
ಕೋಲಾರ: ಶಾಸಕ ಕೊತ್ತೂರು ಮಂಜುನಾಥ ಯಾವುದೇ ರೀತಿ ಅಭಿವೃದ್ಧಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಸಾರ್ವಜನಿಕರು ಏನೇ ಕೆಲಸಕ್ಕೆ ಹೋದರೂ ಎಂಎಲ್‌ಸಿ ಅನಿಲ್ ಕುಮಾರ್ ಕಡೆ ಕೈ ತೋರಿಸುತ್ತಾರೆ. ಮತದಾರರು ಬೇಸರ ಮಾಡಿಕೊಂಡು ಮನೆಗಳಿಗೆ ವಾಪಸ್ ಆಗುತ್ತಿದ್ದಾರೆ ಎಂದು ಮಾಜಿ ಸಚಿವ ಬಿಜೆಪಿಯ ವರ್ತೂರ್ ಆರ್.ಪ್ರಕಾಶ್ ಆರೋಪಿಸಿದರು.
ನಗರ ಹೊರವಲಯದ ಕೋಗಿಲಹಳ್ಳಿಯ ತಮ್ಮ ನಿವಾಸದ ಬಳಿ ಬುಧವಾರ ಕ್ಷೇತ್ರ ವ್ಯಾಪ್ತಿಯ ಅರಹಳ್ಳಿ, ತೊರದೇವಂಡಹಳ್ಳಿ, ಮಾರ್ಜೆನಹಳ್ಳಿ, ಹೊನ್ನೇನಹಳ್ಳಿ ಹಾಗೂ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಗಳ ಮುಖಂಡರೊಂದಿಗೆ ನಡೆದ ರಾಜಕೀಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಈಗಿನ ಶಾಸಕರಿಗೆ ಕ್ಷೇತ್ರದ ಗ್ರಾಮದ ಹೆಸರೇ ಗೊತ್ತಿಲ್ಲ. ಯಾವ ಗ್ರಾಮದಲ್ಲಿ ಏನು ತೊಂದರೆ ಇದೆ ಎಂಬುವುದು ಅವರಿಗೆ ಮನವರಿಕೆ ಮಾಡುವ ನಾಯಕರು ಕೂಡ ಇಲ್ಲ. ಇಂತಹ ಸನ್ನಿವೇಶದಲ್ಲಿ ಗ್ರಾಮಗಳ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ನಾಲ್ಕು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದ್ದು, ಮುಖಂಡರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದವರ ಜೊತೆ ಬೆರೆತು ಕೆಲಸ ಮಾಡಬೇಕು. ಸಂವಿಧಾನ ವಿರೋಧಿ ಎಂದು ಪ್ರಧಾನಿ ಮೋದಿ ಅವರನ್ನು ಬಿಂಬಿಸಿದ್ದರಿಂದ ಸ್ವಲ್ಪ ಎಡವಟ್ಟಾಗಿದೆ. ಆದ್ದರಿಂದ, ಪರಿಶಿಷ್ಟ ಜಾತಿಯವರನ್ನು ಓಲೈಸಿಕೊಂಡು ಬಿಜೆಪಿಗೆ ಮತ ಬರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲ್ಲಬೇಕಾದರೆ ಗ್ರಾಮಗಳ ಹಾಗೂ ಜನರ ಸಮಸ್ಯೆ ನಿವಾರಿಸುವ ಕೆಲಸ ಮಾಡಿ. ತಕ್ಷಣ ಸ್ಪಂದಿಸಿ, ಅವರಿಗೆ ಅನುಕೂಲ ಮಾಡಿಕೊಡಿ. ಆಗ ತಮ್ಮ ಮೇಲೆ ವಿಶ್ವಾಸ ಬರುತ್ತದೆ. ನಂತರ ತಾವು ನನಗೆ ಮತ ಕೊಡಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಕಾಂಗ್ರೆಸ್ ಗ್ರಾಮಗಳಲ್ಲಿ ಗೆಲ್ಲಲು ಬಿಡಬಾರದು. ವಿಧಾನಸಭೆಯಲ್ಲಿ ಪಡೆದಿರುವ ಮತಗಳ ಸಂಖ್ಯೆಯನ್ನು ಕ್ಷೀಣಿಸುವ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಗೆದ್ದು ಬಂದಿರುವ ಕಾಂಗ್ರೆಸ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದರು.
ಮುಖಂಡ ಬೆಗ್ಲಿ ಸೂರ್ಯ ಪ್ರಕಾಶ್, ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೂಲೂರು ಅಂಜನಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ ರಾಮಚಂದ್ರಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ತಂಬಳ್ಳಿ ಮುನಿಯಪ್ಪ, ಬೀಚಗೊಂಡಹಳ್ಳಿ ದಿಲೀಪ್, ಕಾರ್ಯಕರ್ತರು ಇದ್ದರು.
ಉಸಿರಿರೋವರೆಗೆ ಕ್ಷೇತ್ರ ಬಿಡಲ್ಲ
ಎರಡು ಬಾರಿ ಗೆಲ್ಲಿಸಿರುವ ಜನರ ಪ್ರೀತಿ ವಿಶ್ವಾಸ ಸಂಪಾದನೆ ಮಾಡಿರುವ ನಾನು ಉಸಿರಿರೋವರೆಗೆ ಕೋಲಾರ ವಿಧಾನಸಭಾ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ಸುಮ್ಮನೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ವರ್ತೂರು ಪ್ರಕಾಶ್ ಮನವಿ ಮಾಡಿದರು. 50 ಸಾವಿರ ಮತಗಳು ಕಟ್ಟಿಟ್ಟ ಬುತ್ತಿಯಾಗಿರುವ ಈ ಕ್ಷೇತ್ರವನ್ನು ಬಿಟ್ಟು ಎಲ್ಲೊ ಹೋಗಿ ಈ ರೀತಿ ಜನರ ಪ್ರೀತಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ಇದೇ ವಿಶ್ವಾಸ ನನ್ನ ಮೇಲೆ ಇಟ್ಟರೆ ಮುಂದೆ ಶಾಸಕನಾಗುವುದು ಶತಸಿದ್ಧ ಎಂದರು.
ಮೈತ್ರಿಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಓಕೆ
ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಸಿಎಂಆರ್ ಶ್ರೀನಾಥ್ ಆಗಬಹುದು ಅಥವಾ ಬಿಜೆಪಿಯಿಂದ ನಾನೇ ಸ್ಪರ್ಧೆ ಮಾಡಬಹುದು. ಯಾರೇ ಅಭ್ಯರ್ಥಿಯಾದರೂ ಒಮ್ಮತದಿಂದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಮಾಡುತ್ತೇವೆ ಎಂದು ವರ್ತೂರು ಪ್ರಕಾಶ್ ಹೇಳಿದರು. ಜೆಡಿಎಸ್ ಜತೆ ಮೈತ್ರಿ ಮುಂದುವರಿಯುತ್ತದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಾಗ ಮಾತ್ರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.