ADVERTISEMENT

ಕೋಲಾರ: 8,582 ಮಂದಿಗೆ ಕಚ್ಚಿದ ನಾಯಿಗಳು!

ನಾಯಿ ಕಾಟದಿಂದ ಜಿಲ್ಲೆ ಜನ ಹೈರಾಣು; ರಾತ್ರಿ ಓಡಾಡುವಂತಿಲ್ಲ; ಹೊರಗೆ ಮಕ್ಕಳ ಬಿಡುವಂತಿಲ್ಲ

ಕೆ.ಓಂಕಾರ ಮೂರ್ತಿ
Published 2 ಜನವರಿ 2025, 6:21 IST
Last Updated 2 ಜನವರಿ 2025, 6:21 IST
ಕೋಲಾರ ಜಿಲ್ಲೆಯಲ್ಲಿ ಬೀದಿಬೀದಿಗಳಲ್ಲಿ ಬೀದಿನಾಯಿ ಕಾಟ
ಕೋಲಾರ ಜಿಲ್ಲೆಯಲ್ಲಿ ಬೀದಿಬೀದಿಗಳಲ್ಲಿ ಬೀದಿನಾಯಿ ಕಾಟ   

ಕೋಲಾರ: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ರಾತ್ರಿ ಓಡಾಡುವಂತಿಲ್ಲ, ಬೈಕ್‌ ಓಡಿಸುವಂತಿಲ್ಲ, ಮಕ್ಕಳನ್ನು ಹೊರಗೆ ಬಿಡುವಂತಿಲ್ಲ ಎಂಬ ಪರಿಸ್ಥಿತಿ ನೆಲೆಸಿದೆ. ದಿನೇದಿನೇ ಹೆಚ್ಚುತ್ತಿರುವ ಈ ಶ್ವಾನಗಳ ಉಪಟಳದಿಂದ ಜನರ ಸ್ಥಿತಿ ‘ನಾಯಿ’ಪಾಡಾಗಿದೆ.

ಜಿಲ್ಲೆಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2024ರಲ್ಲಿ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 8,582 ಮಂದಿಗೆ ಬೀದಿನಾಯಿಗಳು ಕಚ್ಚಿವೆ.

ಇಷ್ಟು ದಿನ ಸಾರ್ವಜನಿಕರು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪದೇಪದೇ ದೂರು ನೀಡಿ ಬೇಸತ್ತಿರುವ ಜನರು ನೇರವಾಗಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.

ADVERTISEMENT

ಬೀದಿಬೀದಿಗಳಲ್ಲಿ ಜೇನಿನ ರೀತಿ ಮುತ್ತಿಕೊಳ್ಳುವ ಹಂತಕ್ಕೆ ನಾಯಿ ಕಾಟ ಜೋರಾಗಿದೆ. ಗ್ಯಾಂಗ್ ಕಟ್ಟಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ರೌಡಿಗಳಂತೆ ಈ ಶ್ವಾನಗಳು ವರ್ತಿಸುತ್ತಿವೆ. ಹೆಜ್ಜೆ ಹೆಜ್ಜೆಗೂ ಗುರ್‌ ಎನ್ನುತ್ತಾ ಭೀತಿ ಸೃಷ್ಟಿಸಿವೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರಿಗೆ ಸಂಚಾಕಾರ ತೊಂದೊಡ್ಡಿದ್ದು, ಜನ ರೋಸಿ ಹೋಗಿದ್ದಾರೆ. ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಎಗರುತ್ತಿವೆ. ಬೆಳಿಗ್ಗೆ ವ್ಯಾಯಾಮಕ್ಕೆ ಹೋಗುವ ಮಹಿಳೆಯರು, ವೃದ್ಧರು, ಶಾಲೆಗಳು ತೆರಳುವ‌‌ ಮಕ್ಕಳಗಳ ಮೇಲೆ ನಾಯಿಗಳ ಗುಂಪಾಗಿ ದಾಳಿ ಮಾಡುತ್ತಿವೆ.

‘ಕಳ್ಳರನ್ನಾದರೂ ಎದುರಿಸಬಹುದು, ಈ ನಾಯಿ ಕಾಟ ಬೇಡ’ ಎನ್ನುಷ್ಟರ ಮಟ್ಟಿಗೆ ಜನರು ತಲುಪಿದ್ದಾರೆ. ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವವ ಸಂಖ್ಯೆ ಹೆಚ್ಚುತ್ತಲೇ ಇದೆ.

ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿದ್ದು, ಇದರ ಉಪಟಳಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಪ್ರತಿ ಗಲ್ಲಿಯಲ್ಲಿಯೂ ಸರಿಸಮಾರು 50 ರಿಂದ 100 ನಾಯಿಗಳಿವೆ. ಜನ ರಸ್ತೆಗೆ ಇಳಿಯಬೇಕಾದರೆ ಯೋಚನೆ ಮಾಡುವಂತಾಗಿದೆ.

ಮಟನ್, ಚಿಕನ್ ಅಂಗಡಿಗಳು, ಮಾಂಸಾಹಾರಿ ಹೋಟೆಲ್‌ಗಳು, ಕಸದ ರಾಶಿ ಬಳಿ ನೂರಾರು ಬೀದಿ ನಾಯಿಗಳು ಗುಂಪಾಗಿರುತ್ತವೆ. ನಗರ, ಪಟ್ಟಣಗಳಲ್ಲಿ ಕಸದ ರಾಶಿ ಹೆಚ್ಚಿರುವುದೂ ಬೀದಿ ನಾಯಿ ಹಾವಳಿಗೆ ಕಾರಣ ಎಂಬುದು ಸಾರ್ವಜನಿಕರ ಆಕ್ರೋಶ.

ಹಲವು ವರ್ಷಗಳಿಂದ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯಾಗಲೀ ಅಥವಾ ಬೀದಿ ನಾಯಿಗಳನ್ನು ಹಿಡಿಯುವ ಕೆಲಸವಾಗಲಿ ನಗರದಲ್ಲಿ ಸಮರ್ಪಕವಾಗಿ ನಡೆದಿಲ್ಲ.

ಕೋಲಾರದ ಗಾಂಧಿನಗರ ಬಡಾವಣೆಯಲ್ಲಿ ಕೇವಲ ವಾರದ ಅಂತರದಲ್ಲಿ 156 ನಾಯಿಗಳು ಕಚ್ಚಿದ ಪ್ರಕರ‌ಣ ದಾಖಲಾಗಿವೆ ಎಂಬುದಾಗಿ ಈಚೆಗೆ ನಗರಸಭೆಯಲ್ಲಿ ಸದಸ್ಯ ಪ್ರವೀಣಗೌಡ ದೂರಿದ್ದರು. 

ನಾಯಿಗಳು ಕಚ್ಚಿದ ಪ್ರಕರಣ ಬಂಗಾರಪೇಟೆ ತಾಲ್ಲೂಕಲ್ಲಿ ಅಧಿಕ ಸಮರ್ಪಕವಾಗಿ ನಡೆಯದ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ತಿಂಗಳಿಗೆ 800 ಪ್ರಕರಣ ದಾಖಲಾಗುತ್ತಿವೆ. ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಬೀದಿನಾಯಿ ಹಾವಳಿ ತಡೆಗೆ ಸಂತಾನ ಶಕ್ತಿಹರಣ ಚಿಕಿತ್ಸೆಯೊಂದೇ ಈಗಿರುವ ಪರಿಹಾರ
ಡಾ.ಜಿ.ಶ್ರೀನಿವಾಸ್‌ ಜಿಲ್ಲಾ ಆರೋಗ್ಯಾಧಿಕಾರಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.