾನವಿದೆಯೇ? ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಿದರೆ ವಿರೋಧಿಸುವುದಾಗಿ ಯಾರಾದಾರೂ ಶಾಸಕರು ಹೇಳಿದ್ದಾರೆಯೇ’ ಎಂದು ಪ್ರಶ್ನಿಸಿದರು.
ಎಲ್ಲಾ ನಾಲ್ವರು ಶಾಸಕರು ಕೂಡ ಸಚಿವ ಸ್ಥಾನ ಪಡೆಯಲು ಸಮರ್ಥರಿದ್ದಾರೆ. ನಂಜೇಗೌಡ, ಕೊತ್ತೂರು ಮಂಜುನಾಥ್, ರೂಪಮ್ಮ ಅಥವಾ ನಾನು ಸಮರ್ಥರಾಗಿದ್ದೇವೆ. ಯಾರಿಗೆ ಕೊಟ್ಟರೂ ನಮಗೆ ಸಮಾಧಾನವಿದೆ, ಜಿಲ್ಲೆಗೆ ಸಿಕ್ಕಿ ಅಭಿವೃದ್ಧಿ ಆಗಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಆಗುತ್ತದೆಯೇ ಎಂಬುದಕ್ಕೆ, ‘ಖಂಡಿತ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. 12ರಿಂದ 13 ಸಚಿವರನ್ನು ಕೈಬಿಟ್ಟು ಹೊಸಬರನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅನೋನ್ಯವಾಗಿದ್ದಾರೆ. ಜೋಡೆತ್ತುಗಳಂತೆ ಇಬ್ಬರೂ ಕೆಲಸ ಮಾಡುತ್ತಿದ್ದು, 2028ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವರು ತಮ್ಮ ಜೀವ ಇರುವವರೆಗೆ ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ಅವರ ಸ್ವಭಾವ ಸದಾ ಮೃದು ಎಂದು ಹೇಳಿದರು.
ಬಂಗಾರಪೇಟೆ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಮುಖಂಡರಾದ ಕೆ.ಚಂದ್ರಾರೆಡ್ಡಿ, ಗೋವಿಂದು, ಎಚ್.ಕೆ.ನಾರಾಯಣಸ್ವಾಮಿ, ಕೆ.ಜಯದೇವ್, ಪ್ರಸಾದ್ ಬಾಬು, ಎಸ್.ಆರ್.ಮುರಳಿಗೌಡ, ಅ.ನಾ.ಹರೀಶ್, ಸೀತಿಹೊಸೂರು ಮುರಳಿಗೌಡ, ಕೋಟೆ ನಾರಾಯಣಸ್ವಾಮಿ, ಛಲಪತಿ, ಸುರೇಶ್, ಅಬ್ಬಣಿ ನಾಗರಾಜ್, ಲಾಲ್ ಬಹದ್ದೂರು ಶಾಸ್ತ್ರಿ, ಗಂಗಮ್ಮಪಾಳ್ಯ ರಾಮಯ್ಯ, ಎಲ್.ಎ.ಮಂಜುನಾಥ್ ಇದ್ದರು.
ಕೋಲಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶುಕ್ರವಾರ ನಗರದ ಕೋಲಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಲಿ ಎಂದು ಶಕ್ತಿದೇವತೆ ಕೋಲಾರಮ್ಮನಿಗೆ ಪಕ್ಷದ ಮುಖಂಡರು ವಿಶೇಷ ಪೂಜೆ ವ್ಯವಸ್ಥೆ ಮಾಡಿದ್ದರು. ನನ್ನನ್ನೂ ಆಹ್ವಾನಿಸಿದ್ದರು. ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ ಎಂದು ಅವರು ಹೇಳಿದರು. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲೆಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ದೇಗುಲದ ಆವರಣದಲ್ಲಿ 101 ಈಡುಗಾಯಿ ಒಡೆದರು. ಪಟಾಕಿ ಕೂಡ ಸಿಡಿಸಿದರು.
ಬಲಗೈ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ ಬಲಗೈ ಸಮುದಾಯದ ಹೆಚ್ಚು ಜನಸಂಖ್ಯೆ ಅತಿ ಹೆಚ್ಚು ಇರುವ ದೇಶದ ಎರಡನೇ ಅತಿ ದೊಡ್ಡ ಜಿಲ್ಲೆ ಕೋಲಾರ. ಕೆ.ಎಚ್.ಮುನಿಯಪ್ಪ ಸೇರಿದಂತೆ ಸಮುದಾಯದ ಮುಖಂಡರನ್ನು ಈ ಭಾಗದ ಜನರು ಗೆಲ್ಲಿಸುತ್ತಾ ಬಂದಿದ್ದಾರೆ. ನಗರ ನಿರ್ಮಾತೃ ಟಿ.ಚನ್ನಯ್ಯ ಬಳಿಕ ಅಂದರೆ 65 ವರ್ಷಗಳಲ್ಲಿ ಈ ಭಾಗಕ್ಕೆ ಬಲಗೈ ಸಮುದಾಯವರಿಗೆ ಅವಕಾಶ ಸಿಕ್ಕಿಲ್ಲ ಎಂದು ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪ್ರಿಯಾಂಕ್‌ಗೆ ಕೊಡಿ ಮುಂದೆ ನನಗೆ ನೀಡಿ ಎಂದಿದ್ದೆ ಹಿಂದೆ ಸಚಿವ ಸಂಪುಟ ರಚನೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ಸಚಿವ ಸ್ಥಾನ ಕೇಳಿದ್ದೆ. ಈ ಬಾರಿ ಆಗಲ್ಲ ಬಹಳ ಒತ್ತಾಯ ಮಾಡಿದರೆ ಪ್ರಿಯಾಂಕ್ ಖರ್ಗೆ ಅವರನ್ನು ಕೈಬಿಟ್ಟು ತಮಗೆ ಕೊಡಬೇಕಾಗುತ್ತದೆ ಎಂದಿದ್ದರು. ಆಗ ನಾನೇ ಬೇಡ ಎಂದು ಮುಂದಿನ ಬಾರಿ ಅವಕಾಶ ಕೊಡಿ ಎಂದು ಹೇಳಿದ್ದೆ ಎಂದು ನಾರಾಯಣಸ್ವಾಮಿ ಹೇಳಿದರು.
ದಲಿತರಿಗೆ ಸಿ.ಎಂ ಸ್ಥಾನ ಸಿಗಬೇಕು ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ನಮಗೂ ಇದೆ. ಹಿಂದೆ ಜಿ.ಪರಮೇಶ್ವರ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದೀರ್ಘ ಕಾಲದಿಂದ ರಾಜಕಾರಣದಲ್ಲಿದ್ದಾರೆ. ಹಾಗೆಯೇ ಕೆ.ಎಚ್.ಮುನಿಯಪ್ಪ ಡಾ.ಎಚ್.ಸಿ.ಮಹದೇವಪ್ಪ ಎಲ್ಲರೂ ಅರ್ಹರು. ಈ ನಿರ್ಧಾರವನ್ನು ಹೈಕಮಾಂಡ್ ಮಾಡಬೇಕು. ಅದಕ್ಕೆ ನಮ್ಮ ಒತ್ತಾಯವೂ ಇರಲಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.