
ಕೋಲಾರ: ಏರ್‌ಬಸ್ ಎಚ್ 25 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಸಂಬಂಧಿಸಿದಂತೆ ₹ 1 ಸಾವಿರ ಕೋಟಿಗೂ ಅಧಿಕ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಕೌಶಲಯುತ ಹಾಗೂ ಶ್ರಮಿಕ ಯುವಜನತೆಗೆ ಉದ್ಯೋಗಾವಕಾಶಗಳು ದೊರಕಲಿವೆ. ಜೊತೆಗೆ ರಕ್ಷಣಾ ರಫ್ತು ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಿರ್ಮಿಸಿರುವ ಏರ್‌ಬಸ್ ಎಚ್ 125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕದ ಉದ್ಘಾಟನೆ ವೇಳೆ ಅವರು ಮಾತನಾಡಿದರು.
ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಭಾರತದಲ್ಲೇ ತಯಾರಿಕೆ (ಮೇಕ್ ಇನ್ ಇಂಡಿಯಾ) ಮತ್ತು ಆತ್ಮ ನಿರ್ಭರ ಭಾರತ ನಮ್ಮ ಆರ್ಥಿಕ ನೀತಿಯ ಮೂಲಾಧಾರಗಳಾಗಿದ್ದು, ಖಾಸಗಿ ವಲಯವು ರಕ್ಷಣಾ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಸುಧಾರಣೆಗಳನ್ನು ತಂದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಜೋಡಣಾ ಘಟಕ ನಿರ್ಮಾಣವಾಗಿದೆ ಎಂದರು.
ಈ ಹಿಂದೆ ರಕ್ಷಣಾ ಉತ್ಪಾದನೆಯು ಕೇವಲ ಸಾರ್ವಜನಿಕ ವಲಯಕ್ಕೆ ಸೀಮಿತವಾಗಿತ್ತು. ಆದರೀಗ ನಾಲ್ಕನೇ ಒಂದು ಭಾಗದಷ್ಟು ಖಾಸಗಿ ವಲಯದಿಂದ ಬರುತ್ತಿದೆ. ರಕ್ಷಣಾ ರಫ್ತು ಗಣನೀಯವಾಗಿ ಹೆಚ್ಚಳವಾಗಿದ್ದು, ಭಾರತವಿಂದು ವಿಶ್ವದ ಅಗ್ರ ರಫ್ತುದಾರರ ಪಟ್ಟಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಎಚ್‌ಎಎಲ್, ಇಸ್ರೋ ಮತ್ತು ಡಿಆರ್‌ಡಿಒ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ ಭಾರತದ ವೈಮಾನಿಕ ಕ್ಷೇತ್ರದ ಬೆನ್ನೆಲುಬಾಗಿದ್ದು, ಕೋಲಾರದ ವೇಮಗಲ್‌ನಲ್ಲಿ ನಿರ್ಮಿಸಿರುವ ಈ ಘಟಕದಿಂದ ರಾಜ್ಯದ ಸ್ಥಾನಮಾನ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಮಾತನಾಡಿ, ‘ವೇಮಗಲ್‌ನ ಹೆಲಿಕಾಪ್ಟರ್ ಜೋಡಣಾ ಘಟಕವು ಪ್ರಾರಂಭದಿಂದಲೇ ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (ಇಎಎಸ್‌ಎ) ಪ್ರಮಾಣೀಕರಿಸಿದ ದೇಶದ ಮೊಟ್ಟ ಮೊದಲ ಘಟಕವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣಾ ಘಟಕ ಇದಾಗಿದೆ. ಭಾರತವು ಈ ವಲಯದಲ್ಲಿ ಜಾಗತಿಕ ನಾಯಕನಾಗುವ ಗುರಿಯನ್ನು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ‘2047 ದೃಷ್ಟಿಕೋನ’ ಜಾರಿಗೊಳಿಸುವಲ್ಲಿ ರಕ್ಷಣೆ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳು ಪ್ರಮುಖ ಪಾತ್ರವಹಿಸಲಿವೆ. ದೇಶದಲ್ಲಿಂದು ಎರಡೂ ಕ್ಷೇತ್ರಗಳು ಒಂದೇ ಸೈಕಲ್‌ನ ಚಕ್ರಗಳ ರೀತಿಯಲ್ಲಿ ಸಮಾನವಾಗಿ ಬೆಳವಣಿಗೆಯಾಗುತ್ತಿವೆ ಎಂದರು.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತವಿಂದು ರಕ್ಷಣಾ ಆಮದುದಾರನಾಗಿ ಉಳಿಯದೆ, 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ. 2026ರ ಬಜೆಟ್‌ನಲ್ಲಿ ವಿಮಾನ ಬಿಡಿಭಾಗಗಳ ಮೇಲಿನ ತೆರಿಗೆ ವಿನಾಯಿತಿಯಿಂದ ಭಾರತದಲ್ಲೇ ತಯಾರಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗಿದೆ ಎಂದು ಹೇಳಿದರು.
ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ನಮ್ಮಲ್ಲಿ ಜಗತ್ತಿನ ನಾಲ್ಕನೇ ಎಚ್ 125 ಹೆಲಿಕಾಪ್ಟರ್ ಅಂತಿಮ ಜೋಡಣೆ ಘಟಕ ಬಂದಿರುವುದು ಈ ವಲಯಕ್ಕೆ ಮತ್ತಷ್ಟು ಬಲ ತರಲಿದೆ. ಜೊತೆಗೆ ನಿರ್ವಹಣೆ, ದುರಸ್ತಿ ಸೇವಾ ಚಟುವಟಿಕೆ ನಡೆಯಲಿದ್ದು, ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಮೃದ್ಧ ಅವಕಾಶಗಳು ತೆರೆದುಕೊಳ್ಳಲಿದ್ದು, ಉದ್ಯೋಗ ಸೃಷ್ಟಿಯೂ ಹೆಚ್ಚಾಗಲಿದೆ. ಇದರಿಂದ ರಾಜ್ಯದ ಯುವ ಜನರಿಗೆ ಆಧುನಿಕ ತಂತ್ರಜ್ಞಾನ ವಲಯಕ್ಕೆ ಪ್ರವೇಶ ಸಿಗಲಿದೆ ಎಂದು ನುಡಿದರು.
ಮುಂಬೈನಿಂದ ವರ್ಚುವಲ್ ವೇದಿಕೆ ಮೂಲಕ ಘಟಕಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಅಷ್ಟರಲ್ಲಿ ಇಲ್ಲಿನ ವೇದಿಕೆಯಲ್ಲಿ ನಿಗದಿತ ಸಮಯವೂ ಮೀರಿತ್ತು, ಕತ್ತಲೆಯಾಗುತ್ತಾ ಬಂದಿತ್ತು. ಹೀಗಾಗಿ, ಹೆಲಿಕಾಪ್ಟರ್‌ಗಳಲ್ಲಿ ಬಂದಿದ್ದರಿಂದ ಸಮಸ್ಯೆ ಆಗಬಾರದೆಂದು ಗಣ್ಯರು ಮಧ್ಯದಲ್ಲೇ ಹೊರಟರು.
ಘಟಕದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲೆಯ ಪೊಲೀಸರು ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ರಕ್ಷಣೆ ಒದಗಿಸಿದ್ದರು. ಗಣ್ಯರು ರಕ್ಷಣಾ ಇಲಾಖೆಯ ಮೂರು ಹೆಲಿಕಾಪ್ಟರ್‌ಗಳಲ್ಲಿ ಬಂದಿದ್ದರು. ಘಟಕದ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಸಂಸದ ಎಂ.ಮಲ್ಲೇಶ್ ಬಾಬು, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಏರ್‌ಬಸ್ ಹೆಲಿಕಾಪ್ಟರ್ ಸಿಇಒ ಬ್ರೂನೋ ಈವನ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ತಹಶೀಲ್ದಾರ್ ಡಾ.ನಯನಾ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಏರ್‌ಬಸ್ ಹಾಗೂ ಫ್ರಾನ್ಸ್ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಇದ್ದರು.
2ನೇ ಸಾಲಿನಲ್ಲಿ ಸೀಟು; ಉಸ್ತುವಾರಿ ಶಾಸಕ ಗೈರು
ಏರ್‌ಬಸ್ ಎಚ್ 125 ಲಘು ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಎರಡನೇ ಸಾಲಿನಲ್ಲಿ ಸೀಟಿನ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಆವಣಿ ಜಾತ್ರೆಗೆ ಅವರು ಬಂದಿದ್ದರಾದರೂ ಈ ಕಾರ್ಯಕ್ರಮದಲ್ಲಿ ಬರಲಿಲ್ಲ. ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಕೂಡ ಬಂದಿರಲಿಲ್ಲ. ಇತ್ತ ಸಂಸದ ಎಂ.ಮಲ್ಲೇಶ್ ಬಾಬು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಾಂಗ್ರೆಸ್ ಮುಖಂಡ ಸೀತಿಹೊಸೂರು ಮುರಳಿ ಕಾರ್ಯಕ್ರಮದಲ್ಲಿ ಇದ್ದರು.