ADVERTISEMENT

ಶ್ರೀನಿವಾಸಪುರ ಬಂದ್: ಮಾವಿಗೆ ಬೆಂಬಲ ಬೆಲೆಗೆ ಆಗ್ರಹ; ಮನವಿ ಆಲಿಸಿದ ಡಿ.ಸಿ

ರಸ್ತೆಗೆ ಮಾವು ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 7:07 IST
Last Updated 12 ಜೂನ್ 2025, 7:07 IST
ಶ್ರೀನಿವಾಸಪುರ ಪಟ್ಟಣದಲ್ಲಿ ಬುಧವಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬೆಂಬಲ ಬೆಲೆಗೆ ಆಗ್ರಹಿಸಿ ರಸ್ತೆಗೆ ಮಾವಿನ ಕಾಯಿ ಸುರಿದು ಪ್ರತಿಭಟನೆ ನಡೆಸಲಾಯಿತು
ಶ್ರೀನಿವಾಸಪುರ ಪಟ್ಟಣದಲ್ಲಿ ಬುಧವಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬೆಂಬಲ ಬೆಲೆಗೆ ಆಗ್ರಹಿಸಿ ರಸ್ತೆಗೆ ಮಾವಿನ ಕಾಯಿ ಸುರಿದು ಪ್ರತಿಭಟನೆ ನಡೆಸಲಾಯಿತು   

ಶ್ರೀನಿವಾಸಪುರ: ಮಾವಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಶ್ರೀನಿವಾಸಪುರ ತಾಲ್ಲೂಕು ಬಂದ್‌ ಮಾಡಿ, ರಸ್ತೆಗೆ ಮಾವಿನ ಕಾಯಿ ಸುರಿದು ಪ್ರತಿಭಟನೆ ನಡೆಸಲಾಯಿತು.

ಬೆಳಿಗ್ಗೆಯಿಂದಲೇ ಪ್ರತಿಭಟನಾ ಕಾವು ಹೆಚ್ಚಾಗಿತ್ತು. ರೈತರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು, ಬಿಜೆಪಿ, ಜೆಡಿಎಸ್‌ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾರಿಗೆ ಬಸ್‌ ನಿಲ್ದಾಣದ ಬಳಿ ಮಾವಿನ ಕಾಯಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.

ಪಟ್ಟಣದಲ್ಲಿನ ಅಂಗಡಿಗಳು, ಹೋಟೆಲ್, ಬೇಕರಿಗಳು, ತರಕಾರಿ ಅಂಗಡಿಗಳ‌ನ್ನು ಮುಚ್ಚಲಾಗಿತ್ತು. ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳ ಬಾಗಿಲು ತೆರೆಯಲು ಬಿಡಲಿಲ್ಲ. ವಾಹನಗಳ ಸಂಚಾರಕ್ಕೂ ಅವಕಾಶ ಕೊಡಲಿಲ್ಲ. ಕೋಲಾರ, ಚಿಂತಾಮಣಿ, ಮುಳಬಾಗಿಲು ಕಡೆಗೆ ಹೋಗಲು ಬಸ್‍ಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದರು. ‌ಮೆಡಿಕಲ್‌ ಶಾಪ್‌, ಹಾಲಿನ ಮಳಿಗೆಗಳು ಹಾಗೂ ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು.

ADVERTISEMENT

ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಮಾಜಿ ಸಂಸದಸ ಎಸ್‌.ಮುನಿಸ್ವಾಮಿ ಪ್ರತಿಭಟನೆ ನೇತೃತ್ವದ ವಹಿಸಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿ ಬೆಂಬಲ ಬೆಲೆ ವಿಚಾರವಾಗಿ ಸಭೆ ನಡೆಸುವ ಹಾಗೂ ತೋತಾಪುರಿ ಮಾವಿಗೆ ಉತ್ತಮ ದರ ಕೊಡಿಸುವ ಭರವಸೆ ನೀಡಿದರು. ನಂತರ ಪ್ರತಿಭಟನಕಾರರು ಬಂದ್‌ ವಾಪಸ್‌ ಪಡೆದರು.

