ADVERTISEMENT

ಮುಳಬಾಗಿಲು | ವೈಯಕ್ತಿಕ ಹಿತಾಸಕ್ತಿಗೆ ಅಂಬೇಡ್ಕರ್ ಭಾವ ಚಿತ್ರ ಬಳಸದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 14:16 IST
Last Updated 20 ಜನವರಿ 2024, 14:16 IST
ತಾಲ್ಲೂಕಿನ ಎಚ್.ಬೈಯಪ್ಪನಹಳ್ಳಿ ಗ್ರಾಮದ ಬಳಿ ಅಂಬೇಡ್ಕರ್ ಚಿತ್ರವನ್ನು ಧ್ವಂಸ ಮಾಡಿದವರ ವಿರುದ್ದ ಕ್ರಮಕ್ಕಾಗಿ ಕಾಂಗ್ರೆಸ್ ಎಸ್ಸಿ.ಸೆಲ್ ನಗರ ಘಟಕದ ಅಧ್ಯಕ್ಷ ಕಾರ್ಗಿಲ್ ವೆಂಕಟೇಶ್ ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದ್ದ ಚಿತ್ರ.
ತಾಲ್ಲೂಕಿನ ಎಚ್.ಬೈಯಪ್ಪನಹಳ್ಳಿ ಗ್ರಾಮದ ಬಳಿ ಅಂಬೇಡ್ಕರ್ ಚಿತ್ರವನ್ನು ಧ್ವಂಸ ಮಾಡಿದವರ ವಿರುದ್ದ ಕ್ರಮಕ್ಕಾಗಿ ಕಾಂಗ್ರೆಸ್ ಎಸ್ಸಿ.ಸೆಲ್ ನಗರ ಘಟಕದ ಅಧ್ಯಕ್ಷ ಕಾರ್ಗಿಲ್ ವೆಂಕಟೇಶ್ ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದ್ದ ಚಿತ್ರ.   

ಮುಳಬಾಗಿಲು: ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಅಂಬೇಡ್ಕರ್‌ ಭಾವಚಿತ್ರ ಬಳಸಬಾರದು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘದಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಿದರು.

ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷ ಹಾಗೂ ಸ್ವಾಭಿಮಾನಿ ದಲಿತ ರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕಾರ್ಗಿಲ್ ವೆಂಕಟೇಶ್, ತಾಲ್ಲೂಕಿನ ಹೆಬ್ಬಣಿ ಸಮೀಪದ ಎಚ್.ಬೈಯಪ್ಪನಹಳ್ಳಿ ಬಳಿ ಜಮೀನೊಂದರ ವಿಚಾರವಾಗಿ ಸಮಸ್ಯೆ ಇದ್ದ ಜಮೀನಿನಲ್ಲಿ ಕಲ್ಲೊಂದನ್ನು ನಾಟಿ ಮಾಡಿ ಅದರ ಮೇಲೆ ಅಂಬೇಡ್ಕರ್ ಭಾವ ಚಿತ್ರ ಬರೆಸಿದ್ದರು. ಆದರೆ, ಯಾರೋ ಅಂಬೇಡ್ಕರ್ ಚಿತ್ರ ಒಳಗೊಂಡಿದ್ದ ಕಲ್ಲು ಮುರಿದು ನಾಶಪಡಿಸಿದ್ದರು.

ಈ ವಿಚಾರವಾಗಿ ಕಾರ್ಗಿಲ್ ವೆಂಕಟೇಶ್ ಎಚ್.ಬೈಯಪ್ಪನಹಳ್ಳಿಯ ಹಲವು ಗ್ರಾಮಸ್ಥರು ಸೇರಿ ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಕಾರ್ಗಿಲ್ ವೆಂಕಟೇಶ್ ವಿಷ ಕುಡಿದು ಪ್ರತಿಭಟನೆ ನಡೆಸಿದ್ದರು.

ADVERTISEMENT

ದಲಿತ ಸಂಘರ್ಷ ಸಮಿತಿ ( ಸಂಯೋಜಕ) ಸಂಯೋಜಕ ವತಿಯಿಂದ ಶನಿವಾರ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ನಡೆದಿದ್ದ ಪ್ರತಿಭಟನೆಗೆ ವಿರುದ್ಧವಾಗಿ ಸಮಿತಿ ಕಾರ್ಯಕರ್ತರು ಹಾಗೂ ಎಚ್.ಬೈಯಪ್ಪನಹಳ್ಳಿ ಕೆಲ ಗ್ರಾಮಸ್ಥರು ಪ್ರತಿಭಟನೆ ಮಾಡಿ ಅಂಬೇಡ್ಕರ್ ಭಾವಚಿತ್ರ ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಕಲ್ಲಿನ ಮೇಲಿನ ಅಂಬೇಡ್ಕರ್ ಚಿತ್ರ ನಾಶವಾಗಲು ಕಾರ್ಗಿಲ್ ವೆಂಕಟೇಶ್ ಹಾಗೂ ಅವರ ಬೆಂಬಲಿಗರೇ ಕಾರಣ. ಕೂಡಲೇ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ದಸಂಸ (ಸಂಯೋಜಕ) ಸಮಿತಿ ಜಿಲ್ಲಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್ ದೂರಿದರು.

ಡಿವೈಎಸ್ಪಿ ಡಿ.ಸಿ.ನಂದಕುಮಾರ್, ಯಾವುದೇ ಫ್ಲೆಕ್ಸ್, ಪೋಸ್ಟರ್ ಮತ್ತು ಕಟೌಟ್‌ ಹಾಕಲು ಅನುಮತಿ ಕಡ್ಡಾಯವಾಗಿರುತ್ತದೆ. ಎಚ್.ಬೈಯಪ್ಪನಹಳ್ಳಿ ವಿಚಾರ ಕುರಿತು ಪರಿಶೀಲಿಸಲಾಗುವುದು ಎಂದರು.

ಕಸಿವಿರೆಡ್ಡಿಹಳ್ಳಿ ರಾಜು, ಕೀಲುಹೊಳಲಿ ಸತೀಶ್, ಕಿಟ್ಟ, ಅಭಿ ಮತ್ತಿತರರು ಇದ್ದರು.

ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದವರು ಅಂಬೇಡ್ಕರ್ ಚಿತ್ರವನ್ನು ವೈಯಕ್ತಿಕವಾಗಿ ಬಳಸಿಕೊಂಡ ಕಾರಣವೇ ಧ್ವಂಸಕ್ಕೆ ಕಾರಣ ಎಂದು ಕಾರ್ಗಿಲ್ ವೆಂಕಟೇಶ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಪ್ರತಿಭಟನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.