ADVERTISEMENT

ಕೋಲಾರ | ಕಳ್ಳತನವಾಗಿದ್ದ ಸ್ವತ್ತುಗಳು ಮತ್ತೆ ಕೈಸೇರಿದಾಗ!

ಜಿಲ್ಲೆಯಲ್ಲಿ 533 ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ₹ 2.57 ಕೋಟಿ ಮೌಲ್ಯದ ವಸ್ತುಗಳು ಮಾಲೀಕರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:55 IST
Last Updated 30 ಡಿಸೆಂಬರ್ 2025, 4:55 IST
ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಸ್ತಿ ವಾಪಸ್‌ ವಾರ್ಷಿಕ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿದರು
ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಸ್ತಿ ವಾಪಸ್‌ ವಾರ್ಷಿಕ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿದರು   

ಕೋಲಾರ: ನಗರದ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ ಆಸ್ತಿ ವಾಪಸ್‌ ವಾರ್ಷಿಕ ಪರೇಡ್‌ನಲ್ಲಿ 533 ಪ್ರಕರಣಗಳ ಒಟ್ಟು ₹ 2.57 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.

ಇಷ್ಟು ದಿನ ವಸ್ತುಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ಮಾಲೀಕರ ಮೊಗದಲ್ಲಿ ಸೋಮವಾರ ಖುಷಿ ನೆಲೆಸಿತ್ತು. ಮತ್ತೆ ತಮ್ಮ ವಸ್ತುಗಳನ್ನು ವಾಪಸ್‌ ಕೊಡಿಸಿದ್ದಕ್ಕೆ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತಿದ್ದರು. ಜೊತೆಗೆ ಪೊಲೀಸರ ಅಭಯವೂ ಸಿಕ್ಕಿತು.  

ಈ ವರ್ಷ ಅಂದರೆ 2025ರಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ನಗದು, ಚಿನ್ನ, ಬೆಳ್ಳಿ, ಮೊಬೈಲ್‌, ದ್ವಿಚಕ್ರ, ನಾಲ್ಕುಚಕ್ರ ವಾಹನ ಹಾಗೂ ಇತರ ವಸ್ತುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ನೇತೃತ್ವದಲ್ಲಿ ಸಂಬಂಧಿತ ಮಾಲೀಕರಿಗೆ ವಾಪಸ್‌ ನೀಡಲಾಯಿತು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್‌, ‘ಕಳುವಾಗಿದ್ದ 461 ಮೊಬೈಲ್‌ ಫೋನ್‌ ವಾಪಸ್‌ ಮಾಡಲಾಯಿತು. 1 ಕೆ.ಜಿ 813 ಗ್ರಾಂ ಚಿನ್ನ, 3 ಕೆ.ಜಿ 143 ಗ್ರಾಂ ಬೆಳ್ಳಿ, ₹ 7.62 ಲಕ್ಷ ನಗದು ಹಾಗೂ 1,460 ಕೆ.ಜಿ ಶ್ರೀಗಂಧದ ತುಂಡು ಹಾಗೂ 25 ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದೇವೆ’ ಎಂದರು.

ಜಿಲ್ಲಾ ಪೊಲೀಸರ ಕಾರ್ಯವೈಖರಿಯ ವಿಮರ್ಶೆಯನ್ನು ಕೂಡ ಮಾಡಲಾಗಿದೆ. ಈ ವರ್ಷ ದಾಖಲಾದ 30 ಪ್ರಕರಣಗಳಲ್ಲಿ ₹ 1.42 ಕೋಟಿ ಮೌಲ್ಯದ 888 ಗ್ರಾಂ ಎಂಡಿಎಂಎ, 107 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದೇವೆ. ಇತರೆ ಪ್ರಕರಣಗಳಲ್ಲಿ ಕೆಲ ಮಾಲೀಕರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಂದಿಲ್ಲ. ಎಲ್ಲಾ ಸೇರಿದರೆ ವಶಕ್ಕೆ ಪಡೆದಿರುವ ವಸ್ತುಗಳ ಒಟ್ಟು ಮೌಲ್ಯ ₹ 4.32ಕೋಟಿ ದಾಟುತ್ತದೆ ಎಂದು ವಿವರಿಸಿದರು.

