ADVERTISEMENT

ಕೆಜಿಎಫ್: ಕೋಟಗಾನಹಳ್ಳಿಯ ಕ್ರೀಡಾ ಪ್ರತಿಭೆ ಹರ್ಷಿತಾ

ಎತ್ತರ ಜಿಗಿತ, ಉದ್ದ ಜಿಗಿತ ಎರಡರಲ್ಲೂ ನೈಪುಣ್ಯ ಗಳಿಸಿರುವ ಬಾಲೆ

ಕೃಷ್ಣಮೂರ್ತಿ
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
ಬಹುಮಾನ ಮತ್ತು ಪಾರಿತೋಷಕಗಳೊಂದಿಗೆ ಡಿ.ಹರ್ಷಿತಾ
ಬಹುಮಾನ ಮತ್ತು ಪಾರಿತೋಷಕಗಳೊಂದಿಗೆ ಡಿ.ಹರ್ಷಿತಾ   

ಕೆಜಿಎಫ್: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಬೇಕು. ಅದಕ್ಕಾಗಿ ಹೆಚ್ಚಿನ ಅಭ್ಯಾಸ ನಡೆಸಬೇಕು ಎಂದು ಹೇಳುವಾಗ ಆಕೆಯ ಧ್ವನಿ ಖಚಿತವಾಗಿತ್ತು. ಅಭ್ಯಾಸ ನಡೆಸಿದರೆ ಅದೇನು ಕಷ್ಟವಲ್ಲ ಎಂಬುದು ಹರ್ಷಿತಾಳ ಮಾತಿನಲ್ಲಿ ವಿಶ್ವಾಸ ತುಂಬಿ ತುಳುಕುತ್ತಿತ್ತು.

ಇಂತಹ ಸಾಧನೆ ಮಾಡಬೇಕೆಂದು ಛಲ ಹೊತ್ತಿರುವ ಟಿ.ಗೊಲ್ಲಹಳ್ಳಿಯ ವಿಮಲಾ ಹೃದಯಾಲಯದಲ್ಲಿ ಓದುತ್ತಿರುವ ಡಿ.ಹರ್ಷಿತಾ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದ ಕೋಟಗಾನಹಳ್ಳಿಯ ಪ್ರತಿಭೆ.‌

ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಅತೀವ ಆಸಕ್ತಿ ಇರುವ ನಮ್ಮ ಮಗಳ ಆಸೆಗೆ ನಾವು ಎಂದೂ ಅಡ್ಡಿ ಪಡಿಸಿಲ್ಲ ಎಂಬುದು ಕೃಷಿಕರಾದ ತಂದೆ ದೇವೇಗೌಡ ಮತ್ತು ತಾಯಿ ಧನಲಕ್ಷ್ಮೀ ಅವರ ಮಾತು.

ADVERTISEMENT

ಹರ್ಷಿತಾ ವೇಗದ ಓಟ, ಎತ್ತರ ಜಿಗಿತ ಮತ್ತು ಉದ್ದ ಜಿಗಿತ ಇವರ ಆಸಕ್ತಿಯ ಕ್ಷೇತ್ರಗಳು. 7ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ 3ನೇ ಸ್ಥಾನಗಳಿಸುವ ಮೂಲಕ ಪ್ರಾರಂಭವಾದ ಪದಕಗಳ ಬೇಟೆ ಇನ್ನೂ ನಿಂತಿಲ್ಲ. ಇದಾದ ಮೇಲೆ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್ಐ) ನಡೆಸಿದ ಕ್ರೀಡಾಕೂಟದಲ್ಲಿ 1.36 ಮೀಟರ್ ದೂರ ಜಿಗಿದು ಮೊದಲ ಸ್ಥಾನ ಗಳಿಸಿದರು.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಹೊಸಕೋಟೆಯಲ್ಲಿ ಎಸ್‌ಜಿಎಫ್ಐ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಎತ್ತರ ಜಿಗಿತ ಮೊದಲ ಸ್ಥಾನ. ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿರುವುದು ಇವರ ಸಾಧನೆಗೆ ಕನ್ನಡಿ.

ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ. ತಿರುಪತಿಯಲ್ಲಿ ನಡೆದ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದರು.

ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ 17 ವಯಸ್ಸಿನೊಳಗಿನ ಕ್ರೀಡಾಪಟುಗಳಿಗಾಗಿ ನಡೆದ ಮುಕ್ತ ಸ್ಪರ್ಧೆಯಲ್ಲಿ ಹೈಜಂಪ್ ಮತ್ತು ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದರಿಂದಾಗಿ ಏಪ್ರಿಲ್ 16 ರಿಂದ ಶ್ರೀಲಂಕಾದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಹರ್ಷಿತಾ ಪಡೆದಿದ್ದಾರೆ.

ಹರ್ಷಿತಾ ಎಲ್ಲಾ ರೀತಿಯಿಂದಲೂ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳುವ ಲಕ್ಷಣಗಳು ಇವೆ. ಶಾಲೆ ಆಕೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ವಿದ್ಯಾಭ್ಯಾಸವನ್ನು ಕೂಡ ಉಚಿತವಾಗಿ ನೀಡುತ್ತಿದೆ ಎಂದು ಪ್ರಾಂಶುಪಾಲೆ ಲಿನ್ಸಿ ಮೇರಿ ಅವರ ಮಾತು.

*
ಕ್ರೀಡೆ ಜೊತೆಯಲ್ಲಿ ಭರತನಾಟ್ಯ ಮತ್ತು ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಹರ್ಷಿತಾ, ವಿದ್ಯಾಭ್ಯಾಸದಲ್ಲಿಯೂ ಮುಂದೆ. ಪರೀಕ್ಷೆಯಲ್ಲಿ ಶೇ 90ಕ್ಕಿಂತ ಕಡಿಮೆ ಅಂಕ ಪಡೆಯುವುದಿಲ್ಲ.
-ಎಂ.ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.