ADVERTISEMENT

ಕಳ್ಳತನ ಭೀತಿಯಲ್ಲಿ ಪೈಪ್‌ಲೈನ್‌ ನಿವಾಸಿಗಳು

ಪೊಲೀಸ್, ನಗರಸಭೆ ನಿರ್ಲಕ್ಷ್ಯ: ನಾಗರೀಕರ ಆರೋಪ

ಕೃಷ್ಣಮೂರ್ತಿ
Published 8 ಫೆಬ್ರುವರಿ 2021, 1:50 IST
Last Updated 8 ಫೆಬ್ರುವರಿ 2021, 1:50 IST
ಕೆಜಿಎಫ್ ಪೈಪ್‌ ಲೈನಿನಲ್ಲಿರುವ ಉದ್ಯಾನವನದಲ್ಲಿ ಮೋಟಾರ್ ಪಂಪ್ ಸಲಕರಣೆಗಳನ್ನು ಕದಿಯಲು ಕಳ್ಳರು ಹಳ್ಳ ತೋಡಿರುವುದು
ಕೆಜಿಎಫ್ ಪೈಪ್‌ ಲೈನಿನಲ್ಲಿರುವ ಉದ್ಯಾನವನದಲ್ಲಿ ಮೋಟಾರ್ ಪಂಪ್ ಸಲಕರಣೆಗಳನ್ನು ಕದಿಯಲು ಕಳ್ಳರು ಹಳ್ಳ ತೋಡಿರುವುದು   

ಕೆಜಿಎಫ್: ರಾಬರ್ಟ್‌ಸನ್‌ಪೇಟೆಯ ಪೈಪ್‌ಲೈನಿನ ನರಸಿಂಹಯ್ಯ ಬಡಾವಣೆಯಲ್ಲಿ ಆಗಾಗ್ಗೆ ನಡೆಯುತ್ತಿರುವ ಸಣ್ಣಪುಟ್ಟ ಕಳ್ಳತನಗಳಿಂದಾಗಿ ಜನತೆ ಭೀತಿಗೊಳಗಾಗಿದ್ದಾರೆ.

ನರಸಿಂಹಯ್ಯ ಬಡಾವಣೆಯಲ್ಲಿ ಬಹುತೇಕ ಮಧ್ಯಮ ಸುಶಿಕ್ಷಿತ ನಾಗರಿಕರು ವಾಸ ಮಾಡುತ್ತಿದ್ದಾರೆ. ಬಡಾವಣೆಯ ಅಭಿವೃದ್ಧಿಗಾಗಿ ತಮ್ಮದೇ ಒಂದು ಸಂಘವನ್ನು ಕಟ್ಟಿಕೊಂಡು ಅದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಡಾವಣೆಯಲ್ಲಿ ನಡೆಯುತ್ತಿರುವ ಸಣ್ಣಪುಟ್ಟ ಕಳ್ಳತನಗಳು ಮತ್ತು ಬಡಾವಣೆಯ ಉದ್ಯಾನವನದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು ಜನತೆಯನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.

ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳಲ್ಲಿ ಅಳವಡಿಸಿರುವ ಮೋಟಾರ್‌ಗಳನ್ನು ಕಳ್ಳತನ ಮಾಡುವುದು, ಮನೆಗಳಿಗೆ ಅಳವಡಿಸಿದ್ದ ವಿದ್ಯುತ್ ವೈರ್‌ಗಳ ಅಪಹರಣ, ಮನೆ ಮುಂದೆ ಇಟ್ಟ ವಸ್ತುಗಳ ಕಳ್ಳತನ ನಡೆಯುತ್ತಿದೆ.

ADVERTISEMENT

ಮನೆಯ ಮುಂದೆ ನಿಲ್ಲಿಸಿದ ಸೈಕಲ್‌ಗಳ ಕಳವು, ಬೈಕ್‌ಗಳಲ್ಲಿನ ಪೆಟ್ರೋಲ್ ಕಳ್ಳತನವಾಗುತ್ತಿರುವುದು ಇಲ್ಲಿನನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಡಾವಣೆಗೆ ಸರಬರಾಜಾಗುವ ಕೊಳವೆಬಾವಿಗೆ ಅಳವಡಿಸಲಾಗಿರುವ ವೈರ್‌ಗಳನ್ನು ಕಳ್ಳರು ಅಪಹರಣ ಮಾಡುತ್ತಿರುವುದರಿಂದ ಆಗಾಗ್ಗೆ ನೀರಿನ ಸರಬರಾಜು ಸ್ಥಗಿತಗೊಳ್ಳುತ್ತದೆ. ಕೊಳವೆಬಾವಿಯಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಹೊಂದಾಣಿಕೆ ಮಾಡಿಕೊಂಡು ನೀರಿನ ಸರಬರಾಜನ್ನು ಮಾಡುವ ವ್ಯವಸ್ಥೆಯನ್ನು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಮಾಡಿಕೊಳ್ಳುತ್ತಿದೆ.
ಆದರೆ ಕಳ್ಳರ ಕಾಟದಿಂದಾಗಿ ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಕೊಳವೆಬಾವಿಯ ವಸ್ತುಗಳು ಕಳ್ಳತನವಾಗಿದೆ. ದೂರು ನೀಡಲು ಪೊಲೀಸರ ಬಳಿಗೆ ಹೋದರೆ, ನಗರಸಭೆ ದೂರು ನೀಡಿದರೆ ಮಾತ್ರ ದೂರು ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುತ್ತಾರೆ ಎಂದು ನಿವಾಸಿಗಳು ಹೇಳುತ್ತಾರೆ.

ನಗರಸಭೆಯಿಂದ ಬಡಾವಣೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆಯ ಬದಿಯಲ್ಲಿ ಪೊದೆಗಳ ರಾಶಿ ಇದೆ. ರಾತ್ರಿ ಹೊತ್ತು ತಿರುಗಾಡಲು ಭಯವಾಗುತ್ತದೆ. ಬೀದಿ ದೀಪ ಇಲ್ಲದೆ ಇರುವುದು ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸಂಘದ ಪದಾಧಿಕಾರಿಗಳು ಆರೋಪಿಸುತ್ತಾರೆ.

ಬಡಾವಣೆಯಲ್ಲಿರುವ ಉದ್ಯಾನವನ ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗಿ ಪರಿಣಮಿಸಿದೆ. ಸಂಜೆಯಾದರೆ ಮದ್ಯಸೇವನೆ ಮತ್ತು ಗಾಂಜಾ ಸೇವನೆ ನಡೆಯುತ್ತದೆ. ಮರದ ಕತ್ತಲಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತವೆ. ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಆಕ್ಷೇಪಿಸಿದರೆ, ಬೆದರಿಕೆ ಹಾಕಲಾಗುತ್ತದೆ. ಅವರನ್ನೇ ಗುರಿಯನ್ನಾಗಿ ಇಟ್ಟುಕೊಂಡು ದ್ವೇಷ ಸಾಧಿಸುವ ಮಟ್ಟಿಗೆ ಪರಿಸ್ಥಿತಿ ಇದೆ ಎಂದು ನಿವಾಸಿಗಳು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.