ಚಿನ್ನಪ್ಪ ರೆಡ್ಡಿ ಮಾತನಾಡಿ, ‘ಮಾವು ಬೆಳೆ ದರ ಕುಸಿತದ ಹಿನ್ನೆಲೆಯಲ್ಲಿ 10 ದಿನಗಳಿಂದ ಬೆಂಬಲ ಬೆಲೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರವಾಗಲಿ, ಜನಪ್ರತಿನಿಧಿಗಳಿಗಾಗಲಿ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾವು ತಿರುಳು ತೆಗೆಯುವ ಫ್ಯಾಕ್ಟರಿಗಳು ತಾಲ್ಲೂಕಿನಲ್ಲಿ ಇಲ್ಲ. ಆ ಫ್ಯಾಕ್ಟರಿಗಳು ಇದ್ದಿದ್ದರೆ ನಮಗೆ ಈ ಸಮಸ್ಯೆ ಬರುತ್ತಿರಲಿಲ್ಲ. ನೆರೆಯ ಆಂಧ್ರಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ ಬಂದಿದೆ. ಆಂಧ್ರದ ರೀತಿ ನಮಗೂ ಬೆಂಬಲ ಬೆಲೆ ಕೊಡಬೇಕು’ ಆಗ್ರಹಿಸಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಹಲವಾರು ಸರ್ಕಾರಗಳು ಬಂದು ಹೋಗಿವೆ. ಆದರೆ, ಮಾವು ಬೆಳಗಾರರ ಸಂಕಷ್ಟ ಈವರೆ ಪರಿಹಾರವಾಗಿಲ್ಲ. ಪಕ್ಕದ ಆಂಧ್ರಪ್ರದೇಶದಲ್ಲಿ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿದ್ದಾರೆ. 1 ಟನ್‍ಗೆ ₹4 ಸಾವಿರ ಸಹಾಯಧನ ನೀಡುತ್ತಿದ್ದಾರೆ. ರಾಜ್ಯದಲ್ಲಿ ಪಲ್ಪ್ ಫ್ಯಾಕ್ಟರಿಗಳು ಇನ್ನೂ ತೆರೆದಿಲ್ಲ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಪಲ್ಪ್‌ ಫ್ಯಾಕ್ಟರಿಗಳನ್ನು ತೆರೆಯಲು ಸೂಚಿಸಬೇಕು’ ಎಂದು ಒತ್ತಾಯಿಸಿದರು.

‘10 ದಿನಗಳಿಂದ ನಿರಂತರವಾಗಿ ಮಾವು ಬೆಳೆಗಾರರು ಮುಷ್ಕರ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ, ಉಸ್ತವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿಲ್ಲ. ಉಸ್ತವಾರಿ ಸಚಿವರು ಹುಟ್ಟಿನಿಂದಲೂ ಸಾಹುಕಾರ. ಅವರಿಗೆ ರೈತರ ಕಷ್ಟಗಳು ಎಲ್ಲಿ ಅರಿವಿಗೆ ಬರಬೇಕು. ರೈತರ ಸಂಕಷ್ಟಗಳ ಈಡೇರಿಸದಿದ್ದರೆ ರೈತರ ಗೋಳು ತಮಗೆ ತಟ್ಟುತ್ತದೆ’ ಎಂದು ಕಿಡಿಕಾರಿದರು.

ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‍ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಮಂಡಲ ಅಧ್ಯಕ್ಷ ರೋಣೂರು ಚಂದ್ರಶೇಖರ್, ಕೆಪಿಆರ್‍ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ದೊಡಮಲದೊಡ್ಡಿ ಶ್ರೀನಾಥರೆಡ್ಡಿ, ಕದಿರಂಪಲ್ಲಿ ಶಶಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಪವಿಭಾಗಧಿಕಾರಿ ಡಾ.ಮೈತ್ರಿ, ಹೆಚ್ಚುವರಿ ಎಸ್‌ಪಿಗಳಾದ ರವಿಶಂಕರ್, ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಎಂ.ಶ್ರೀನಿವಾಸನ್, ಡಿವೈಎಸ್‍ಪಿ ನಂದಕುಮಾರ್, ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಇದ್ದರು.

