ADVERTISEMENT

ಪ್ರಭಾವಿಗಳಿಂದ ಕೋಲಾರದ ಮಾನ ಮರ್ಯಾದೆ ಹರಾಜು: ಶಾಸಕಿ ರೂಪಕಲಾ

ಕಟ್ಟಿದ ಸಂಸ್ಥೆಯ ನೆಲಕಚ್ಚಿಸಿ ಅಹಂಕಾರ ಮೆರೆಯೋದು ನಾಯಕರ ಲಕ್ಷಣವಲ್ಲ: ರೂಪಕಲಾ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:28 IST
Last Updated 30 ಜೂನ್ 2025, 13:28 IST
ರೂಪಕಲಾ ಶಶಿಧರ್‌
ರೂಪಕಲಾ ಶಶಿಧರ್‌   

ಕೋಲಾರ: ‘ರಾಜಕೀಯದಲ್ಲಿರುವ ಪ್ರಭಾವಿ ನಾಯಕರು ಜಿಲ್ಲೆಯ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ’ ಎಂದು ಕೆಜಿಎಫ್‌ ಕಾಂಗ್ರೆಸ್‌ ಶಾಸಕಿ ರೂಪಕಲಾ ಶಶಿಧರ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಗೆ ಏಕೆ ಈ ಗತಿ ಬಂದಿದೆ? ಮುಂದೆ ಯಾವ ಪರಿಸ್ಥಿತಿ ಬರಬಹುದು? ರಾಜಕೀಯ ಅಸೂಯೆ, ದ್ವೇಷ ಏಕೆ? ತಮ್ಮ ಮುಂದೆ ಯಾರೂ ಬೆಳೆಯಬಾರದೇ? ಜನರು ಆಶೀರ್ವಾದ ಮಾಡಿದರೂ ತಮಗೆ ಅಷ್ಟೊಂದು ಹಿಂಸೆ ಆಗುತ್ತಿದೆಯೇ’ ಎಂದು ಪ್ರಶ್ನಿಸಿದರು.

‘ರೈತರು, ಬಡವರು ಕಟ್ಟಿದ ಎರಡು ಸಹಕಾರಿ ಸಂಸ್ಥೆಗಳನ್ನು ಉಳಿಸುವಲ್ಲಿ ರಾಜಕೀಯ ನಾಯಕರು, ಪ್ರಭಾವಿಗಳು ಎಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಯೋಜನೆ ಮಾಡಿ. ರೈತರು, ಬಡವರ ಕಷ್ಟಗಳಿಗೆ ಯಾರು ಕಣ್ಣೀರು ಹಾಕಿದ್ದಾರೆ? ಕಟ್ಟಿದ ಮನೆ ಒಡೆದು ಹಾಕಿದರೆ ಆ ಮನೆ ಮಾಲೀಕನಿಗೆ ಎಷ್ಟು ನೋವಾಗುವುದಿಲ್ಲ ಹೇಳಿ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೆಲವರು ಅಸೂಯೆ, ದ್ವೇಷ ಸಾಧಿಸುತ್ತಿದ್ದಾರೆ. ಸಹಕಾರ ಸಂಸ್ಥೆ ಕಟ್ಟಿ ಬೆಳೆಸುವವರು ನಾಯಕರು. ಕಟ್ಟಿದ ಸಂಸ್ಥೆಗಳನ್ನು ನೆಲಕಚ್ಚುವಂತೆ ಮಾಡಿ ಅಹಂಕಾರ ಮೆರೆಯುವುದು ನಾಯಕರ ಲಕ್ಷಣವಲ್ಲ’ ಎಂದು ಹೇಳಿದರು.

ಬ್ಯಾಲಹಳ್ಳಿ ಗೋವಿಂದಗೌಡರು ಕಾಂಗ್ರೆಸ್‌ನವರೇ ಅಲ್ಲ ಎಂಬ ಕೆಲ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಜನನಾಯಕರಿಗೆ ಯಾವುದೇ ಪಕ್ಷ ಬೇಕಾಗಿಲ್ಲ. ಚುನಾವಣೆ ಸಮಯದಲ್ಲಿ ಬಳಸಿಕೊಂಡಾಗ ಅವರು ಯಾವ ಪಕ್ಷದವರಾಗಿದ್ದರು ಎಂಬುದನ್ನೇ ಅವರೇ ನಿರ್ಧಾರ ಮಾಡಲಿ. ಅವರ ಬಳಿ ಸಹಾಯ ಕೋರಿ ಹೋಗುವವರು ನಿರ್ಧಾರ ಮಾಡಲಿ’ ಎಂದರು.

‘ರಾಜಕಾರಣಿ ಮಗಳಾಗಿ ಒಮ್ಮೆ ಸೋತ ಮೇಲೆ ಜನರ ಸೇವೆ ಮಾಡಿಕೊಂಡು ನಾನು ಮುಂದೆ ಬಂದಿದ್ದೇನೆ. ನಂತರ ಅವರ ಆಶೀರ್ವಾದದಿಂದ ಮುಂದೆ ಬಂದೆ. ಇಲ್ಲದಿದ್ದರೆ ನಾನು ಏನೂ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವರು ನನ್ನನ್ನು ತುಳಿದು ಹಾಕುತ್ತಿದ್ದರು. ನನ್ನನ್ನು ಅವಮಾನ ಮಾಡಿದರೂ ನಾನು ಖುಷಿ ಪಡುತ್ತೇನೆ. ನನ್ನನ್ನು ಆಶೀರ್ವದಿಸುವವರಿಗೆ ನ್ಯಾಯ ಕೊಡಿಸುವುದು ನನ್ನ ಕೆಲಸ. ರೈತರು, ಮಹಿಳೆಯರಿಗೆ ನ್ಯಾಯ ಸಿಕ್ಕಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.