ADVERTISEMENT

ಗಣರಾಜ್ಯೋತ್ಸವ ಪರೇಡ್‌: ದೆಹಲಿ ತೋರಿಸಿದ ‘ಕಸ’ದ ಕೆಲಸ!

ಮೊದಲ ಬಾರಿಗೆ ವಿಮಾನ ಏರಿದ ತ್ಯಾಜ್ಯ ಸಂಗ್ರಹ ವಾಹನ ಚಾಲಕಿಯರು

ಕೆ.ಓಂಕಾರ ಮೂರ್ತಿ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
<div class="paragraphs"><p>ಶಶಿಕಲಾ, ಮಂಜುಳಾ</p></div>

ಶಶಿಕಲಾ, ಮಂಜುಳಾ

   

ಕೋಲಾರ: ‘ಕಸದವರು ಎಂದು ಜನರು ನಮ್ಮನ್ನು ಹೀಯಾಳಿಸುತ್ತಾರೆ. ಮನೆ ಬಳಿ ಕಸ ಎತ್ತಲು ಹೋದಾಗ ಮಕ್ಕಳು ಕೂಡ ಕಸದವರು ಬಂದರು ಎನ್ನುತ್ತಾರೆ. ಇದರಿಂದ ಬೇಸರವಾಗಿದ್ದು ನಿಜ. ಈಗ ಇದೇ ಕೆಲಸದಿಂದಾಗಿ ದೆಹಲಿಗೆ ಹೋಗಿ ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲು ಅವಕಾಶ ಸಿಕ್ಕಿತು. ಮೊದಲ ಬಾರಿ ವಿಮಾನವೇರಿದವು. ಕೆಂಪು ಕೋಟೆ, ಗಾಂಧಿ ಸಮಾಧಿ ನೋಡಿದೆವು. ಈಗ ಊರಿನವರು ನಮ್ಮ ಸಾಧನೆ ಕಂಡು ಹೆಮ್ಮೆಪಡುತ್ತಿದ್ದಾರೆ. ನಮ್ಮ ಕೆಲಸದ ಬಗ್ಗೆ ನಮಗೆ ಈಗ ಹೆಮ್ಮೆ ಅನಿಸುತ್ತಿದೆ’

– ನವಹದೆಲಿಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೋಲಾರ ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕಸ ಸಂಗ್ರಹ ವಾಹನ (ಸ್ವಚ್ಛತಾ ವಾಹಿನಿ) ಚಾಲಕಿ ಮಂಜುಳಾ, ಸಹಾಯಕಿ ಶಶಿಕಲಾ ಮನದಾಳದ ಮಾತಿದು.

ADVERTISEMENT

‘ವಿಮಾನ ಹತ್ತಿದ್ದೂ ಮೊದಲು, ದೆಹಲಿ ನೋಡಿದ್ದೂ ಮೊದಲು. ಬಹಳ ಹತ್ತಿರದಿಂದ ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಅವಕಾಶ ದೊರೆಯಿತು. ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದೆವು. ಕೆಂಪು ಕೋಟೆ, ಇಂಡಿಯಾ ಗೇಟ್‌, ಲೋಟಸ್‌ ಟೆಂಪಲ್‌, ರಾಜ್‌ ಘಾಟ್‌ (ಗಾಂಧಿ ಸಮಾಧಿ), ಅಕ್ಷರಧಾಮ ದೇಗುಲ ವೀಕ್ಷಿಸಿದೆವು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘‌ನಮ್ಮ ಕೆಲಸದ ಬಗ್ಗೆ ನಮಗೆ ಯಾವತ್ತೂ ಬೇಸರವಾಗಿಲ್ಲ. ಎರಡೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ಪ್ರೋತ್ಸಾಹ ಮರೆಯುವಂತಿಲ್ಲ’ ಎಂದು ಮಂಜುಳಾ ಹೇಳುತ್ತಾರೆ.

