ADVERTISEMENT

ತಿಂಗಳಲ್ಲಿ 8 ಪ್ರಕರಣ ಬೇಧಿಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು: 10 ಮಂದಿ ಬಂಧನ

₹2.25 ಕೋಟಿ ಮೌಲ್ಯದ ಆಭರಣ, ವಾಹನ ವಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:16 IST
Last Updated 20 ನವೆಂಬರ್ 2025, 2:16 IST
ಕೋಲಾರದಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ಒಪ್ಪಿಸಿದಾಗ ಮಹಿಳೆ ಖುಷಿಪಟ್ಟ ಸಂದರ್ಭ
ಕೋಲಾರದಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ಒಪ್ಪಿಸಿದಾಗ ಮಹಿಳೆ ಖುಷಿಪಟ್ಟ ಸಂದರ್ಭ   

ಕೋಲಾರ: ಕೋಲಾರ ಜಿಲ್ಲಾ ಪೊಲೀಸರು ಕಳೆದೊಂದು ತಿಂಗಳಲ್ಲಿ ವಿವಿಧೆಡೆ ಚಿನ್ನಾಭರಣ, ಬೈಕ್‌, ಆಟೊ ಹಾಗೂ ಇನ್ನಿತರ ವಸ್ತುಗಳನ್ನು ಕದ್ದಿದ್ದ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.

ಕೋಲಾರ ಗ್ರಾಮಾಂತರ, ಗಲ್‌ಪೇಟೆ ಹಾಗೂ ಮಾಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎಂಟಕ್ಕೂ ಅಧಿಕ ಪ್ರಕರಣಗಳನ್ನು ಬೇಧಿಸಿದ್ದು 10 ಮಂದಿಯನ್ನು ಬಂಧಿಸಿದ್ದಾರೆ. ಕಳೆದ ವಾರ ಮುಳಬಾಗಿಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಹಲವರನ್ನು ಬಂಧಿಸಿದ್ದರು. ಈ ಎಲ್ಲಾ ಆರೋಪಿಗಳಿಂದ ಸುಮಾರು ₹2.25 ಕೋಟಿ ಮೌಲ್ಯದ ಚಿನ್ನಾಭರಣ, ವಾಹನ ಹಾಗೂ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ಹೊರವಲಯದ ಟಮಕದಲ್ಲಿರುವ ಜಿಲ್ಲಾ ಪೊಲೀಸ್‌ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ವೇಳೆ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರು ಸಂಬಂಧಿಸಿದ ವ್ಯಕ್ತಿಗಳಿಗೆ ಚಿನ್ನಾಭರಣ ಹಿಂದಿರುಗಿಸಿದರು. 

ADVERTISEMENT

‘ಕಳೆದ ವಾರ ಮುಳಬಾಗಿಲಿನಲ್ಲಿ ವಿವಿಧ ಪ್ರಕರಣ ಬೇಧಿಸಿ ಹಲವರನ್ನು ಬಂಧಿಸಿ ಸುಮಾರು ₹1 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದೆವು. ಕಳೆದ ಕೆಲ ದಿನಗಳಲ್ಲಿ ₹1.25 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಈಚೆಗೆ ನಗರದ ಗಲ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಸರಣಿ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹20 ಲಕ್ಷ ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಬೇತಮಂಗಲ ರಸ್ತೆಯಲ್ಲಿ ಪೊಲೀಸರನ್ನು ಕಂಡು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲಾಗಿದೆ. ಕೋಲಾರದ ಆಜಾದ್ ನಗರದ ನಿವಾಸಿ ಮೆಕ್ಯಾನಿಕ್ ಜುನೈದ್ ಪಾಷ (23) ಹಾಗೂ ಬೀಡಿ ಕಾಲೊನಿಯ ಬಾಬಾ ಜಾನ್ (24) ಬಂಧಿತರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ವಿವಿಧೆಡೆ ಕಳ್ಳತನ ಮಾಡಿರುವ ವಿಚಾರ ಬಾಯಿಬಿಟ್ಟರು ಎಂದು ಹೇಳಿದರು.

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳುವು ಪ್ರಕರಣದಲ್ಲಿ ಕೆಜಿಎಪ್ ತಾಲ್ಲೂಕಿನ ಪಾರಾಂಡಹಳ್ಳಿ ಗ್ರಾಮದ ನಾಗರಾಜ್ (50) ಎಂಬಾತನನ್ನು ಬಂಧಿಸಿದ್ದೇವೆ. ಈತ ವಿವಿಧ ದೇಗುಲಗಳಲ್ಲಿ ಕಳುವು ಮಾಡಿದ್ದ ಸುಮಾರು ₹1.27 ಲಕ್ಷ ಮೌಲ್ಯದ ಬಂಗಾರದ ತಾಳಿಗಳು, ₹2.85 ಲಕ್ಷ ಮೌಲ್ಯದ ಆಟೊಗಳನ್ನು ಜಫ್ತಿ ಮಾಡಲಾಗಿದೆ ಎಂದರು.

