ಕೋಲಾರ: ನಗರ ಹೊರವಲಯದ ಖಾದ್ರಿಪುರ ಗ್ರಾಮದ ಸಮೀಪ ಇರುವ ಕೋಲಾರ ನಗರಸಭೆಯ ಜಮೀನನ್ನು ಖಾಸಗಿ ವ್ಯಕ್ತಿಗಳು ಸ್ವಾಧೀನಕ್ಕೆ ಪಡೆಯಲು ಯತ್ನಿಸಿದ್ದು, ಗುರುವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದರು.
ಖಾದ್ರಿಪುರ ಸಮೀಪದ ನಗರಸಭೆಗೆ ಕ್ರಯ ಆಗಿರುವ ಒಟ್ಟು 6.11 ಎಕರೆ ಜಮೀನಿಗೆ ಅಧಿಕಾರಿಗಳು ಎರಡು ತಿಂಗಳ ಹಿಂದೆ ಬೇಲಿ ಹಾಕಿ ಭದ್ರಪಡಿಸಿಕೊಂಡಿದ್ದರು. ಈಚೆಗೆ ಕೆಲವರು ನ್ಯಾಯಾಲಯ ಮೊರೆ ಹೋಗಿರುವುದಾಗಿ ಹೇಳಿ, ಆ ಜಮೀನಿನಲ್ಲಿ ಫಲಕ ಅಳವಡಿಸಿ ಸಂಖ್ಯೆ ನಮೂದಿಸಿದ್ದಾರೆ.
ನಗರಸಭೆಯಿಂದ ಅಳವಡಿಸಲಾಗಿದ್ದ ಫಲಕಕ್ಕೆ ಹಾನಿ ಮಾಡಿ ಬೆಂಗಳೂರಿನ ನ್ಯಾಯಾಲಯದಲ್ಲಿ ಜಮೀನು ಸಂಬಂಧ ಧಾವೆ ಇರುವುದಾಗಿ ಸಂಖ್ಯೆ ನಮೂದು ಮಾಡಿದ್ದಾರೆ. ಈ ಬಗ್ಗೆ ನಗರಸಬೆ ಪೌರಾಯುಕ್ತ ನವೀನ್ ಚಂದ್ರ ಅವರ ಗಮನಕ್ಕೆ ಬಂದಿದ್ದು, ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಕಂದಾಯ ಅಧಿಕಾರಿ ವೇಣು ಹಾಗೂ ಸಿಬ್ಬಂದಿ ಭೇಟಿ ನೀಡಿ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಮಧ್ಯ ಪ್ರವೇಶಿಸಿ, ‘ಈ ಜಾಗ ನಮಗೆ ಸೇರಿದ್ದು, ನಾವು ಏನು ಬೇಕಾದರು ಮಾಡಿಕೊಳ್ಳುತ್ತೇವೆ’ ಎಂದು ತಗಾದೆ ತೆಗೆದರು. ಇದಕ್ಕೆ ಅಧಿಕಾರಿಗಳು, ‘ಈ ಜಾಗವು ನಗರಸಭೆಗೆ ಸೇರಿದೆ. ದಾಖಲೆಗಳು ಇದ್ದರೆ ಸಲ್ಲಿಸಿ ಆನಂತರ ಚರ್ಚಿಸೋಣ’ ಎಂದು ತಾಕೀತು ಮಾಡಿದರು. ಮಧ್ಯ ಪ್ರವೇಶ ಮಾಡಿದ ಪೊಲೀಸರು ಖಾಸಗಿ ವ್ಯಕ್ತಿಗಳನ್ನು ದೂರ ಕಳುಹಿಸಿದರು.
ಖಾಸಗಿ ವ್ಯಕ್ತಿಗಳಯ ಟ್ರೆಂಚ್ ನಿರ್ಮಿಸಲು ತರಿಸಿದ್ದ ಜೆಸಿಬಿ ಯಂತ್ರವನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾಗವನ್ನು ಕಬಳಿಸಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಲಾಗಿದೆ.
‘ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಿ, ನಗರಸಭೆಯ ನಾಮಫಲಕವನ್ನು ಹಾನಿ ಮಾಡಿರುವವರ ವಿರುದ್ಧ ಕ್ರಮವಹಿಸಿ’ ಎಂದು ಅಧ್ಯಕ್ಷೆ ಲಕ್ಷ್ಮಿದೇವಮ್ಮ ಸೂಚಿಸಿದರು.
ಪೌರಾಯುಕ್ತ ನವೀನ್ ಚಂದ್ರ ಮಾತನಾಡಿ, ‘ನಗರಸಭೆಯ ಆಶ್ರಯ ಸಮಿತಿಯಿಂದ ನಿವೇಶನ, ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ. ಅದರಂತೆ ಜಿಲ್ಲಾಡಳಿತ, ಸರ್ಕಾರದಿಂದ ಅನುಮತಿ ಪಡೆದು ಖಾಸಗಿ ವ್ಯಕ್ತಿಗಳಿಂದ ನಗರಸಭೆಯು 2001 ಹಾಗೂ 2002ರಲ್ಲೇ ಜಮೀನು ಖರೀದಿ ಮಾಡಿತ್ತು. ಖಾದ್ರಿಪುರ ಸರ್ವೇ ಸಂಖ್ಯೆ 34/1ರ ಪೈಕಿ 2.15 ಎಕರೆ, 34/2ರ ಪೈಕಿ 2.06 ಎಕರೆ ಹಾಗೂ 33/2ಎ ಪೈಕಿ 3.30 ಎಕರೆ ಜಮೀನು ಸೇರಿ ಒಟ್ಟು 6.11 ಎಕರೆ ಜಾಗವಿದ್ದು, ರಕ್ಷಣೆ ಮಾಡಲಾಗಿದೆ. ಇದನ್ನು ಕೆಲವರು ಕಬಳಿಸಲು ಯತ್ನಿಸಿದ್ದು, ಇದು ಮುಂದುವರಿಯದಂತೆ ನಗರಸಭೆಯಿಂದ ಕ್ರಮವಹಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.