ADVERTISEMENT

ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:07 IST
Last Updated 19 ಜನವರಿ 2026, 7:07 IST
ಕೋಲಾರದಲ್ಲಿ ಭಾನುವಾರ ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವ ಟಿ.ಚನ್ನಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು
ಕೋಲಾರದಲ್ಲಿ ಭಾನುವಾರ ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವ ಟಿ.ಚನ್ನಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು   

ಕೋಲಾರ: ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ ಏನು ಅಗತ್ಯವಿದೆ? ನಗರವೆಂದರೆ ಹೇಗಿರಬೇಕು? ಎಂಬ ಆಶಯ, ದೂರದೃಷ್ಟಿ ಹೊಂದಿದ್ದ ಟಿ.ಚನ್ನಯ್ಯ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಒಡನಾಟ ಹೊಂದಿದ್ದರು. ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ಹೇಳಿದರು.

ನಗರದ ರಂಗಮಂದಿರದಲ್ಲಿ ಭಾನುವಾರ ಮಾಜಿ ಸಚಿವ, ಕೋಲಾರ–ಚಿಕ್ಕಬಳ್ಳಾಪುರ ನಿರ್ಮಾತೃ ಟಿ.ಚನ್ನಯ್ಯ ಅವರ 41ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಟಿ.ಚನ್ನಯ್ಯ ಕೋಲಾರ ನಗರಕ್ಕೆ ಬೇಕಾದ ಸೌಲಭ್ಯಗಳ ಕುರಿತು ಕನಸು ಕಂಡಿದ್ದು ಮಾತ್ರವಲ್ಲದೇ; ಸ್ಯಾನಿಟೋರಿಯಂ ಆಸ್ಪತ್ರೆ ನಿರ್ಮಾಣ, ಹಾಸ್ಟೆಲ್, ಹಳೆ ಬಸ್ ನಿಲ್ದಾಣ, ಕೋಲಾರಕ್ಕೆ ವಿದ್ಯುತ್ ತಂದರು. ಅವರೊಬ್ಬ ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದರು.

ADVERTISEMENT

ಕೋಲಾರದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯಗಳನ್ನು ಒದಗಿಸುವ ಆಶಯದೊಂದಿಗೆ ಕೆಲಸ ಮಾಡಿದ ಮಹಾಚೇತನ ಚನ್ನಯ್ಯ. ಅವರ ಪುಣ್ಯಸ್ಮರಣೆಯನ್ನು 41 ವರ್ಷಗಳ ನಂತರ ಆಚರಿಸುತ್ತಿದ್ದೇವೆ‌. ಇದು ಸರಿಯಲ್ಲ; ಪ್ರತಿವರ್ಷವೂ ಸ್ಮರಿಸುವ ಮೂಲಕ ಇಂದಿನ ಯುವಜನತೆ, ರಾಜಕಾರಣಿಗಳಿಗೆ ಅವರ ಆದರ್ಶದ ಅರಿವು ಆಗುವಂತೆ ಮಾಡಬೇಕು ಎಂದು ಹೇಳಿದರು.

ನಚಿಕೇತ ನಿಲಯದಂಥ ಸುಂದರ ಹಾಸ್ಟೆಲ್ ಕಟ್ಟಡವನ್ನು ಕಟ್ಟಿಸಿ, ಜಿಲ್ಲೆಯ ಶೋಷಿತ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶವನ್ನು ಚನ್ನಯ್ಯ ಹೊಂದಿದ್ದರು. ಸ್ಯಾನಿಟೋರಿಯಂ ಕ್ಷಯ ಆಸ್ಪತ್ರೆಯು ಕೋಲಾರ ಅಲ್ಲದೇ; ಹೊರ ರಾಜ್ಯಗಳ ರೋಗಿಗಳ ಜೀವವನ್ನು ಉಳಿಸಿದ ಕೇಂದ್ರವಾಗಿತ್ತು. ಅಂತಹ ದೂರದೃಷ್ಟಿಯ ನಾಯಕತ್ವ ಕೋಲಾರಕ್ಕೆ ಅಗತ್ಯವಿದೆ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಮಾತನಾಡಿ, ಟಿ.ಚನ್ನಯ್ಯ ಸಮಾಜಕ್ಕೆ ಸ್ಫೂರ್ತಿಯಾಗಿದ್ದರು, ನೆನಪು ಶಾಶ್ವತವಾಗಿರುವಂಥ ಕೆಲಸಗಳನ್ನು ಮಾಡಿ ಹೋಗಿದ್ದಾರೆ ಎಂದು ಶ್ಲಾಘಿಸಿದರು.

ಕೃಷಿ, ಬಂಧಿಖಾನೆ ಸೇರಿದಂತೆ ವಿವಿಧ 8 ಖಾತೆಗಳ ಸಚಿವರಾಗಿ ಕೆಲಸ ಮಾಡಿ, ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದು ಮಾತ್ರವಲ್ಲ; ಕೋಲಾರದ ಅಭಿವೃದ್ಧಿ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ದಿಟ್ಟ ವ್ಯಕ್ತಿತ್ವ, ಬದ್ಧತೆಯಿಂದಾಗಿಯೇ ಕೋಲಾರದಲ್ಲಿ ಮಾರುಕಟ್ಟೆ, ಆ ಕಾಲಕ್ಕೆ ಸುಂದರ ಹಳೆ ಬಸ್ ನಿಲ್ದಾಣ ನಿರ್ಮಾಣವಾಯಿತು ಎಂದರು.