ಮತ್ತೊಂದು ಪ್ರಕರಣದಲ್ಲಿ 48 ಗಂಟೆಗಳಲ್ಲಿ ಕೋಲಾರದ ಟಮಕ ನಿವಾಸಿ ಶಿವ (37), ತಾಲ್ಲೂಕಿನ ಶಿಳ್ಳಂಗೆರೆ ಗ್ರಾಮದ ಜ್ಞಾನದೇವ (36), ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಗ್ರಾಮದ ವರುಣ್ (22) ಎಂಬುವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಹೊರವಲಯದ ಗಾಜಲದಿನ್ನೆಯಲ್ಲಿ ಯರಗೋಳ್‌ ಯೋಜನೆಗೆ ಸಂಬಂಧಿಸಿದ ಕಬ್ಬಿಣದ ವಾಲ್ವ್‌ಗಳನ್ನು (ಸುಮಾರು ₹25 ಲಕ್ಷ ಮೌಲ್ಯ) ಕಳ್ಳತನ ಮಾಡಿದ್ದರು. ಕಬ್ಬಿಣದ ವಾಲ್ವ್‌ಗಳು ಹಾಗೂ ಈ ಕೃತ್ಯಕ್ಕೆ ಬಳಸಿದ ಒಂದು ಲಾರಿಯನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಪ್ರಕರಣಗಳಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್‌.ನಾಗ್ತೆ ಮಾರ್ಗದರ್ಶನದಲ್ಲಿ ಗಲ್‌ಪೇಟೆ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜೆ.ಲೋಕೇಶ್‌ ನೇತೃತ್ವದಲ್ಲಿ ವಾಸುದೇವಮೂರ್ತಿ, ಕೃಷ್ಣಪೂರ್ತಿ, ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕಾಂತರಾಜ್‌ ನೇತೃತ್ವದಲ್ಲಿ ಪಿಎಸ್‌ಐ ಹೇಮಲತಾ, ಮಾಲೂರಿನ ವಿಶೇಷ ಅಪರಾಧ ಪತ್ತೆದಳದ ಇನ್‌ಸ್ಪೆಕ್ಟರ್‌ ರಾಮಪ್ಪ ಬಿ.ಗುತ್ತೇದಾರ್ ನೇತೃತ್ವದಲ್ಲಿ, ಪಿಎಸ್‌ಐ ಶಾಂತಮ್ಮ, ಎಎಸ್‌ಐ ರಮೇಶ್ ಬಾಬು, ರೇಣುಪ್ರಸಾದ್, ಆನಂದ್, ವೆಂಕಟೇಶ್, ವೇಮಗಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಪಿ.ಮಂಜು, ಪಿಎಸ್‌ಐ ಸುನೀತಾದೇವಿ, ಎಎಸ್‌ಐ ನಾರಾಯಣಸ್ವಾಮಿ ಸೇರಿದಂತೆ ಹಲವು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ತಂಡಗಳ ಯಶಸ್ವಿ ಕಾರ್ಯಾಚರಣೆಯನ್ನು ಶ್ಲಾಘಿಸಿದ ನಿಖಿಲ್‌, ನಗದು ಬಹುಮಾನ ವಿತರಿಸಿದರು.

ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪೊಲೀಸ್‌ ಇಲಾಖೆಯ ಕೆಲ ಸಿಬ್ಬಂದಿ ಜೂಜಿನಲ್ಲಿ ಭಾಗಿಯಾಗಿರುವ ವಿಚಾರ ಮಾಧ್ಯಮಗಳಿಂದ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆ ಮಾಡುತ್ತಿದ್ದೇವೆ.
– ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಅಂತರರಾಜ್ಯ ಕಳ್ಳನ ಬಂಧನ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡಂಕಣಿ ಕೋಟೆ ವ್ಯಾಪ್ತಿಗೆ ಸೇರಿದ ಸೀನಿಕೋಟೆ ಗ್ರಾಮದ ನಿವಾಸಿ ಹಾಗೂ ಚಾಲಕ ಉಮಾಶಂಕರ್ (27) ಎಂಬಾತನ್ನು ಬಂಧಿಸಲಾಗಿದೆ. ಮಾಲೂರಿನ ವ್ಯಾಪ್ತಿಗೆ ಸೇರಿದ ವಿವಿಧ ಕಡೆಗಳಲ್ಲಿ ಈತ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿದ್ದ 8 ಕಡೆ 170 ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ನಿಖಿಲ್‌ ಹೇಳಿದರು.