ಜಿಲ್ಲಾಧಿಕಾರಿ ಎಂ.ಆರ್‌.ರವಿ ಎಸ್‌ಪಿ ನಿಖಿಲ್‌ ಬಿ. ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹಾಗೂ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಜೊತೆ ಮಾತುಕತೆ ನಡೆಸಿದರು
ಶ್ರೀನಿವಾಸಪುರ ಬಂದ್‌ ಕಾರಣ ಬಸ್‌ಗಳಿಲ್ಲದೆ ಸುತ್ತಮುತ್ತಲಿನ ಜನರು ನಡೆದು ಸಾಗಿದ ಕ್ಷಣ
ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವ ಎಸ್‌ಪಿ ನಿಖಿಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಬಸ್‌ ಇಲ್ಲದೆ ಪರದಾಡಿದ ಪ್ರಯಾಣಿಕರು
ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಇಡೀ ತಾಲ್ಲೂಕಿನ ಮಾವಿನ ಕಾಯಿ ತೆಗೆದುಕೊಂಡು ಬೆಂಗಳೂರಿನ ವಿಧಾನಸೌಧ ಮುಂಭಾಗ ರಾಶಿ ಹಾಕಿ ಪ್ರತಿಭಟನೆ ನಡೆಸುತ್ತೇವೆ
ನೀಲಟೂರು ಚಿನ್ನಪ್ಪರೆಡ್ಡಿ ಅಧ್ಯಕ್ಷ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುರುವಾರ ಸಭೆ ಕರೆದಿದ್ದಾರೆ. ಮಾವಿಗೆ ಬೆಂಬಲ ಬೆಲೆ ಘೋಷಿಸದೆ ಇದ್ದರೆ ಉಗ್ರ ಹೋರಾಟದ ಮೂಲಕ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ
ಎಸ್‌.ಮುನಿಸ್ವಾಮಿ ಮಾಜಿ ಸಂಸದ

ಉಸ್ತುವಾರಿ ಸಚಿವರೊಂದಿಗೆ ಇಂದು ಸಭೆ

‘ಮಾವಿನ ದರ ಕುಸಿತದ ವಿಚಾರವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ರೈತರ ನಿಯೋಗ ಕರೆದುಕೊಂಡು ಬರಲು ಹೇಳಿದ್ದಾರೆ. ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ 10 ಪದಾಧಿಕಾರಿಗಳು ಗುರುವಾರ ಬೆಂಗಳೂರಿಗೆ ಬರಲು ಒಪ್ಪಿದ್ದಾರೆ. ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಲಾಗುವುದು. ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು. ‘ಮನವಿಗೆ ಸ್ಪಂದಿಸಿ ಬಂದ್ ಹಿಂಪಡೆದಿರುವ ಎಲ್ಲಾ ಮಾವು ಬೆಳೆಗಾರರಿಗೆ ಧನ್ಯವಾದಗಳು’ ಎಂದರು.

ತೋತಾಪುರಿಗೆ ಉತ್ತಮ ದರಕ್ಕೆ ಕ್ರಮ

‘ಪ್ರಮುಖವಾಗಿ ತೋತಾಪುರಿ ತಳಿಯ ಮಾವಿಗೆ ದರ ಕಡಿಮೆಯಾಗಿದೆ. ಈ ಮಾವನ್ನು ಜ್ಯೂಸ್‌ ಮಾಡುವ ಉದ್ದೇಶಕ್ಕೆ ಸಂಸ್ಕರಣಾ ಘಟಕಗಳಿಗೆ ಕಳಿಸಲಾಗುತ್ತದೆ. ಅಲ್ಲಿ ಸರಿಯಾದ ರೇಟ್‌ ಸಿಗುತ್ತಿಲ್ಲ. ಹೀಗಾಗಿ ಉತ್ತಮ ಬೆಲೆ ಕೊಡಿಸಲು ಮಾವು ಬೆಳೆಗಾರರು ಆಗ್ರಹಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ತಿಳಿಸಿದರು. ಶ್ರೀನಿವಾಸಪುರ ಪಟ್ಟಣಕ್ಕೆ ಭೇಟಿ ನೀಡಿ ಪ್ರತಿಭಟನಾನಿರತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಾವು ಬೆಳೆಗಾರರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆದಿದೆ. ತೋಟಗಾರಿಕೆ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲಾ ಸಂಸ್ಕರಣಾ ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿನ ಒಳಗಡೆ ಇರುವ ಸಂಸ್ಕರಣಾ ಘಟಕಗಳು ವಿಶೇಷವಾಗಿ ಶ್ರೀನಿವಾಸಪುರ ತೋತಾಪುರಿ ಮಾವು ಖರೀದಿ ಮಾಡಬೇಕೆಂದು ಸೂಚಿದ್ದಾರೆ. ಅದಕ್ಕೆ ಉದ್ಯಮಿಗಳು ಒಪ್ಪಿದ್ದಾರೆ. ದರ ಕೊಡುವ ವಿಚಾರದಲ್ಲಿ ತುಸು ಗೊಂದಲವಿದೆ’ ಎಂದರು. ‘ಬೆಂಬಲ ಬೆಲೆ ಕೊಡಬೇಕೆಂಬ ಬೇಡಿಕೆ ಇದೆ. ಪಕ್ಕದ ಆಂಧ್ರದಲ್ಲಿ ನೀಡುತ್ತಿರುವ ಬೆಂಬಲ ಬೆಲೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಪ್ರಸ್ತಾಪ ಕಳಿಸಿದ್ದೇವೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.