ADVERTISEMENT

ಕೋಲಾರ: ಕೋಳಿ ಸಾಕಣೆದಾರರಿಗೆ ಶೋಷಣೆ, ರಕ್ಷಣೆಗೆ ಒತ್ತಾಯ

ಕೋಲಾರಮ್ಮ ಜಿಲ್ಲಾ ಕೋಳಿ ಸಾಕಣೆದಾರರ, ಮಾರಾಟಗಾರರ ಸಂಘದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:48 IST
Last Updated 21 ಫೆಬ್ರುವರಿ 2026, 7:48 IST
ಕೋಲಾರದಲ್ಲಿ ಶುಕ್ರವಾರ ನಡೆದ ಕೋಲಾರಮ್ಮ ಜಿಲ್ಲಾ ಕೋಳಿ ಸಾಕಣೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘದ ಜಿಲ್ಲಾ ಸಮ್ಮೇಳನ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ನಡೆದ ಕೋಲಾರಮ್ಮ ಜಿಲ್ಲಾ ಕೋಳಿ ಸಾಕಣೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘದ ಜಿಲ್ಲಾ ಸಮ್ಮೇಳನ ಮುಖಂಡರು ಪಾಲ್ಗೊಂಡಿದ್ದರು    

ಕೋಲಾರ: ರೈತರು ಕಂಪನಿಯೊಂದಿಗೆ (ಇಂಟಿಗ್ರೇಟೆಡ್) ಒಪ್ಪಂದ ಮಾಡಿಕೊಂಡು ಕೋಳಿ ಸಾಕುವ ಪದ್ಧತಿ ಕಾರಣ ಕಾರ್ಪೊರೇಟ್ ಸಂಸ್ಥೆಗಳಿಂದ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸಿ ಕೋಳಿ ಸಾಕಣೆದಾರ ರೈತರ ರಕ್ಷಿಸಬೇಕು ಎಂದು ಕೋಳಿ ಸಾಕಣೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಟಿ.ಯಶವಂತ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕೋಲಾರಮ್ಮ ಜಿಲ್ಲಾ ಕೋಳಿ ಸಾಕಣೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಪೊರೇಟ್ ಕೃಷಿಯಲ್ಲಿ ಕೋಳಿ ಸಾಕಣೆಯೂ ಒಂದು ಭಾಗವಾಗಿಬಿಟ್ಟಿದೆ. ದಿನನಿತ್ಯ ಕಂಪನಿಗಳಿಂದ ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ. ಇದರ ವಿರುದ್ಧ ಸಹಕಾರ ಚಳವಳಿಯ ಮೂಲಕ ಪ್ರತಿರೋಧ ತೋರಬೇಕಾಗಿದೆ. ಪ್ರತಿಯೊಬ್ಬ ಸದಸ್ಯ ಒಗ್ಗಟ್ಟನ್ನು ಪ್ರದರ್ಶಿಸಿ ಸಹಕಾರಿ ವ್ಯವಸ್ಥೆಯನ್ನು ಉಳಿಸಬೇಕಾಗಿದೆ ಎಂದರು.

ADVERTISEMENT

ಕೋಳಿ ಸಾಕಣೆದಾರರು ಯಾವುದೇ ಸಹಕಾರಿ ಸಂಸ್ಥೆಯ ಮೂಲಕ ಸಾಲ ಸೌಲಭ್ಯ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಸಹಕಾರ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ಕೋಳಿ‌ ಉತ್ಪಾದಕ ರೈತರ ಕಷ್ಟ ಸುಖದಲ್ಲಿ ಸರ್ಕಾರಗಳು ಭಾಗಿಯಾಗಬೇಕು. ಮುಂಬರುವ ಬಜೆಟ್‌ನಲ್ಲಿ ಸಹಕಾರ ಸಂಸ್ಥೆಗಳ ಉಳಿವಿಗಾಗಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಟೊಮೆಟೊ ಉದ್ಯಮಿ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಕೋಳಿ ಸಾಕಣೆ ಉದ್ಯಮವಲ್ಲ; ರೈತರು ತಮ್ಮ ಜೀವನೋಪಾಯಕ್ಕಾಗಿ ಕಟ್ಟಿಕೊಂಡಿದ್ದಾರೆ. ಅವರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಅವಕಾಶ ನೀಡಬೇಕಾಗಿದೆ. ಉತ್ಪಾದನೆಯ ಬೇಡಿಕೆ ಹೆಚ್ಚಾಗಿದೆ, ಅದರ ಅನುಗುಣವಾಗಿ ಉತ್ಪಾದನಾ ಖರ್ಚು ವೆಚ್ಚಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಜೊತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಗೋಪಾಲ್ ಮಾತನಾಡಿ, ‘ರೈತರನ್ನು ಕೋಳಿ ಸಾಕಣೆ ಕಂಪನಿಗಳ ಹಿಡಿತದಿಂದ ರಕ್ಷಿಸಬೇಕು. ಸ್ಥಳೀಯವಾಗಿಯೇ ಆಹಾರ ಘಟಕ ಸೇರಿದಂತೆ ಔಷಧಿಗಳ ಮಳಿಗೆಗಳನ್ನು ಪ್ರಾರಂಭ ಮಾಡಲು ಸರ್ಕಾರವು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ಹಾಗೂ ಕೋಳಿ ಸಾಕಣೆ ರೈತರಿಗೆ ₹ 50 ಸಾವಿರದಂತೆ ಸಾಲ ನೀಡಲಾಯಿತು. ಸಂಘದ ನಿರ್ದೇಶಕ ಸುಗಟೂರು ಶ್ರೀಧರ್ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ಹೋರಾಟಗಳ ಬಗ್ಗೆ ತಿಳಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎನ್.ಮುನಿವೆಂಕಟೇಗೌಡ, ಕೋಳಿ ಸಾಕಣೆ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ವೆಂಕಟರೆಡ್ಡಿ, ಕೆ.ಪಿ.ಆರ್.ಎಸ್‌ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್, ಕಸಬಾ ಸೊಸೈಟಿ ಅಧ್ಯಕ್ಷ ದಿಂಬ ನಾಗರಾಜಗೌಡ, ನಿರ್ದೇಶಕ ಶ್ರೀರಾಮರೆಡ್ಡಿ, ಸಂಘದ ಕಾರ್ಯದರ್ಶಿ ರಕ್ಷಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.