ಈತ ಮಾಲೂರಿನ ವೈಟ್‌ಗಾರ್ಡನ್‌ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಬಂಧಿಸಲಾಗಿದೆ. ಕೊಯಮತ್ತೂರಿನಲ್ಲಿ ಚಾಲಕನಾಗಿದ್ದ ಈತ ಬೇರೆ ಊರಿಗೆ ಹೋದಾಗಲೆಲ್ಲಾ ಕಳ್ಳತನಕ್ಕೆ ಇಳಿಯುತ್ತಿದ್ದ. ರೈಲಿನಲ್ಲಿ ಬಂದು ಕಳ್ಳತನ ಮಾಡಿ ಬಸ್ಸಿನಲ್ಲಿ ಹೋಗುತ್ತಿದ್ದ. ಈತ ಕುಖ್ಯಾತ ಅಂತರರಾಜ್ಯ ಕಳ್ಳ. ಸೇಲಂ ಕೇರಳದಲ್ಲೂ ಇರುತ್ತಿದ್ದ. ಎಂಟು ಪ್ರಕರಣಗಳಲ್ಲಿ ನಮಗೆ ಬೇಕಾಗಿದ್ದ ಎಂದರು.

₹40 ಲಕ್ಷದ ಆಭರಣ ಕದ್ದ ಖದೀಮ

ಸುಮಾರು ₹40 ಲಕ್ಷ ಮೌಲ್ಯದ 272 ಗ್ರಾಂ ಚಿನ್ನ ವಜ್ರ ಹಾಗೂ 640 ಗ್ರಾ. ಬೆಳ್ಳಿ ಒಡವೆ ಕದ್ದಿದ್ದ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಉಚಧೀರ ಶೇಖ್‌ (24) ಎಂಬಾತನ್ನು ಮಾಲೂರು ಪೊಲೀಸ್‌ ಠಾಣೆ ಬಂಧಿಸಿದ್ದಾರೆ. ಲಕ್ಕೂರು ಹೋಬಳಿ ಚಿಕ್ಕತಿರುಪತಿಯಲ್ಲಿ ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದ ಈತ ದಿ ಎಂಪೈರಿಯನ್‌ ವಿಲ್ಲಾದ ಮನೆಯ ಮಾಸ್ಟರ್‌ ಬೆಡ್‌ರೂಮ್‌ನ ವಾರ್ಡೋಬ್ ಗೋದ್ರೇಜ್‌ ಲಾಕರ್‌ ಮುರಿದು ಚಿನ್ನ ವಜ್ರ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಎಂದು ನಿಖಿಲ್‌ ಹೇಳಿದರು.

ಹಲವು ಸಿ.ಸಿ.ಕ್ಯಾಮೆರಾ ಪರಿಶೀಲಿಸಿ ಆಧುನಿಕ ತಂತ್ರಜ್ಞಾನ ಬಳಸಿ ಈತನನ್ನು ಬಂಧಿಸಿ ಕದ್ದಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಬಚಾವ್‌ ಆಗಲು ಹೊಸ ದೃಶ್ಯವನ್ನೇ ಸೃಷ್ಟಿಸಿ ಪರಾರಿಯಾಗಿದ್ದ ಎಂದರು.

ಶ್ರೀಗಂಧ ಕದ್ದಿದ್ದವರ ಬಂಧನ
ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಮಲ್ಲಸಂದ್ರ ಗ್ರಾಮದ ಬಚ್ಚಣ್ಣ ಎಂಬುವರ ಜಮೀನಿನಲ್ಲಿ ಶ್ರೀಗಂಧದ ಮರ ಕದ್ದಿದ್ದ ಆರೋಪಿಗಳನ್ನು ವೇಮಗಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ವಿ.ಕೋಟೆ ಮಂಡಲದ ಕೋಡಿ ಬಂಡೆ ಗ್ರಾಮದ ಸುಬ್ರಮಣಿ (28) ಹಾಗೂ ಅರುಣ್ (25) ಎಂದು ಗುರುತಿಸಲಾಗಿದೆ. ಸುಮಾರು ₹50 ಸಾವಿರ ಮೌಲ್ಯದ 40 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಕಳವು ಮಾಡಿದ್ದು ವಶಕ್ಕೆ ಪಡೆಯಲಾಗಿದೆ ಎಂದು ನಿಖಿಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.