ADVERTISEMENT

ರಸ್ತೆಗಳಲ್ಲಿ ಗುಂಡಿ ಮುಚ್ಚಿ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಆಕ್ರೋಶ -ಬೃಹತ್ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:56 IST
Last Updated 31 ಅಕ್ಟೋಬರ್ 2025, 2:56 IST
ಕೋಲಾರದಲ್ಲಿ ಗುರುವಾರ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹಾಗೂ ಉಸ್ತುವಾರಿ ಸುರೇಶ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ಗುಂಡಿ ಮುಚ್ಚಿ ಪ್ರತಿಭಟನೆ ನಡೆಸಿದರು
ಕೋಲಾರದಲ್ಲಿ ಗುರುವಾರ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹಾಗೂ ಉಸ್ತುವಾರಿ ಸುರೇಶ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ಗುಂಡಿ ಮುಚ್ಚಿ ಪ್ರತಿಭಟನೆ ನಡೆಸಿದರು   

ಕೋಲಾರ: ನಗರದ ರಸ್ತೆಗಳಲ್ಲಿನ ಗುಂಡಿ ಇದ್ದ ಸ್ಥಳ ಗುರುತಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ಅಲ್ಲಿಯೇ ಪ್ರತಿಭಟನೆ ನಡೆಸಿದರು. ಮರಳು ಹಾಗೂ ಜಲ್ಲಿಕಲ್ಲು ಪುಡಿಯಿಂದ ಗುಂಡಿಗಳನ್ನು ಮುಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಂಗಾರಪೇಟೆಯ ರಸ್ತೆಯ ಇಟಿಸಿಎಂ ಸರ್ಕಲ್ ಬಳಿ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದರು. ಕಾಂಗ್ರೆಸ್ ಸರ್ಕಾರ ರಸ್ತೆ ಗುಂಡಿ ಮುಚ್ಚದೇ ಜನರ ಜೀವಕ್ಕೆ ಸಂಚಕಾರ ತರುತ್ತಿದೆ ಎಂದು ದೂರಿದರು. ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ‌ಇಂಚರ ಗೋವಿಂದರಾಜ ಅವರ ಮುಖವಾಡ ಧರಿಸಿ ಟೀಕಾ ಪ್ರಹಾರ ನಡೆಸಿದರು.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಮಾತನಾಡಿ, ‘ಜಿಲ್ಲೆಯಲ್ಲಿ ರಸ್ತೆಗಳು ಹದಗೆಟ್ಟಿವೆ. ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ, ಜನಪ್ರತಿನಿಧಿಗಳು ಕಂಡು ಕಾಣದಂತೆ ಓಡಾಡುತ್ತಿದ್ದಾರೆ. ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ‌ಕಾಣೆಯಾಗಿದ್ದಾರೆ. ನಗರಾಭಿವೃದ್ಧಿ ಸಚಿವರು ನಿದ್ರಾವಸ್ಥೆಯಲ್ಲಿದ್ದಾರೆ. ಅಪಘಾತ ಹೆಚ್ಚುತ್ತಿವೆ. ಗುಂಡಿ, ಹಳ್ಳಗಳಿಂದ ರಸ್ತೆಯಲ್ಲಿ ವಯಸ್ಸಾದವರು, ಮಹಿಳೆಯರು, ಮಕ್ಕಳು ಬಿದ್ದು ಪ್ರಾಣಕ್ಕೆ ಕುತ್ತು ಉಂಟಾಗುತ್ತಿದೆ’ ಎಂದು ಹರಿಹಾಯ್ದರು.

