
ಕೋಲಾರ: ಜಿಲ್ಲೆಯ 28 ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಗೆ 324 ವಿದ್ಯಾರ್ಥಿಗಳು ಗೈರಾಗಿದ್ದರು.
ಕನ್ನಡ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ 11,144 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 10,820 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿತ್ತು.
ಪರೀಕ್ಷೆಯು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆದಿದೆ. ಯಾವುದೇ ನಕಲು, ಅಕ್ರಮ ಪತ್ತೆಯಾಗಿಲ್ಲ. ಪರೀಕ್ಷೆಗೆ ನಿಯೋಜನೆಯಾಗಿರುವ ಅಧಿಕಾರಿಗಳು, ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದರು.
ಕೋಲಾರ–10, ಬಂಗಾರಪೇಟೆ-3, ಕೆಜಿಎಫ್-3, ಶ್ರೀನಿವಾಸಪುರ-3, ಮುಳಬಾಗಿಲು-5, ಮಾಲೂರಿನಲ್ಲಿ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಇದರಲ್ಲಿ 13 ಸರ್ಕಾರಿ, 5 ಅನುದಾನಿತ, 10 ಅನುದಾನರಹಿತ ಪರೀಕ್ಷಾ ಕೇಂದ್ರಗಳಾಗಿದ್ದು, ಎಲ್ಲೂ ಯಾವುದೇ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದರು.
ಕೆಲವು ಕೇಂದ್ರಗಳಲ್ಲಿ ಮಕ್ಕಳಿಗೆ ಸಿಬ್ಬಂದಿ ಹೂವು ನೀಡಿ ಸ್ವಾಗತಿಸಿ ಶುಭ ಕೋರಿದರು. ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು.
ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಅಂಚೆ ಕಚೇರಿಗೆ ಪರೀಕ್ಷಾ ಸಿಬ್ಬಂದಿ ಜೊತೆ ತೆಗೆದುಕೊಂಡು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡಿದರು. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತ 200ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಬೆಳಿಗ್ಗೆ ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುನ್ನವೇ ವಿದ್ಯಾರ್ಥಿಗಳು ಬಂದು ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ನಮೂದಾಗಿದೆ ಎಂಬುದನ್ನು ಪರಿಶೀಲಿಸುತ್ತಿದ್ದುದು ಕಂಡು ಬಂತು. ಕೆಲವರು ಆತಂಕದಲ್ಲಿದ್ದರು. ಕೆಲ ಮಕ್ಕಳೊಂದಿಗೆ ಪೋಷಕರು ಕೂಡ ಬಂದಿದ್ದರು.
ಜಿಲ್ಲಾಧಿಕಾರಿ ಎಂ.ಆರ್.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಡಿಡಿಪಿಯು ರಾಜಶೇಖರ್ ಪಟ್ಟಣಶೆಟ್ಟಿ ವಿವಿಧ ಕೇಂದ್ರಗಳಿಗೆ ಪರಿಶೀಲಿಸಿದರು.
ವಿದ್ಯಾರ್ಥಿಗಳು ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ಬರೆದು ಖುಷಿಯಿಂದಲೇ ಹೊರಬಂದರು. ಕನ್ನಡ ಪರೀಕ್ಷೆ ಆಗಿದ್ದ ಕಾರಣ ಸಹಜವಾಗಿಯೇ ಸುಲಭವಿದ್ದು, ಎಲ್ಲರ ಮೊಗದಲ್ಲಿ ಖುಷಿ ಇತ್ತು. ಪರೀಕ್ಷೆ ಸುಲಭವಾಗಿತ್ತು, ಎಂದು ಹೇಳಿದರು.
ಮಾರ್ಚ್ 2ರ ಸೋಮವಾರ ಭೂಗೋಳ ವಿಜ್ಞಾನ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಮೊದಲ ದಿನ ಮಕ್ಕಳಲ್ಲಿ ಆತಂಕ ಕನ್ನಡ ಪರೀಕ್ಷೆ ನೋಂದಾಯಿಸಿದ್ದ 11,144 ವಿದ್ಯಾರ್ಥಿಗಳು ಸಿಸಿಟಿವಿ, ವೆಬ್ ಕಾಸ್ಟಿಂಗ್ ನಿಗಾ
ಮೊದಲ ದಿನದ ಪರೀಕ್ಷೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ನಡೆದಿದೆ. ಯಾವುದೇ ಅಕ್ರಮ ಅಥವಾ ಗೊಂದಲ ವರದಿ ಆಗಿಲ್ಲರಾಜಶೇಖರ್ ಪಟ್ಟಣಶೆಟ್ಟಿ ಡಿಡಿಪಿಯು
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ ಕೋಲಾರ ನಗರ ವ್ಯಾಪ್ತಿಯ ಬಾಲಕಿಯರ ಬಾಲಕರ ಪಿಯು ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿ ಪರೀಕ್ಷಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ಪರೀಕ್ಷೆಯ ವೆಬ್ ಕಾಸ್ಟಿಂಗ್ ವೀಕ್ಷಿಸಿ ಪರೀಕಾ ಅಕ್ರಮಗಳಿಗೆ ಅವಕಾಶವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.