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ₹ 34.60 ಲಕ್ಷವನ್ನು ನ್ಯಾಯಾಲಯದ ಅನುಮತಿಯೊಂದಿಗೆ ವಾಪಸ್‌ ಅವರವರ ಖಾತೆಗೆ ಹಣ ಹಾಕಿದ್ದೇವೆ. ಕಳ್ಳತನವಾಗಿದ್ದ ಮೊತ್ತದಲ್ಲಿ ಕೆಲವರು ₹ 4.28 ಲಕ್ಷ ಮೌಲ್ಯದ 57 ಗ್ರಾಂ ಒಡವೆ ಮಾಡಿಸಿಕೊಂಡಿದ್ದರು. ಅದನ್ನೂ ಬಿಡದೆ ವಶಕ್ಕೆ ಪಡೆಯಲಾಗಿದೆ ಎಂದರು.

ವಿವಿಧ ಠಾಣೆಗಳಲ್ಲಿ ಸ್ವತ್ತು ಕಳುವು ಪ್ರಕರಣ, ಸೈಬರ್‌ ಅಪರಾಧ ಪ್ರಕರಣ, ಮಾದಕ ದ್ರವ್ಯ, ಗಾಂಜಾ, ವಾಹನ ವಶಕ್ಕೆ ಪಡೆದಿದ್ದೇವೆ. ಒಟ್ಟು ಮೌಲ್ಯ ₹ 9.09 ಕೋಟಿ ವಸ್ತುಗಳನ್ನು ವಶಕ್ಕೆ ಪಡೆದಂತಾಗಿದೆ. ನಮ್ಮ ಎಲ್ಲಾ ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಕರಣಗಳನ್ನು ಭೇದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ನಿಖಿಲ್‌ ಪ್ರಶಂಸನಾ ಪತ್ರ ವಿತರಿಸಿ ಅಭಿನಂದಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ್‌, ಡಿವೈಎಸ್ಪಿಗಳಾದ ಎಂ.ಎಚ್‌.ನಾಗ್ತೆ, ಮನಿಷಾ, ವಿವಿಧ ಠಾಣೆಗಳ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಕಳುವಾಗಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದು ಮಾಲೀಕರಿಗೆ ಹಸ್ತಾಂತರ
ಕಳುವಾಗಿದ್ದ ಆಭರಣ ಮೊಬೈಲ್‌ ವಶಕ್ಕೆ ಪಡೆದು ಮಾಲೀಕರಿಗೆ ವಾಪಸ್‌

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ನೇತೃತ್ವ ಕಳುವಾಗಿದ್ದ 461 ಮೊಬೈಲ್‌ ಫೋನ್‌ ಮಾಲೀಕರಿಗೆ ವಾಪಸ್‌ ಆಸ್ತಿ ವಾಪಸ್‌ ವಾರ್ಷಿಕ ಪರೇಡ್‌

ಮಾದಕ ವಸ್ತು ಮಾರಾಟ ಮಾಡುವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಸಾರ್ವಜನಿಕರಿಗೆ ತೊಂದರೆಯಾದರೆ ಪೊಲೀಸರು ಸದಾ ನೆರವಿಗೆ ಬರಲಿದ್ದಾರೆ
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

2025ರಲ್ಲಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ಪತ್ತೆ ಮಾಡಿದ ಕೇಸ್‌ ಅಪರಾಧ ಸ್ವರೂಪ; ಕೇಸ್‌ ಪತ್ತೆ * ಲಾಭಕ್ಕಾಗಿ ಕೊಲೆ; 2 * ಡಕಾಯಿತಿ; 1 * ಸರಗಳ್ಳತನ; 12 * ಮನೆ ಕಳವು; 35 * ಸಾಮಾನ್ಯ ಕಳವು; 16 * ಶ್ರೀಗಂಧ ಮರ ಕಳವು; 2 * ಗಮನ ಬೇರೆಡೆ ಸೆಳೆದ ಕಳವು; 4 * ಮೊಬೈಲ್‌ ಕಳವು; 461 ಒಟ್ಟು ಪ್ರಕರಣ; 533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.