ADVERTISEMENT

ರಸ್ತೆಗಳ ಅವ್ಯವಸ್ಥೆ ಖಂಡಿಸಿ ಹಲವು ಉದ್ಯಮಗಳು ರಾಜ್ಯ ತೊರೆಯುತ್ತೇವೆ ಎಂಬುದಾಗಿ ಹೇಳಿದರೆ,‌ ಅದನ್ನು ಉಪಮುಖ್ಯಮಂತ್ರಿ ಬ್ಲ್ಯಾಕ್‌ ಮೇಲ್ ಎಂದು ಕರೆಯುತ್ತಾರೆ. ರಸ್ತೆ ನಿರ್ಮಿಸಿಕೊಡಿ ಎಂದು ಹೇಳುವುದು ಬ್ಲ್ಯಾಕ್ ಮೇಲ್ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲೂ ಇದೇ ಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರೇ ನೀಡಿದ ಮರಳು‌, ಜಲ್ಲಿ ಕಲ್ಲಿನಿಂದ ಗುಂಡಿಗಳನ್ನು ಮುಚ್ಚಿಸುತ್ತಿದ್ದೇವೆ. ಜನಪ್ರತಿನಿಧಿಗಳು ಜನರ ತೆರಿಗೆ ಹಣವನ್ನು ಪೋಲು ಮಾಡದೆ, ಅವರ ಅನುಕೂಲಕ್ಕಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸಬೇಕು. ಈ ಸರ್ಕಾರಕ್ಕೆ ಬೆಂಗಳೂರು ಮಾತ್ರ ಕಾಣುತ್ತಿದೆ‌. ಬರೀ ಕಲೆಕ್ಷನ್ ಏಜೆಂಟ್ ಆಗಿದೆ ಎಂದು ಹರಿಹಾಯ್ದರು.

ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸುರೇಶ್ ಬಾಲಕೃಷ್ಣ ಮಾತನಾಡಿ, ‘ಚಿನ್ನದ ನಾಡು ಎಂದು ಪ್ರಖ್ಯಾತವಾಗಿದ್ದ ಕೋಲಾರ ಜಿಲ್ಲೆಯು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಸದ ನಾಡು ಎಂದು ಕಳಂಕಕ್ಕೆ ತುತ್ತಾಗುತ್ತಿದೆ. ಜೊತೆಗೆ ರಸ್ತೆಗಳು ಸರಿ ಇಲ್ಲದೆ ಜನರು ನರಕ ಅನುಭವಿಸುತ್ತಿದ್ದಾರೆ. ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಬೀದಿದೀಪ ಇಲ್ಲವೆಂದು ಸಾರ್ವಜನಿಕರು ಪ್ರತಿಭಟನೆ ಮೂಲಸೌಲಭ್ಯ ಇಲ್ಲವಾಗಿದೆ. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಕೆಲ ದಿನ ‌ಕಾದು ನೋಡುತ್ತೇವೆ. ಅಷ್ಟರಲ್ಲಿ ಸರಿ ಹೋಗದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕೇವಲ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ರಾಜ್ಯದ ರಸ್ತೆಗಳು ಸರ್ಕಾರದ ನಿರ್ಲಕ್ಷದಿಂದ ಸರ್ವನಾಶವಾಗಿವೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಸಿ.ಅಜಯ್ ಮಾತನಾಡಿ, ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ಮಾಡಬೇಕಾದ ಸರ್ಕಾರ ಈ ವಿಷಯದಲ್ಲಿಯೂ ಬೇಜವಾಬ್ದಾರಿ ಪ್ರದರ್ಶಿಸಿದೆ. ಇದೊಂದು ಕೆಟ್ಟ ಸರ್ಕಾರ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾದ ಯುವರಾಜ್, ವಿಜಯ್ ಕುಮಾರ್, ವೇಣುಗೋಪಾಲ್, ಚಂದ್ರಬಾಬು, ಪ್ರಜ್ವಲ್, ಚಾಲುಕ್ಯ, ನಾಗರಾಜು ಇದ್ದರು.

ಕೋಲಾರದಲ್ಲಿ ಗುರುವಾರ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹಾಗೂ ಉಸ್ತುವಾರಿ ಸುರೇಶ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.