ಚನ್ನಯ್ಯ ಅವರ ಪುತ್ರ ಬಾಲಾಜಿ ಚನ್ನಯ್ಯ ಮಾತನಾಡಿ, ‘ನಮ್ಮ ತಂದೆ ಕೋಲಾರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ, ಕೆಲಸ ಮಾಡಿದ್ದರು. ನಗರ ನಿರ್ಮಾತೃ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಅವರನ್ನು ಕೋಲಾರ ಜಿಲ್ಲೆಯ ಜನತೆ ಮರೆಯುವಂತಾದರೆ ಅದು ದುರಂತ ಎಂದು ಭಾವಿಸಿ ಈ ಕಾರ್ಯಕ್ರಮ ಆಯೋಜಿಸಲಾಯಿತು’ ಎಂದು ತಿಳಿಸಿದರು.

ಚನ್ನಯ್ಯ ಮೊಮ್ಮಗ ದೀಪಕ್ ಮಾತನಾಡಿ, ‘ಚನ್ನಯ್ಯ ಹೆಸರಲ್ಲಿ ಮ್ಯೂಸಿಯಂ ಮಾಡಬೇಕು, ಗಾಂಧಿನಗರದ ಸಮೀಪದ ಪ್ರದೇಶಕ್ಕೆ ಟಿ.ಚನ್ನಯ್ಯ ಹೆಸರಿಡಲಾಗವುದು. ಅವರು ಕೋಲಾರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯೇ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚನ್ನಯ್ಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮುಳಬಾಗಿಲು ಕ್ಷೇತ್ರದಿಂದ ಅವಿರೋಧವಾಗಿ ಗೆದ್ದು ಶಾಸಕರಾಗಿದ್ದ ಅವರು ಕೆಂಗಲ್ ಹನುಮಂತಯ್ಯ ಸರ್ಕಾರದಲ್ಲಿ ಎಂಟು ಖಾತೆಗಳ ಸಚಿವರಾಗಿದ್ದರು. ಕೆಲ ಕಾಲ ತಮಿಳುನಾಡು ರಾಜ್ಯಪಾಲರಾಗಿದ್ದರು. ಅದಕ್ಕೂ ಮೊದಲು ರಾಜ್ಯಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿದ್ದರು. 

ಅನೇಕ ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದ ಚನ್ನಯ್ಯ ಅವರಂಥ ಮಹಾನ್ ವ್ಯಕ್ತಿಯನ್ನು ಈಗಿನ ಜನಾಂಗ ಮರೆತರೆ ಅದು ದುರಂತ ಎಂದು ಎಚ್ಚರಿಸಿದ ಅವರ ಸ್ಮರಣೆಯ ಮೂಲಕ ಅವರ ನೆನಪು ಸದಾ ಇರುವಂತೆ ಮಾಡೋಣ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಗೋವಿಂದರಾಜು, ಮುಖಂಡರಾದ ಬೆಳಮಾರನಹಳ್ಳಿ ಆನಂದ್, ಪ್ರವೀಣ್ ಗೌಡ, ಮುರಳಿ ಗೌಡ, ಗಾಂಧಿನಗರ ನಾರಾಯಣಸ್ವಾಮಿ, ನಾಗನಂದ್ ಕೆಂಪರಾಜ್, ಬಣಕನಹಳ್ಳಿ ನಟರಾಜ್, ಮುನಿವೆಂಕಟಪ್ಪ, ವಕ್ಕಲೇರಿ ರಾಜಪ್ಪ, ದಲಿತ್ ನಾರಾಯಣಸ್ವಾಮಿ, ಉಮಾ ಶಂಕರ್, ಎಚ್.ಬಿ.ಗೋಪಾಲ್, ಹೂವಳ್ಳಿ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಚನ್ನಯ್ಯ ಕುಟುಂಬದವರು ಇದ್ದರು.

ಅಭಿವೃದ್ಧಿಯ ವಿಚಾರದಲ್ಲಿ ಅಪಾರ ಕಾಳಜಿ ಬದ್ಧತೆ ಹೊಂದಿದ್ದ ಟಿ.ಚನ್ನಯ್ಯ ಅವರು ಇಂದಿನ ಯುವಕರಿಗೆ ಆದರ್ಶವಾಗಿದ್ದಾರೆ. ಅಂಥವರ ದಾರಿಯಲ್ಲಿ ಸಾಗಬೇಕು
ಎಂ.ಮಲ್ಲೇಶ್‌ ಬಾಬು ಸಂಸದ
ಟಿ.ಚನ್ನಯ್ಯ ಸ್ಮರಣೆ ಮಾಡುವುದರಿಂದ ಇಂದಿನ ರಾಜಕಾರಣಿಗಳಲ್ಲಿ ನೈತಿಕ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸವಾಗುತ್ತದೆ
ಸಿಎಂಆರ್‌ ಶ್ರೀನಾಥ್‌ ಜೆಡಿಎಸ್‌ ಮುಖಂಡ
ಚನ್ನಯ್ಯ ಪ್ರತಿಮೆ ನಿರ್ಮಿಸಬೇಕು
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರಿಗೆ ನೀಡುವಷ್ಟೇ ಗೌರವ ಮನ್ನಣೆ ಟಿ.ಚನ್ನಯ್ಯ ಅವರಿಗೂ ನೀಡಬೇಕು. ಅವರ ಪ್ರತಿಮೆಯನ್ನು ರಂಗಮಂದಿರ ಆವರಣದಲ್ಲಿ ನಿರ್ಮಿಸಬೇಕು. ಅವರ ನೆನಪು ಸದಾ ಉಳಿಯುವಂತಹ ಕಾರ್ಯಕ್ರಮಗಳನ್ನು ಸರ್ಕಾರದಿಂದಲೇ ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.