ADVERTISEMENT

ಕೋಲಾರ | ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ‌

ನಾಲ್ಕು ಕಾರ್ಮಿಕರ ಕಾಯ್ದೆ ರದ್ದತಿ, ಮನರೇಗಾ ಮರು ಜಾರಿಗೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:12 IST
Last Updated 13 ಫೆಬ್ರುವರಿ 2026, 7:12 IST
ಕೋಲಾರದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು
ಕೋಲಾರದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು   

ಕೋಲಾರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕರ ಕಾಯ್ದೆ ರದ್ದತಿ ಹಾಗೂ ಮನರೇಗಾ ಮರು ಜಾರಿಗೆ ಆಗ್ರಹಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಗುರುವಾರ ನಗರದ ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಈ ಪ್ರತಿಭಟನೆ ನಡೆದಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ನಗರದ ಗಾಂಧಿವನದಿಂದ ಮೆರವಣಿಗೆ ನಡೆಸಿದರು.

ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ದೇಶದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಇದ್ದ 29 ಕಾರ್ಮಿಕ ಕಾಯ್ದೆಗಳನ್ನು 4 ಕಾರ್ಮಿಕ ಕೋಡ್‌ಗಳಾಗಿ ಜಾರಿಗೊಳಿಸಿದ್ದಾರೆ. ಕಾರ್ಮಿಕರು ಮುಷ್ಕರ ನಡೆಸಿದರೆ ದಂಡ, ಜೈಲು ಶಿಕ್ಷೆ, ವೇತನ ಕಡಿತಗೊಳಿಸುವ ನೀತಿಗಳನ್ನು ಜಾರಿ ಮಾಡಿದ್ದಾರೆ. ಮನರೇಗಾದಡಿ ಕಾರ್ಮಿಕರ ಕೆಲಸದ ಹಕ್ಕನ್ನು ಕಸಿದುಕೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಜನರ ಜೀವನಕ್ಕೆ ಬರೆ ಎಳೆದಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ‘ಖಾಸಗಿ ಬಂಡವಾಳಗಾರರಿಗೆ ಮಣೆಹಾಕಿ ರೈತರು, ಜನ ಸಾಮಾನ್ಯರ ಮೋಸ ಮಾಡಿದ್ದಾರೆ. ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದೆ, ಕೃಷಿಯನ್ನು ಉತ್ತೇಜಿಸದೆ ಭೂ‌ಸ್ವಾದೀನ ಕಾಯ್ದೆ ಮೂಲಕ ರೈತರ ಜಮೀನು ಕಸಿದುಕೊಳ್ಳುವ ಹುನ್ನಾರ ಮಾಡಿದ್ದಾರೆ. ಇದನ್ನು ದೇಶದ ಜನ ವಿರೋಧಿಸಬೇಕಿದೆ’ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ‌, ‘ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಬೀಜ ಮಸೂದೆ ಕಾಯ್ದೆಯನ್ನು ವಾಪಸು ಮಾಡುವ ಜೊತೆಗೆ ಕಾರ್ಮಿಕರ ನಾಲ್ಕು ಕೋಡ್‌ಗಳನ್ನು ಜಾರಿ ಮಾಡಲು ಯಾವುದೇ ಕಾರಣಕ್ಕೂ ಬಿಡಬಾರದು’ ಎಂದು ತಿಳಿಸಿದರು

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ‘ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್‌ ವಾಪಸ್ಸು ಪಡೆಯಬೇಕು. ಕೇಂದ್ರ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ವಿರೋಧಿಸಬೇಕು. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸಅನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೆಚ್.ಬಿ ಕೃಷ್ಣಪ್ಪ, ಎಂ.ಭೀಮರಾಜ್, ಎನ್.ಕಲ್ಪನಾ, ಆಶಾ, ವಿ.ಮಂಜುಳಾ, ಲಕ್ಷ್ಮಿದೇವಿ, ರಾಜಮ್ಮ, ರಾಮಚಂದ್ರಪ್ಪ, ವಿಜಯಕುಮಾರ್, ಅಂಜನಪ್ಪ, ನಿಕಿಲ್, ಶಿವಕುಮಾರ್, ಪೃಥ್ವಿ, ಮೂರ್ತಿ, ರಮೇಶ್, ನಾರಾಯಣರೆಡ್ಡಿ, ಶಾಂತಮ್ಮ, ಬುಟ್ಟಾಲ ಗಣೇಶ್, ಎಂ.ಶ್ರೀನಿವಾಸ್, ನವೀನ್ ಕುಮಾರ್‌ ಇದ್ದರು.

ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.