ADVERTISEMENT

ಕೋಲಾರ | ಬೇಡಿಕೆ ಈಡೇರುವವರೆಗೆ ಧರಣಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:39 IST
Last Updated 28 ನವೆಂಬರ್ 2025, 5:39 IST
ಕೋಲಾರ ಜಿಲ್ಲಾಡಳಿತ ಭವನ ಎದುರು ಗುರುವಾರ ಧರಣಿ ವೇಳೆ ಎಎಪಿ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೋಲಾರ ಜಿಲ್ಲಾಡಳಿತ ಭವನ ಎದುರು ಗುರುವಾರ ಧರಣಿ ವೇಳೆ ಎಎಪಿ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು    

ಕೋಲಾರ: ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರನ್ನು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಬಾರದೆಂದು ಆಗ್ರಹಿಸಿ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಗುರುವಾರ ನಡೆಸಿದರು.‌

ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರೂ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿರುವುದು ಖಂಡನೀಯ ಎಂದರು.

ರೈತರೊಂದಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಜಿಲ್ಲಾಡಳಿತ ಭವನದ ಗೇಟ್‌ ಮುಂದೆ ಪೆಂಡಾಲ್ ಹಾಕಲು ಮುಂದಾದಾಗ ಪೊಲೀಸರು ತಡೆದರು. ಅನುಮತಿ ಪಡೆಯದೆ ಪೆಂಡಾಲ್ ಹಾಕಲು ಅವಕಾಶ ಕೊಡಲ ಎಂದರು.

ADVERTISEMENT

ಆಗ ಎಎಪಿ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ, ಅರಣ್ಯ ಇಲಾಖೆಯಿಂದ ರೈತರಿಗೆ ಆಗಿರುವ ಅನ್ಯಾಯ ವಿರುದ್ಧ ಹೋರಾಟಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಇದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕಾರ್ಯಕರ್ತರೇ ಪೆಂಡಾಲ್ ನಿರ್ಮಿಸಿಕೊಂಡು ಭಜನೆ ಮಾಡುವ ಮೂಲಕ ಧರಣಿ ಮುಂದುವರಿಸಿದರು.

‘ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ. ಪ್ರತಿಭಟನೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ರೈತರು ಸೇರಿದಂತೆ ಸಂಘ ಸಂಸ್ಥೆಗಳ ನೆರವಿನಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ವೆಂಕಟಾಚಲಪತಿ ಎಚ್ಚರಿಕೆ ನೀಡಿದರು.

‘ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡೆಸಿರುವ ಅರಣ್ಯ ಪ್ರದೇಶಗಳ ಜಂಟಿ ಸರ್ವೇ ಸಂಬಂಧವಾಗಿ ವಿಶೇಷ ತನಿಖಾ ತಂಡಕ್ಕೆ 48 ಗಂಟೆಗಳಲ್ಲಿ ಸಂಬಂಧಪಟ್ಟ ಖಾತೆ, ಪಹಣಿ, ಮ್ಯೂಟೇಷನ್ ಹಾಗೂ ಇತರೆ ದಾಖಲೆಗಳ ಮಾಹಿತಿ ಒದಗಿಸಲು ಸೂಚನೆ ನೀಡಿ ನೋಟಿಸ್ ಜಾರಿ ಮಾಡಲಾಗಿದೆ. ಇದು ಸರಿ ಅಲ್ಲ’ ಎಂದರು.

ಯಾವ ಸರ್ಕಾರಿ ಕಚೇರಿಗಳಲ್ಲಿ 48 ಗಂಟೆಗಳಲ್ಲಿ ದಾಖಲೆ ನೀಡುತ್ತಾರೆ? ದಾಖಲೆಗಳನ್ನು ಗ್ರಾಮ ಆಡಳಿತ ಕಚೇರಿಗೆ ಸಲ್ಲಿಸುವಲ್ಲಿ ವಿಫಲವಾದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ರಾಜಸ್ವ ನಿರೀಕ್ಷಕರಿಂದ ಎಚ್ಚರಿಕೆಯ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು.

ಅಬ್ಬಣಿಯಲ್ಲಿ 63 ಎಕರೆ, ಹರಟಿಯಲ್ಲಿ 75 ಎಕರೆ ಹಾಗೂ ಹರಳಕುಂಟೆ ಸೇರಿದಂತೆ ಸುಮಾರು 409.35 ಎಕರೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಸಿ.ಅಜಯ್, ಖದೀರ್ ಪಾಷ, ವಿಜಯ್ ಕುಮಾರ್, ರಾಮೇಗೌಡ, ರೇವಣ್ಣ. ಶೇಷನ್, ದೇವರಾಜ್, ಲಕ್ಷಮ್ಮ ಹಾಗೂ ಕಾರ್ಯಕರ್ತರು ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಕಡೆಗಣನೆ; ಆಕ್ರೋಶ ಪೆಂಡಾಲ್ ಹಾಕುವ ವಿಚಾರದಲ್ಲಿ ಪೊಲೀಸರ ಜತೆ ಮಾತಿನ ಚಕಮಕಿ ಎಎಪಿ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ನೇತೃತ್ವದಲ್ಲಿ ಧರಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.