
ಕೋಲಾರ: ವ್ಯಕ್ತಿ ತನ್ನ ಶಿಕ್ಷಣಕ್ಕಾಗಿ ಹಳ್ಳಿ ತೊರೆಯುತ್ತಾನೆ, ತದ ನಂತರದಲ್ಲಿ ಉದ್ಯೋಗ ದೊರೆತ ನಂತರ ಹಳ್ಳಿ ಮರೆಯುತ್ತಾನೆ. ಬೇರಿನ ಜೊತೆ ಸಂಬಂಧ ಕಳೆದುಕೊಂಡ ರೀತಿ ಹಳ್ಳಿಗಳ ಜೊತೆ ಸಂಪರ್ಕ ಕಳೆದುಕೊಂಡು, ಕೊನೆಗೆ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಯುವ ಸಾಹಿತಿ ಗೋಪಿನಾಥ್ ಕರವಿ ಅವರ ‘ಗ್ರಾಮದ ಕನಸು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯಾರು ಹಳ್ಳಿಗಳ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೋ ಅಂಥವರಲ್ಲಿ ಮಾತ್ರವೇ ಸಂಬಂಧ ಹಾಗೂ ಮನುಷ್ಯತ್ವ ಉಳಿದಿರಲು ಸಾಧ್ಯ ಎಂದರು,
ಗ್ರಾಮದ ಅಭಿವೃದ್ಧಿಯ ಬಗ್ಗೆ ಕಂಡಂತಹ ಕನಸುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಗ್ರಾಮದ ಕನಸು ಪುಸ್ತಕವನ್ನು ತನ್ನ ತಾಯಿಗೆ ಅರ್ಪಣೆ ಮಾಡಿ ಲೋಕಾರ್ಪಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸಿದರು.
ಜನ, ಪ್ರಗತಿ ಅಥವಾ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಗರಗಳ ಕಡೆ ವಾಲುತ್ತಿದ್ದು, ಹಳ್ಳಿಗಳಲ್ಲಿ ವಾಸ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಈ ಕಾರಣಗಳಿಗಾಗಿ ಹಳ್ಳಿಗಳು ಸಂಪೂರ್ಣ ಕಡೆಗಣಿಸಲ್ಪಡುತ್ತಿವೆ. ಉನ್ನತ ಹುದ್ದೆಯಲ್ಲಿ ಇರುವ ಕೆಲವರು ಹಳ್ಳಿಗಳ ಕುರಿತು ಮಾತನಾಡುತ್ತಾರೆ. ಬದಲಾಗಿ ಹಳ್ಳಿಗಳ ಚಿತ್ರಣವನ್ನು ತಿಳಿಯಲು, ಬೇರಿನ ಸಂಬಂಧದ ರೀತಿಯಲ್ಲಿ, ಹಳ್ಳಿಗರ ಜೊತೆ ಒಡನಾಡಿಗಳಾದಾಗ ಮಾತ್ರವೇ ಗ್ರಾಮಗಳ ಕಷ್ಟ ಸುಖ ಹಾಗೂ ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯನಿಗೆ ಮೂಲಭೂತವಾಗಿ ಬೇಕಿರುವುದು ಬಟ್ಟೆ, ಆಹಾರ, ಸೂರು. ಇದನ್ನು ಮೀರಿ ತನ್ನ ವೈಭೋಗದ ಜೀವನಕ್ಕೆ ಮಾರು ಹೋಗುತ್ತಿರುವುದರಿಂದ ಹಳ್ಳಿಯಲ್ಲಿರುವ ಮನೆ, ಆಸ್ತಿ ಎಲ್ಲವನ್ನು ಮಾರಿ, ನಗರಗಳ ಸುಖಕರ ಜೀವನಕ್ಕೆ ಮೊರೆ ಹೋಗುತ್ತಿರುವುದರಿಂದ ಹಳ್ಳಿಗಳು ಇಂದು ನಿರ್ಲಕ್ಷ್ಯಕ್ಕೀಡಾಗುತ್ತಿವೆ. ಇವೆಲ್ಲವೂ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಸ್ವಯಂಕೃತ ಅಪರಾಧಗಳು ಎಂದರು.
ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಯುವಕ ತನ್ನ ಗ್ರಾಮದ ಅಭಿವೃದ್ಧಿಯ ಬಗ್ಗೆ ತನ್ನದೇ ಆದ ಪ್ರೀತಿ, ಆಸಕ್ತಿಯಿಂದ ಸಂಶೋಧನೆ ಮಾಡಿ ಈ ಪುಸ್ತಕ ಬರೆದಿದ್ದಾರೆ ಎಂದು ನುಡಿದರು.
ಪುಸ್ತಕದ ಕುರಿತು ಮಾತನಾಡಿದ ಉಪನ್ಯಾಸಕ ಶಿವಪ್ಪ ಅರಿವು, ‘ಗೋಪಿನಾಥ್ ಕರವಿ ಹಲವು ಸಾಹಿತಿಗಳ, ಹೋರಾಟಗಾರರ ಸಂಪರ್ಕ ಹೊಂದಿರುವ ಯುವಕ. ತನ್ನ ಹಳ್ಳಿಯ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಾ ರಾಜ್ಯದ ಎಲ್ಲ ಹಳ್ಳಿಗಳೂ ಮಾದರಿ ಗ್ರಾಮಗಳಾಗಬೇಕು ಎಂಬ ಆಶಯ ಇಟ್ಟುಕೊಂಡು ಈ ಕೃತಿ ರಚಿಸಿದ್ದಾರೆ. ಒಂದು ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಅಭಿವೃದ್ಧಿ, ಜಾಗೃತಿ, ಸಂಘ ಸಂಸ್ಥೆಗಳು ಹಾಗೂ ಪೂರಕ ವ್ಯವಸ್ಥೆ ಹೀಗೆ ಒಂದು ಗ್ರಾಮ ಸಮಗ್ರಾಭಿವೃದ್ಧಿಯಾಗಬೇಕೆಂದರೆ ಏನೆಲ್ಲಾ ಮಾಡಬಹುದು ಎಂಬ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಹಳ್ಳಿ ಮತ್ತು ಹಳ್ಳಿ ಜನರ ಬಗ್ಗೆ ಚಿಂತಿಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಗೋಪಾಲಗೌಡ ಮಾತನಾಡಿ, ‘ಎಷ್ಟು ದೇಶಗಳು ಸುತ್ತಿದ್ದರೂ ನಮ್ಮೂರೇ ನಮಗೆ ಮೇಲು ಎಂಬ ಡಾ.ರಾಜ್‌ಕುಮಾರ್ ಹಾಡಿನಂತೆ ಪಟ್ಟಣದಲ್ಲಿ ಬೆಳೆದಿದ್ದರೂ ಹಳ್ಳಿ ಬಗ್ಗೆ ಚಿಂತಿಸುವ, ಕನಸು ಕಂಡಿರುವ ಯುವ ಚಿಂತಕ ಗೋಪಿನಾಥ್ ಕರವಿ ಅವರ ಗ್ರಾಮದ ಕನಸು ಹೊತ್ತಿಗೆ ಪ್ರಕಟಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜನಪ್ರಕಾಶನದ ರಾಜಶೇಖರ್ ಮೂರ್ತಿ, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಎಚ್.ಎ.ಪುರುಷೋತ್ತಮರಾವ್, ಮಂಜು ಕನ್ನಿಕ, ಶಾಂತಮ್ಮ ಗಮನ, ವಾರಿಧಿ ಮಂಜುನಾಥ ರೆಡ್ಡಿ, ವಾಸುದೇವರೆಡ್ಡಿ, ಕವಿ ಸತ್ಯಮೂರ್ತಿ ಗೂಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.