‘ಆರಂಭದಲ್ಲಿ ಈ ಕೆಲಸವೇ ಬೇಡ ಅಂದುಕೊಂಡಿದ್ದೆ. ಏಕೆಂದರೆ ಎಲ್ಲರೂ ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದರು. ಈಗ ಕುಟುಂಬದವರು, ಊರಿನವರು ಖುಷಿಪಡುತ್ತಿದ್ದಾರೆ. ವಿಶೇಷ ಗೌರವ ತೋರುತ್ತಿದ್ದಾರೆ’ ಎನ್ನುತ್ತಾರೆ ಶಶಿಕಲಾ.

‘ರಸ್ತೇಲಿ ಮೈಕ್‌ ಹಾಕಿಕೊಂಡು ಮನೆ, ಮನೆಗೆ ಸ್ವಚ್ಛತಾ ವಾಹನದೊಂದಿಗೆ ಹೋಗಿ ಕಸ ಸಂಗ್ರಹಿಸುತ್ತೇವೆ. ಎರಡೂವರೆ ವರ್ಷದಿಂದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ವಾಹನ ಚಾಲನೆ ಕಲಿತಿದ್ದೇನೆ’ ಎಂದರು.

ಸ್ವಚ್ಛ ಭಾರತ್ ಯೋಜನೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದವರನ್ನು ಗಣ ರಾಜ್ಯೋತ್ಸವಕ್ಕೆ ಆಯ್ಕೆ ಮಾಡಲಾಗಿತ್ತು.

ಸಚಿವರೊಂದಿಗೆ ಸಂವಾದ

ಕರ್ನಾಟಕದ ಪ್ರತಿನಿಧಿಯಾಗಿ ಮಂಜುಳಾ ಅವರಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು.

‘ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು, ಶೌಚಾಲಯ ನಿರ್ಮಾಣ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಕುರಿತು ಮಾಹಿತಿ ಪಡೆದರು. ಸ್ವಚ್ಛತಾ ವಾಹನ ಚಾಲಕಿಯರ ಬಗ್ಗೆ ಖುಷಿ, ಹೆಮ್ಮೆ ವ್ಯಕ್ತಪಡಿಸಿ ಕೆಲಸ ಹೇಗೆ ಮಾಡುತ್ತೀರಿ ಎಂಬುದನ್ನು ಖುದ್ದಾಗಿ ಬಂದು ವೀಕ್ಷಿಸುವುದಾಗಿ ಹೇಳಿದರು’ ಎಂದು ಮಂಜುಳಾ ವಿವರಿಸಿದರು.

ಜೀವನದಲ್ಲಿ ಮರೆಯಲಾಗದ ಅನುಭವವಿದು. ಕೋಲಾರದ ಹಳ್ಳಿಯೊಂದರಲ್ಲಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ನಮಗೆ ಇಂಥ ಅವಕಾಶ ಲಭಿಸಿದ್ದು ಸೌಭಾಗ್ಯವೇ ಸರಿ.
-ಮಂಜುಳಾ, ಸ್ವಚ್ಛತಾ ವಾಹನ ಚಾಲಕಿ, ಬೆಗ್ಲಿಹೊಸಹಳ್ಳಿ, ಕೋಲಾರ
ಕಸ ಸಂಗ್ರಹಿಸುವವರೂ ಮನುಷ್ಯರೇ. ತಿರಸ್ಕಾರದಿಂದ ನೋಡಿದರೆ ಕೆಲಸದ ಬಗ್ಗೆ ಬೇಸರ ವಾಗುತ್ತದೆ. ಗೌರವದಿಂದ ಕಂಡರೆ ಕೆಲಸದ ಬಗ್ಗೆ ಹೆಮ್ಮೆ ಎನಿಸುತ್ತದೆ.
-ಶಶಿಕಲಾ, ಸ್ವಚ್ಛತಾ ಸಹಾಯಕಿ, ಬೆಗ್ಲಿಹೊಸಹಳ್ಳಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.